ಕೆರಗೋಡಲ್ಲಿ ಹನುಮಧ್ವಜ ಇಂದು ಸಂಜೆಯೊಳಗೇ ಹಾರಿಸಿ: ಬಿಜೆಪಿ

KannadaprabhaNewsNetwork | Published : Jan 30, 2024 2:02 AM

ಸಾರಾಂಶ

ಮಂಡ್ಯದ ಕೆರೆಗೋಡು ಗ್ರಾಮದ ರಾಮ ದೇವಸ್ಥಾನದ ಮುಂಭಾಗದಲ್ಲಿ ಗ್ರಾಮಸ್ಥರು ಕಟ್ಟಿದ ಹನುಮಧ್ವಜವನ್ನು ಕೂಡಲೇ ಅದೇ ಜಾಗದಲ್ಲಿ ಹಾರಿಸಬೇಕು. ಇಂದು ಸಂಜೆಯೊಳಗೆ ಹನುಮ ಧ್ವಜವನ್ನು ಜಿಲ್ಲಾಧಿಕಾರಿ ನೇತೃತ್ವದಲ್ಲೇ ಮತ್ತೆ ಮರು ಸ್ಥಾಪಿಸದಿದ್ದರೆ ರಾಜ್ಯಾದ್ಯಂತ ಬಿಜೆಪಿ ಉಗ್ರ ಹೋರಾಟ ಕೈಗೊಳ್ಳಲಿದೆ ಎಂದು ಸೋಮವಾರ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಪ್ರವಾಸಿ ಮಂದಿರ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಂಡ್ಯದ ಕೆರೆಗೋಡು ಗ್ರಾಮದ ರಾಮ ದೇವಸ್ಥಾನದ ಮುಂಭಾಗದಲ್ಲಿ ಗ್ರಾಮಸ್ಥರು ಕಟ್ಟಿದ ಹನುಮ ಧ್ವಜವನ್ನು ಕೂಡಲೇ ಅದೇ ಜಾಗದಲ್ಲಿ ಹಾರಿಸುವಂತೆ ಒತ್ತಾಯಿಸಿ ಸೋಮವಾರ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಪ್ರವಾಸಿ ಮಂದಿರದ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ನಗರದ ಶುಭಮಂಗಳ ಸಮುದಾಯ ಭವನದಿಂದ ಪಾದಯಾತ್ರೆ ನಡೆಸಿದ ಕಾರ್ಯಕರ್ತರು, ರಾಜ್ಯ ಸರ್ಕಾರ ರಾಜಕೀಯ ಉದ್ದೇಶದಿಂದ ತಮ್ಮ ಭಾಗ್ಯಗಳ ಅನುಷ್ಠಾನದಲ್ಲಿ ವಿಫಲವಾಗುತ್ತಿದೆ. ಈ ವೈಫಲ್ಯ ಮರೆಮಾಚಲು ಮಂಡ್ಯ ಜಿಲ್ಲೆಯ ಕೆರೆಗೋಡು ಗ್ರಾಮದ ರಾಮ ದೇವಸ್ಥಾನದ ಮುಂಭಾಗದಲ್ಲಿ ಗ್ರಾಮಸ್ಥರು ಕಟ್ಟಿದ ಹನುಮ ಧ್ವಜವನ್ನು ರಾತ್ರೋರಾತ್ರಿ ಇಳಿಸಿದೆ. ಧ್ವಜಾ ಸಂಹಿತೆ ಮೀರಿ ರಾಷ್ಟ್ರಧ್ವಜವನ್ನು ಏಕಾಏಕಿ ಹಾರಿಸಿದ್ದಾರೆ. ಈ ಹಿನ್ನೆಲೆ ಕೂಡಲೇ ಅದೇ ಜಾಗದಲ್ಲಿ ಹನುಮ ಧ್ವಜ ಹಾರಿಸಬೇಕು ಎಂದು ಆಗ್ರಹಿಸಿದರು.

ಇಂದು ಸಂಜೆಯೊಳಗೆ ಹನುಮ ಧ್ವಜವನ್ನು ಜಿಲ್ಲಾಧಿಕಾರಿ ನೇತೃತ್ವದಲ್ಲೇ ಮತ್ತೆ ಮರು ಸ್ಥಾಪಿಸದಿದ್ದರೆ ರಾಜ್ಯಾದ್ಯಂತ ಬಿಜೆಪಿ ಉಗ್ರ ಹೋರಾಟ ಕೈಗೊಳ್ಳಲಿದೆ. ಇಂದು ಸಾಂಕೇತಿಕವಾಗಿ ಹೋರಾಟ ನಡೆಸಿ, ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದೇವೆ. ವಿಪಕ್ಷ ನಾಯಕ ಅಶೋಕ್ ಅವರನ್ನು ಬಂಧಿಸಿ, ರಾಜ್ಯ ಸರ್ಕಾರ ಅಪಚಾರ ಎಸಗಿದೆ. ಹಿಂದು ವಿರೋಧಿ ನೀತಿಯನ್ನು ಸರ್ಕಾರ ಕೈಬಿಡಬೇಕು ಎಂದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಜನರ ಗಮನ ಬೇರೆಡೆಗೆ ಸೆಳೆಯಲು ಕಾಂಗ್ರೆಸ್‍ನ ಅಭಿವೃದ್ಧಿ ಶೂನ್ಯ ಸರ್ಕಾರ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಕ್ಕಪಾಠವನ್ನು ಜನ ಕಲಿಸಲಿದ್ದಾರೆ. ಸರ್ಕಾರದ ಈ ಹಿಂದೂ ವಿರೋಧಿ ನೀತಿಯ ಬಗ್ಗೆ ಮತದಾರರಿಗೆ ಮುಟ್ಟಿಸುವ ಕೆಲಸ ಬಿಜೆಪಿ ಕಾರ್ಯಕರ್ತರು ಮಾಡಬೇಕು. ಸರ್ಕಾರದ ತುಷ್ಠೀಕರಣ ನೀತಿ ಕೈಬಿಡದೇ ಹೋದರೆ ಮುಂಬರುವ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸುತ್ತೇವೆ. ಪ್ರತಿ ಮಂಡಲದಿಂದಲೂ ಬಿಜೆಪಿ ಹೋರಾಟ ಕೈಗೊಳ್ಳಲಿದೆ ಎಂದು ಹೇಳಿದರು.

ಈ ಸಂದರ್ಭ ಶಾಸಕ ಎಸ್.ಎನ್. ಚನ್ನಬಸಪ್ಪ, ಪಕ್ಷದ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಮುಖರಾದ ಮೋಹನ್‍ ರೆಡ್ಡಿ, ಇ.ವಿಶ್ವಾಸ್, ರಾಹುಲ್‍ ಬಿದ್ರೆ, ಗಾಯತ್ರಿದೇವಿ, ಪ್ರಶಾಂತ್ ಕುಕ್ಕೆ, ಚಂದ್ರಶೇಖರ್ ಮತ್ತಿತರರು ಹಾಜರಿದ್ದರು.

- - - -29ಎಸ್‌ಎಂಜಿಕೆಪಿ13:

ಕೆರೆಗೋಡು ರಾಮ ದೇವಸ್ಥಾನ ಮುಂಭಾಗದಲ್ಲಿ ಹನುಮ ಧ್ವಜವನ್ನು ಅದೇ ಜಾಗದಲ್ಲಿ ಹಾರಿಸುವಂತೆ ಒತ್ತಾಯಿಸಿ ಸೋಮವಾರ ಪ್ರವಾಸಿ ಮಂದಿರ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ನಡೆಸಿ, ಪ್ರತಿಭಟಿಸಿದರು.

Share this article