ದೇವರಾಜು ಕಪ್ಪಸೋಗೆ
ಕನ್ನಡಪ್ರಭ ವಾರ್ತೆ ಚಾಮರಾಜನಗರ ರಾಜ್ಯದ ಗಡಿ ಜಿಲ್ಲೆಯ ಜನರ ಆರೋಗ್ಯಕ್ಕೆ ಸಂಬಂಧಿಸಿದಂತೆ 2024-25ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿರುವಂತೆ ಹೆಚ್ಚಿನ ಒತ್ತು ನೀಡಲಾಗಿದ್ದು, ಶಿಕ್ಷಣ, ಕುಡಿಯುವ ನೀರು, ರಸ್ತೆ ಸೇರಿದಂತೆ ಮೂಲಭೂತ ಅಭಿವೃದ್ಧಿಗೆ ಕುತ್ತು ಬಿದ್ದಿದೆ. ಯಳಂದೂರಿನಲ್ಲಿ 100 ಹಾಸಿಗೆ ಸಾಮರ್ಥ್ಯದ ತಾಲೂಕು ಆಸ್ಪತ್ರೆಯನ್ನು 40 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಘೋಷಣೆ ಮಾಡಲಾಗಿತ್ತು. ಅದರಂತೆ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಕಾಳಜಿಯ ಫಲವಾಗಿ ಅನುದಾನ ಬಿಡುಗಡೆ ಮಾಡುವುದಲ್ಲದೆ, ಕಟ್ಟಡದ ಶಂಕುಸ್ಧಾಪನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೆರವೇರಿಸಿದ್ದಾರೆ.ಚಾಮರಾಜನಗರ ಜಿಲ್ಲಾ ಕೇಂದ್ರದ ಸಿಮ್ಸ್‌ನಲ್ಲಿ ಸ್ಥಾಪನೆ ಮಾಡಲಾಗಿರುವ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗೆ ಅವಶ್ಯವಿರುವ ವೈದ್ಯಕೀಯ ಉಪಕರಣ ಮತ್ತು ಪಿಠೋಪಕರಣಗಳ ಖರೀದಿಗಾಗಿ 50 ಕೋಟಿ ರು.ಒದಗಿಸುವುದಾಗಿ ಬಜೆಟ್‌ನಲ್ಲಿ ಭರವಸೆ ನೀಡಲಾಗಿತ್ತು. ನಿರೀಕ್ಷಿತ ಮಟ್ಟದಲ್ಲಿ ಅನುದಾನ ಬಿಡುಗಡೆಯಾಗದಿದ್ದರೂ ಅಗತ್ಯ ಮೂಲಸೌಲಭ್ಯ ಒದಗಿಸಲಾಗಿದೆ.
ಹನೂರು ಭಾಗದ ಕಾಡಂಚಿನ ಗ್ರಾಮದ ಜನರ ಆರೋಗ್ಯ ಸುಧಾರಣೆ ನಿಟ್ಟಿನಲ್ಲಿ ಮಲೆಮಹದೇಶ್ವರ ಬೆಟ್ಟದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಸ್ಧಾಪನೆ ಮಾಡಲಾಗಿದೆ. ಇನ್ನೂ ಹೆಚ್ಚಿನ ಆರೋಗ್ಯ ಸೇವೆಯ ಅಗತ್ಯತೆ ಇದೆ.ತಾರಾಲಯವಿಲ್ಲ:ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಚಟುವಟಿಕೆ ಆಧಾರಿತ ಪರಿಸರವನ್ನುಒದಗಿಸಲು ಚಾಮರಾಜನಗರದಲ್ಲಿ ವಿಜ್ಞಾನ ಕೇಂದ್ರ ತಾರಾಲಯವನ್ನು ಕಾರ್ಯಾರಂಭ ಮಾಡಲಾಗುವುದು ಎಂದು ಕಳೆದ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಲಾಗಿದ್ದರೂ ಇದುವರಗೆ ಯಾವುದೇ ಪ್ರಯತ್ನಗಳು ನಡೆದಿಲ್ಲ.
ಪ್ರವಾಸೋದ್ಯಮಕ್ಕೆ ಆದ್ಯತೆ ಇಲ್ಲ:ರಾಜ್ಯದಲ್ಲಿ ಪರಿಸರ ಪ್ರವಾಸೋದ್ಯಮವನ್ನು ಉತ್ತೇಜಿಸಲು ಬಂಡೀಪುರ, ದಾಂಡೇಲಿ ಮತ್ತು ಕಬಿನಿಯಲ್ಲಿ 25 ಕೋಟಿ ರು. ವೆಚ್ಚದಲ್ಲಿ ಇಂಟರ್ ಪ್ರಿಟೇಷನ್ ಸೆಂಟರ್‌ಗಳನ್ನು ಜೆಎಲ್‌ಆರ್ ಸಂಸ್ಧೆಯ ಮೂಲಕ ನಿರ್ಮಾಣ ಮಾಡಲಾಗುವುದು ಎಂದು ಘೋಷಣೆ ಮಾಡಲಾಗಿತ್ತು. ಆದರೆ, ಇದಕ್ಕೆ ಪೂರಕವಾಗಿ ಯಾವುದೇ ಪ್ರಗತಿ ಕಾರ್ಯ ಇದುವರಗೆ ಅನುಷ್ಠಾನವಾಗಿಲ್ಲ. ಬಂಡೀಪುರದಲ್ಲಿ ಆನೆ ಕಾರ್ಯಪಡೆ ಸ್ಧಾಪನೆ ಸಂಬಂಧ ಕಳೆದ ಬಾರಿ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಪ್ರಸಕ್ತ ವರ್ಷದಲ್ಲಿ ಬಂಡೀಪುರದಲ್ಲಿ ಆನೆ ಕಾರ್ಯಪಡೆಯನ್ನು ರಚಿಸಲಾಗಿದೆ.ಅಭಿವೃದ್ಧಿಗಿಲ್ಲ ಆದ್ಯತೆ:ಗ್ಯಾರಂಟಿ ಯೋಜನೆಗಳ ಪರಿಣಾಮ ಜಿಲ್ಲಾ ಕೇಂದ್ರದ ಕುಡಿಯುವ ನೀರು, ಜಿಲ್ಲಾದ್ಯಂತ ರಸ್ತೆಗಳು ಸೇರಿದಂತೆ ಮೂಲಭೂತ ಅಭಿವೃದ್ಧಿಗೆ ಕುತ್ತು ಬಿದ್ದಿದೆ. ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಇಂದಿಗೂ ವಾರಕ್ಕೊಮ್ಮೆ ಕಾವೇರಿ ನೀರು ಪೂರೈಕೆಯಾಗುತ್ತಿದ್ದು, ಜಿಲ್ಲಾ ಕೇಂದ್ರದಲ್ಲೇ ನೀರಿನ ಬವಣೆ ಇದೆ. ಎಲ್ಲ ಬಡಾವಣೆಗಳಿಗೂ ನಿತ್ಯ ಕಾವೇರಿ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ 276 ಕೋಟಿ ರು. ವೆಚ್ಚದ ಹೊಸ ಯೋಜನೆಯ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆಯಾಗಿ ಹಲವು ವರ್ಷಗಳೇ ಕಳೆದಿದ್ದರೂ ಹೊಸ ಯೋಜನೆಗೆ ಕಾಳಜಿ ವಹಿಸದ ಪರಿಣಾಮ ಜಿಲ್ಲಾ ಕೇಂದ್ರದ ಜನತೆ ಕುಡಿಯವ ನೀರಿಗೆ ಬವಣೆ ಪಡುವುದು ಮುಂದುವರಿದಿದೆ.ನಿರೀಕ್ಷೆಗಳು:1. ಜಿಲ್ಲೆಯ ಮಲೆಮಹದೇಶ್ವರಬೆಟ್ಟ ಪ್ರದೇಶದ ಸುತ್ತಮುತ್ತಲ ಪ್ರದೇಶದಲ್ಲಿ ಬೇಡಗಂಪಣರು ವಾಸಿಸುವ ಹಾಡಿಗಳು ಮೂಲ ಸೌಕರ್ಯ ಕೊರತೆಯಿಂದ ಅತ್ಯಂತ ಹಿಂದುಳಿದಿವೆ. ಇವುಗಳ ಅಭಿವೃದ್ಧಿಗೆ ರಾಜ್ಯ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್ ನಿರೀಕ್ಷೆ ಮಾಡಲಾಗಿದೆ.
2. ಚಾಮರಾಜನಗರ ಜಿಲ್ಲೆಯಲ್ಲಿ ಶೇ.50ರಷ್ಟು ಅರಣ್ಯ ಪ್ರದೇಶವಿದ್ದು, ಜಿಲ್ಲೆಯಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದು ಚಾಮರಾಜನಗರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಿ, ಪರಿಸರ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಗೆ ವಿಶೇಷ ಪ್ಯಾಕೇಜ್ ಅಗತ್ಯವಿದೆ. ಇಡೀ ಜಿಲ್ಲೆಯ ಹೆಚ್ಚಿನ ಭಾಗದಲ್ಲಿ ರೈತರು ಕೃಷಿಯನ್ನು ಅವಲಂಭಿಸಿದ್ದು, ಕೃಷಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ.3. ಚಾಮರಾಜನಗರ ಜಿಲ್ಲೆಯಾದಾಗಿನಿಂದ ಇಲ್ಲಿಯವರೆಗೂ ಚಾಮರಾಜನಗರ ಪಟ್ಟಣದಲ್ಲಿ ಜನರಿಗೆ ಚುಡಾದಿಂದ ಯಾವುದೇ ನಿವೇಶನ ಹಂಚಿಕೆಯಾಗಿಲ್ಲ. ಹಾಗಾಗಿ ನಗರದ ಹೊರ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ನೂತನ ಬಡಾವಣೆ ನಿರ್ಮಿಸಿ ನಿವೇಶನಗಳನ್ನು ಹಂಚಿಕೆ ಮಾಡಬೇಕು. ಹೊಸ ಟೌನ್ ಶಿಪ್ ನಿರ್ಮಿಸಬೇಕಿದೆ.
4. ಹಿಂದಿನ ಬಿಜೆಪಿ ಸರ್ಕಾರ ಜಿಲ್ಲೆಯಲ್ಲಿ ಪ್ರತ್ಯೇಕ ವಿವಿ ಸ್ಥಾಪನೆ ಮಾಡಿದೆ. ಆದರೆ, ಹೆಚ್ಚು ಅನುದಾನ ನೀಡದ ಪರಿಣಾಮ ಕೊಠಡಿಗಳು ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಇದೆ. ಹಾಗಾಗಿ ಗಡಿ ಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರಕುವಂತೆ ಮಾಡಲು ಈ ಬಜೆಟ್‌ನಲ್ಲಿ ಹೆಚ್ಚಿನ ನಿರೀಕ್ಷೆ ಮಾಡಲಾಗಿದೆ.5. ಈಗಾಗಲೇ ಮಂಜೂರಾಗಿರುವ ಕಾನೂನು ಕಾಲೇಜು ಪ್ರಾರಂಭ ಮಾಡಲು ಬೇಕಾದ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಟ್ಟು ಕಾನೂನು ಕಾಲೇಜು ಆರಂಭಕ್ಕೆ ಒತ್ತು ನೀಡಬೇಕಿದೆ.
6. ಚಾಮರಾಜನಗರ ಜಿಲ್ಲೆಯಲ್ಲಿ ಐದು ತಾಲೂಕು ಕೇಂದ್ರಗಳಿದ್ದು, ಜಿಲ್ಲಾ ಕೇಂದ್ರದಲ್ಲಿ ಉಪವಿಭಾಗಧಿಕಾರಿಗಳ ಕಚೇರಿ ಇಲ್ಲದ ಪರಿಣಾಮ ಕೊಳ್ಳೇಗಾಲಕ್ಕೆ ಅಲೆಯಬೇಕಾಗಿದೆ. ಈ ನಿಟ್ಟಿನಲ್ಲಿ ಆಡಳಿತದ ಕಾರ್ಯನಿರ್ವಹಣೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರದಲ್ಲಿ ಮತ್ತೊಂದು ಉಪ ವಿಭಾಗ ಕಚೇರಿ ತೆರೆಯಬೇಕಿದೆ.