ಮೀನುಗಾರರ ಸಂಕಷ್ಟ ನಿಧಿ 8 ಲಕ್ಷ ರು.ಗೆ ಏರಿಕೆ: ಚೇತನ್‌ ಬೆಂಗ್ರೆ

KannadaprabhaNewsNetwork | Published : Feb 23, 2024 1:45 AM

ಸಾರಾಂಶ

ಈ ಹಿಂದೆ ಸಂಕಷ್ಟನಿಧಿಯಡಿ ತಲಾ 2 ಲಕ್ಷ ರು. ನೀಡಲಾಗುತ್ತಿದ್ದರೆ, ಬಳಿಕ ಅದನ್ನು 6 ಲಕ್ಷ ರು.ಗೆ ಹೆಚ್ಚಿಸಲಾಗಿದ್ದು, ಇದೀಗ ಅದನ್ನು 8 ಲಕ್ಷ ರು.ಗೆ ಏರಿಕೆ ಮಾಡಲು ಬೆಂಗಳೂರಿನ ಸಭೆಯಲ್ಲಿ ನಿರ್ಧರಿಸಿ ಸಂಬಂಧ ಪಟ್ಟ ಇಲಾಖೆಯಿಂದ ಅನುಮೋದನೆ ನೀಡಲಾಗಿದೆ ಎಂದು ಚೇತನ್‌ ಬೆಂಗ್ರೆ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ರಾಜ್ಯದ ಮೀನುಗಾರರ ಸಂಕಷ್ಟನಿಧಿ ಮೊತ್ತವನ್ನು 8 ಲಕ್ಷ ರು.ಗಳಿಗೆ ಏರಿಕೆ ಮಾಡಲು ಇತ್ತೀಚೆಗೆ ಮೀನುಗಾರಿಕಾ ಸಚಿವ ಮಾಂಕಾಳ ವೈದ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಅನುಮೋದನೆ ದೊರಕಿದೆ ಎಂದು ರಾಜ್ಯ ಮೀನುಗಾರರ ಸಂಕಷ್ಟ ಪರಿಹಾರ ನಿಧಿ ಸಮಿತಿ ಸದಸ್ಯ ಚೇತನ್‌ ಬೆಂಗ್ರೆ ತಿಳಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೆಪಿಸಿಸಿ ಹಿಂದುಳಿದ ವಿಭಾಗದ ಉಪಾಧ್ಯಕ್ಷರೂ ಆಗಿರುವ ಅವರು, ಈ ಹಿಂದೆ ಸಂಕಷ್ಟನಿಧಿಯಡಿ ತಲಾ 2 ಲಕ್ಷ ರು. ನೀಡಲಾಗುತ್ತಿದ್ದರೆ, ಬಳಿಕ ಅದನ್ನು 6 ಲಕ್ಷ ರು.ಗೆ ಹೆಚ್ಚಿಸಲಾಗಿದ್ದು, ಇದೀಗ ಅದನ್ನು 8 ಲಕ್ಷ ರು.ಗೆ ಏರಿಕೆ ಮಾಡಲು ಬೆಂಗಳೂರಿನ ಸಭೆಯಲ್ಲಿ ನಿರ್ಧರಿಸಿ ಸಂಬಂಧ ಪಟ್ಟ ಇಲಾಖೆಯಿಂದ ಅನುಮೋದನೆ ನೀಡಲಾಗಿದೆ ಎಂದರು.

ರಾಜ್ಯ ಮೀನುಗಾರರ ಸಂಕಷ್ಟ ಪರಿಹಾರ ನಿಧಿ ಸಮಿತಿಯನ್ನು ಪುನಾರಚಿಸಿದ್ದು, ಮೀನುಗಾರರ ಶ್ರೇಯೋಭಿವೃದ್ಧಿಗೆ ಮೀನುಗಾರಿಕೆ ಸಚಿವ ಮಾಂಕಾಳ ವೈದ್ಯ ಅಧ್ಯಕ್ಷತೆಯಲ್ಲಿ ವಿವಿಧ ಯೋಜನೆ ರೂಪಿಸಲಾಗಿದೆ. ಸಮಿತಿಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನುಗಾರರ ಮಹಾಮಂಡಲ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಜಾರಿ ಮೀನುಗಾರರ ಮಹಾಮಂಡಲದ ಅಧ್ಯಕ್ಷರು, ಪ್ರತಿನಿಧಿಗಳನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಬೆಂಗಳೂರಿನಲ್ಲಿ ಬುಧವಾರ ಸಭೆ ನಡೆಸಿದ್ದು, ಇಲಾಖೆಯ ಪ್ರಸ್ತಾವನೆ ಜತೆ ಸದಸ್ಯರು ಕೆಲವು ಸಲಹೆ ನೀಡಿದ್ದಾರೆ ಎಂದವರು ಹೇಳಿದರು.ಸಬ್ಸಿಡಿ ಸೀಮೆಎಣ್ಣೆ 10,000 ಲೀಟರ್‌ಗೆ ಏರಿಕೆ:

ಪ್ರಸಕ್ತ ಸಣ್ಣ ದೋಣಿ ಮೀನುಗಾರರಿಗೆ ವಾರ್ಷಿಕವಾಗಿ ಸಿಗುವ ಸಬ್ಸಿಡಿ ದರದ ಸೀಮೆಎಣ್ಣೆಯನ್ನು 9 ಸಾವಿರ ಲೀ. ನಿಂದ 10 ಸಾವಿರ ಲೀಟರ್‌ಗೆ ಏರಿಕೆ ಮಾಡಲಾಗಿದೆ. ಹಿಂದೆ ತಿಂಗಳಿಗೆ ನಿಗದಿತವಾಗಿ ಸಿಗುತ್ತಿದ್ದ ಈ ಸಬ್ಸಿಡಿ ದರದ ಸೀಮೆಎಣ್ಣೆಯನ್ನು ತಲಾ ಐದು ತಿಂಗಳಿಗೊಮ್ಮೆ 5,000 ಲೀಟರ್‌ನಂತೆ ನೀಡಲು ಕ್ರಮ ವಹಿಸಲು ಸೂಚಿಸಲಾಗಿದೆ. ಹಿಂದೆ ಮೀನುಗಾರರು ನಿಗದಿತ ಸೀಮೆಎಣ್ಣೆ ಆ ತಿಂಗಳಲ್ಲಿ ಪಡೆಯದಿದ್ದರೆ ಅದನ್ನು ಮುಂದಿನ ತಿಂಗಳಿಗೆ ನೀಡುವ ವ್ಯವಸ್ಥೆ ಇರಲಿಲ್ಲ. ಈಗ ಐದು ತಿಂಗಳ ವರೆಗೆ ಅದನ್ನು ವಿಸ್ತರಿಸಲಾಗಿದೆ. ಮೀನುಗಾರರ ಮಕ್ಕಳು ಮೀನುಗಾರಿಕೆ ಕಾಲೇಜಿನಲ್ಲಿ ಶಿಕ್ಷಣ ಪಡೆಯಲು ಕೃಷಿ ಪ್ರಮಾಣಪತ್ರ ಸಿಗದೆ ಕಷ್ಟಪಡುತ್ತಿದ್ದು, ಈ ಬಗ್ಗೆಯೂ ಚರ್ಚಿಸಿದ್ದು ಕ್ರಮದ ಭರವಸೆ ದೊರಕಿದೆ ಎಂದರು.

ಮಾಜಿ ಉಪಮೇಯರ್‌ ಕವಿತಾ ವಾಸು, ಪ್ರವಿತಾ ಕರ್ಕೇರ, ರಾಜ್‌ಕುಮಾರ್‌ ಕೋಟ್ಯಾನ್‌, ಮಿಥುನ್‌ ಚಂದನ್‌, ಪ್ರಸಾದ್‌ ಮೆಂಡನ್‌, ಆಲ್ಬರ್ಟ್‌ ಆಗಸ್ಟಿನ್‌ ಇದ್ದರು.

Share this article