ಹುಬ್ಬಳ್ಳಿ, ಬೆಳಗಾವಿಯಲ್ಲಿ ಫ್ಲ್ಯಾಟ್‌ ಫ್ಯಾಕ್ಟರಿ

KannadaprabhaNewsNetwork | Published : Aug 30, 2024 1:06 AM

ಸಾರಾಂಶ

ಸಾಕಷ್ಟು ಪ್ರತಿಭೆಗಳನ್ನು ಹೊಂದಿರುವ ಹುಬ್ಬಳ್ಳಿ-ಧಾರವಾಡ, ಬೆಳಗಾವಿಯಲ್ಲಿ ಉದ್ಯಮಶೀಲತೆ ಬೆಳೆಸಲು ಅತ್ಯಂತ ಸೂಕ್ತ ಸ್ಥಳ. ಇದಕ್ಕೆ ಪೂರಕವಾಗಿ ಎಂಜಿನಿಯರಿಂಗ್ ಶಿಕ್ಷಣ, ಸಾರಿಗೆ ವ್ಯವಸ್ಥೆ, ವಿದ್ಯುತ್ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳಿವೆ.

ಹುಬ್ಬಳ್ಳಿ:

ನವೋದ್ಯಮಿಗಳನ್ನು ಪ್ರೋತ್ಸಾಹಿಸಲು ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಚೀನಾ ಮಾದರಿಯಲ್ಲಿ ಸ್ಟಾರ್ಟ್‌ಅಪ್ ಸೆಂಟರ್ (ಫ್ಲ್ಯಾಟ್‌ ಫ್ಯಾಕ್ಟರಿ) ನಿರ್ಮಿಸಲಾಗುವುದು ಎಂದು ಕಿಯೋನಿಕ್ಸ್ ಅಧ್ಯಕ್ಷ, ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ಗುರುವಾರ ಇಲ್ಲಿ ನಡೆದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಟೆಕ್ಸೆಲರೇಶನ್ ಬಿಯಾಂಡ್ ಬೆಂಗಳೂರು ಸಮಾರೋಪದಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ತ್ರಿವಳಿ ನಗರಗಳು ವಿಶೇಷ ವಲಯವಾಗಿದ್ದು, ಮೇಲಾಗಿ ಐತಿಹಾಸಿಕ ಹಿನ್ನೆಲೆ ಹೊಂದಿವೆ. ಇಲ್ಲಿ ಉದ್ಯಮಶೀಲತೆ ಬೆಳೆಸಲು ಅತ್ಯಂತ ಸೂಕ್ತ ಸ್ಥಳವಾಗಿವೆ ಎಂದರು.

ಎಲೆಕ್ಟ್ರಾನಿಕ್ಸ್ ವಸ್ತುಗಳ ಉತ್ಪಾದನೆಗೆ ಅವಕಾಶ ಮಾಡಿಕೊಡಬೇಕೆಂದು ನವೋದ್ಯಮಿಗಳಿಂದ ಬೇಡಿಕೆ ಇದೆ. ಅವರ ಆಶಯದಂತೆ ಹುಬ್ಬಳ್ಳಿಯಲ್ಲಿ 2 ಎಕರೆ ಹಾಗೂ ಬೆಳಗಾವಿಯಲ್ಲಿ 5 ಎಕರೆ ಪ್ರದೇಶದಲ್ಲಿ ಚೀನಾ ಮಾದರಿಯಲ್ಲಿ ನಾಲ್ಕೈದು ಅಂತಸ್ತಿನ ಕಟ್ಟಡ ನಿರ್ಮಿಸಿ ಕೊಡಲಾಗುವುದು. ವಿಶೇಷವಾಗಿ ಡ್ರೋಣ್ ಟೆಕ್ನಾಲಜಿ, ಬ್ಯಾಟರಿ ಟೆಕ್ನಾಲಜಿ ಹಾಗೂ ಎಲೆಕ್ಟ್ರಾನ್ಸಿಕ್ಸ್ ಸೆಮಿಕಂಡಕ್ಟರ್ ಡಿಸೈನ್ ಮ್ಯಾನ್ಯುಫ್ಯಾಕ್ಚರಿಂಗ್ ವಿಭಾಗಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.

ರಾಜ್ಯದಲ್ಲಿ ಎಲೆಕ್ಟ್ರಾನಿಕ್ಸ್‌ಗೆ ಸಂಬಂಧಿಸಿದ ₹ 3.70 ಲಕ್ಷ ಕೋಟಿ ವಹಿವಾಟನ್ನು ₹ 5 ಲಕ್ಷ ಕೋಟಿಗೆ ಹೆಚ್ಚಿಸುವ ಗುರಿ ಹೊಂದಿದ್ದು, ಈ ದಿಸೆಯಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ಪ್ರೋತ್ಸಾಹಿಸಲಾಗುತ್ತಿದೆ. ಅವುಗಳಿಗೆ ಬೇಕಾಗುವ ಎಲ್ಲ ಮೂಲಸೌಲಭ್ಯಗಳನ್ನು ಕಿಯೋನಿಕ್ಸ್ ಒದಗಿಸಲಿದೆ ಎಂದು ಭರವಸೆ ನೀಡಿದರು.

ಟೆಕ್ನಾಲಜಿ ಹಬ್ ಆಗಿ ಹೊರ ಹೊಮ್ಮಲು ಎಲ್ಲ ಸಾಮರ್ಥ್ಯ, ಪ್ರತಿಭೆಗಳು ಹಾಗೂ ಮೂಲಸೌಕರ್ಯಗಳು ಹುಬ್ಬಳ್ಳಿ-ಧಾರವಾಡದಲ್ಲಿವೆ. ಸಾಫ್ಟ್‌ವೇರ್‌ದಲ್ಲಿ ಸಿಲಿಕಾನ್ ವ್ಯಾಲಿ ಎಂದು ಹೆಸರುವಾಸಿಯಾದ ಬೆಂಗಳೂರಿನಂತೆ ಇತರ ನಗರಗಳನ್ನು ಹಾರ್ಡ್‌ವೇರ್ ಅಭಿವೃದ್ಧಿಪಡಿಸಿ ಎಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನೆ ಕೇಂದ್ರಗಳನ್ನಾಗಿ ಬೆಳೆಸಲು ಸರ್ಕಾರ ಬದ್ಧತೆ ಹೊಂದಿದೆ. ಬೇರೆ ಬೇರೆ ನಗರಗಳಲ್ಲಿ 200 ಎಕರೆ ಪ್ರದೇಶದಲ್ಲಿ ಟ್ರಾನ್ಸಿಮಿಷನ್ ಟೆಕ್ನಾಲಜಿ ಪಾರ್ಕ್ ಹಾಗೂ 300 ಎಕರೆಯಲ್ಲಿ ಎಲೆಕ್ಟ್ರಾನಿಕ್ ಸೆಮಿ ಕಂಡಕ್ಟರ್ ವಿನ್ಯಾಸ ಉತ್ಪಾದನೆಗೆ ವಿಶೇಷ ಆದ್ಯತೆ ನೀಡಿದೆ. 2030ರ ವೇಳೆಗೆ ಶೇ. 40ರಷ್ಟು ಎಲೆಕ್ಟ್ರಿಕ್ ಬ್ಯಾಟರಿ ಬಳಕೆಯಾಗಲಿದೆ ಎಂಬ ನಿರೀಕ್ಷೆ ಇದೆ. ಹಾಗಾಗಿ ಬ್ಯಾಟರಿ ಟೆಕ್ನಾಲಜಿ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ ಎಂದರು.

ಸಾಕಷ್ಟು ಪ್ರತಿಭೆಗಳನ್ನು ಹೊಂದಿರುವ ಹುಬ್ಬಳ್ಳಿ-ಧಾರವಾಡ, ಬೆಳಗಾವಿಯಲ್ಲಿ ಉದ್ಯಮಶೀಲತೆ ಬೆಳೆಸಲು ಅತ್ಯಂತ ಸೂಕ್ತ ಸ್ಥಳ. ಇದಕ್ಕೆ ಪೂರಕವಾಗಿ ಎಂಜಿನಿಯರಿಂಗ್ ಶಿಕ್ಷಣ, ಸಾರಿಗೆ ವ್ಯವಸ್ಥೆ, ವಿದ್ಯುತ್ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳಿವೆ. ಇವುಗಳನ್ನು ಸಮರ್ಥವಾಗಿ ಬಳಸಿಕೊಂಡು ಉದ್ಯಮ ಬೆಳಣಿಗೆಗೆ ವಾತಾವರಣ ನಿರ್ಮಿಸಲಾಗುತ್ತದೆ ಎಂದರು.

ಐಟಿ, ಬಿಟಿ ಇಲಾಖೆಯ ನಿರ್ದೇಶಕ ದರ್ಶನ್ ಎಚ್.ವಿ, ಮಾತನಾಡಿ, ಕೈಗಾರಿಕೋದ್ಯಮ ಬೆಳವಣಿಗೆಗೆ ರಾಜ್ಯದಲ್ಲಿ ಸರ್ಕಾರ ಸೌಲಭ್ಯ ಪೂರಕೈದಾರನಾಗಿ ಕೆಲಸ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ಕೈಗಾರಿಕಾ ನೀತಿಗಳನ್ನು ಜಾರಿಗೆ ತರಲಾಗಿದೆ. ಬೆಂಗಳೂರು ಆಚೆಗೂ ಉದ್ಯಮ ಬೆಳವಣಿಗೆಗೆ ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಸ್ಟಾರ್ಟ್ ಅಪ್‌ಗಳಿಗೆ ಉತ್ತೇಜನ ನೀಡುವುದು ಹಾಗೂ ಬೌದ್ಧಿಕ ಆಸ್ತಿ ಹಕ್ಕು ರಕ್ಷಣೆ ಸೇರಿದಂತೆ ಹಲವು ಗುರುತರ ಹೆಜ್ಜೆಗಳನ್ನು ಸರ್ಕಾರ ಇಟ್ಟಿದೆ ಎಂದು ಹೇಳಿದರು.

ಕೆಡಿಇಎಂ ಸಿಇಒ ಸಂಜೀವ್ ಗುಪ್ತಾ ಮಾತನಾಡಿ, ಬೆಂಗಳೂರಿನಾಚೆಗಿನ ನಗರಗಳಲ್ಲಿ 6 ಕ್ಲಸ್ಟರ್ ಮಾಡುವ ಉದ್ದೇಶವಿದೆ. ಈಗಾಗಲೇ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಕಾರ್ಯಪ್ರವೃತ್ತವಾಗಿವೆ ಎಂದರು.

ಡಾ. ವೀರಪ್ಪನ್, ಬೃಂದಲಾ ಮಲ್ಲಪ್ಪ, ಡಾ. ಪ್ರದೀಪ್ ಠಾಕರೆ, ವೆಂಕಟೇಶ ಪಾಟೀಲ, ರಬೀಂದ್ರ ಶ್ರೀಕಾಂತನ್ ಸೇರಿದಂತೆ ಇತರರು ಇದ್ದರು.

Share this article