ಸಂಡೂರಿನ ಅಂತಾಪುರ- ವಿಠಲಾಪುರದಲ್ಲಿ ಮೇವು ಬ್ಯಾಂಕ್

KannadaprabhaNewsNetwork | Published : Feb 21, 2024 2:00 AM

ಸಾರಾಂಶ

ಸಂಡೂರು ತಾಲೂಕಿನಲ್ಲಿ ಹತ್ತಾರು ಗ್ರಾಮಗಳಲ್ಲಿ ಮೇವಿನ ಸಮಸ್ಯೆ ತಲೆದೋರಿದ್ದು, ಮೇವು ಬ್ಯಾಂಕ್ ಸ್ಥಾಪನೆಯ ನಿಲುವಿನಿಂದ ರೈತರು ನಿಟ್ಟುಸಿರು ಬಿಡುವಂತಾಗಿದೆ.

ಕೆ.ಎಂ. ಮಂಜುನಾಥ್

ಬಳ್ಳಾರಿ: ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗುವ ಸಾಧ್ಯತೆ ಹಿನ್ನೆಲೆ ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ಅಂತಾಪುರ ಹಾಗೂ ವಿಠಲಾಪುರ ಗ್ರಾಮ ಹೊರವಲಯದಲ್ಲಿ ಮೇವು ಬ್ಯಾಂಕ್ ಆರಂಭಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಸಂಡೂರು ತಾಲೂಕು ಟಾಸ್ಕ್‌ಫೋರ್ಸ್ ನೀಡಿದ ವರದಿ ಹಿನ್ನೆಲೆಯಲ್ಲಿ ಎರಡು ಕಡೆ ಮೇವು ಬ್ಯಾಂಕ್ ಆರಂಭಕ್ಕೆ ಪಶು ಸಂಗೋಪನಾ ಇಲಾಖೆ ಸಿದ್ಧತೆ ಕೈಗೊಂಡಿದ್ದು, ಮಾರ್ಚ್‌ ಎರಡನೇ ವಾರದಿಂದ ಜಾನುವಾರುಗಳಿಗೆ ಮೇವು ಪೂರೈಕೆಯಾಗಲಿದೆ. ಸಂಡೂರು ತಾಲೂಕಿನಲ್ಲಿ ಹತ್ತಾರು ಗ್ರಾಮಗಳಲ್ಲಿ ಮೇವಿನ ಸಮಸ್ಯೆ ತಲೆದೋರಿದ್ದು, ಮೇವು ಬ್ಯಾಂಕ್ ಸ್ಥಾಪನೆಯ ನಿಲುವಿನಿಂದ ರೈತರು ನಿಟ್ಟುಸಿರು ಬಿಡುವಂತಾಗಿದೆ.

ಮೇವು ಪೂರೈಕೆಯ ಸವಾಲು: ಗಣಿಜಿಲ್ಲೆಯಲ್ಲಿ ತೀವ್ರ ಬರಗಾಲ ಎದುರಾದ ಹಿನ್ನೆಲೆಯಲ್ಲಿ ಮಳೆಗಾಲ ಶುರುವಾಗುವ ವರೆಗೆ ಜಾನುವಾರುಗಳಿಗೆ ಮೇವು ಪೂರೈಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲೆಯ ಐದು ತಾಲೂಕುಗಳ ಪೈಕಿ ಸಂಡೂರು ತಾಲೂಕಿನಲ್ಲಿ ಮಾತ್ರ ಮೇವಿನ ತೀವ್ರ ಅಭಾವ ಎದುರಾಗುವ ಸಾಧ್ಯತೆ ಇರುವುದರಿಂದ ಮೇವು ಬ್ಯಾಂಕ್ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಈ ಸಂಬಂಧ 1 ಸಾವಿರ ಟನ್‌ ಮೇವು ಪೂರೈಕೆಯ ಟೆಂಡರ್ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ಅಂತಾಪುರ ಹಾಗೂ ವಿಠಲಾಪುರದ ಎರಡು ಮೇವು ಬ್ಯಾಂಕ್‌ಗಳಲ್ಲಿ ಸದ್ಯ ತಲಾ 50 ಟನ್ ಮೇವು ಸಂಗ್ರಹಿಸಿಟ್ಟು ರೈತರಿಗೆ ವಿತರಣೆ ಮಾಡಲು ಪಶು ಸಂಗೋಪನಾ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

23 ಹಳ್ಳಿಗಳಲ್ಲಿ ಮೇವು ಅಭಾವ: ಜಿಲ್ಲೆಯ ಪೈಕಿ ಹೆಚ್ಚು ನೀರಾವರಿ ಪ್ರದೇಶ ಹೊಂದಿರುವ ಸಿರುಗುಪ್ಪ, ಕಂಪ್ಲಿ, ಕುರುಗೋಡು ಹಾಗೂ ಬಳ್ಳಾರಿ ತಾಲೂಕಿನಲ್ಲಿ ಈ ವರೆಗೆ ಜಾನುವಾರುಗಳಿಗೆ ಮೇವಿನ ಸಮಸ್ಯೆ ಸದ್ಯಕ್ಕೆ ಎದುರಾಗಿಲ್ಲ. ಸಂಡೂರು ತಾಲೂಕಿನಲ್ಲಿ 23 ಹಳ್ಳಿಗಳು ಹಾಗೂ ಬಳ್ಳಾರಿ ತಾಲೂಕಿನ ಹರಗಿನಡೋಣಿ, ಜಾನೆಕುಂಟೆ, ಬೆಳಗಲ್ಲು, ಹೊನ್ನಳ್ಳಿ, ಹಲಕುಂದಿ, ಮಿಂಚೇರಿ, ಸಂಜೀವರಾಯನಕೋಟೆ, ಮಿಂಚೇರಿ, ಬುರ್ರನಾಯಕನಹಳ್ಳಿ ಸೇರಿದಂತೆ ಒಟ್ಟು 8 ಹಳ್ಳಿಗಳಲ್ಲಿ ಮಾತ್ರ ಮೇವಿಗಾಗಿ ರೈತರು ಒದ್ದಾಡುವ ಸ್ಥಿತಿಯಿದೆ. ಹೀಗಾಗಿ ತೀವ್ರ ಸಮಸ್ಯೆ ಇರುವ ಗ್ರಾಮಗಳನ್ನು ಗುರುತಿಸಿ ಮೇವು ಪೂರೈಕೆಗೆ ಕ್ರಮ ವಹಿಸಲಾಗಿದೆ ಎಂದು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ''''ಕನ್ನಡಪ್ರಭ''''ಕ್ಕೆ ತಿಳಿಸಿದ್ದಾರೆ.

ಕೆಜಿಗೆ ₹2ರಂತೆ ವಿತರಣೆ: ಜಿಲ್ಲಾಡಳಿತ ಸ್ಥಾಪಿಸುವ ಮೇವು ಬ್ಯಾಂಕ್‌ಗಳಲ್ಲಿ ಕೆಜಿಗೆ ₹2ರಂತೆ ಮೇವು ವಿತರಣೆ ಮಾಡಲಾಗುವುದು. ಒಂದು ಹಸು, ಎತ್ತು ಅಥವಾ ಎಮ್ಮೆಗೆ ನಿತ್ಯ 6 ಕೆಜಿ ಮೇವು ಬೇಕಾಗಲಿದ್ದು, ಜಾನುವಾರುಗಳ ಸಂಖ್ಯೆಗೆ ತಕ್ಕಂತೆ ಮೇವು ವಿತರಣೆಗೆ ಜಿಲ್ಲಾಡಳಿತ ಕ್ರಮ ವಹಿಸಿದೆ. ಬರಗಾಲ ಹಿನ್ನೆಲೆ ಖಾಸಗಿಯಾಗಿ ಮೇವು ಖರೀದಿಸುವುದು ತೀವ್ರ ದುಬಾರಿಯಾಗಿದ್ದು, ಮೇವು ಬ್ಯಾಂಕ್‌ನಿಂದ ರೈತರಿಗೆ ಅನುಕೂಲವಾಗಲಿದೆ. ಮೇವು ಪೂರೈಕೆ: ಮೇವಿನ ತೀವ್ರ ಸಮಸ್ಯೆ ಇರುವ ಸಂಡೂರು ತಾಲೂಕಿನ ಎರಡು ಕಡೆ ಮೇವು ಬ್ಯಾಂಕ್ ಸ್ಥಾಪಿಸಲು ನಿರ್ಧರಿಸಲಾಗಿದ್ದು, ಮಾರ್ಚ್ ಎರಡನೇ ವಾರದಲ್ಲಿ ಶುರುವಾಗಲಿದೆ. 1 ಸಾವಿರ ಟನ್‌ಗೆ ಟೆಂಡರ್ ಆಗಿದ್ದು, ಜಾನುವಾರುಗಳ ಸಂಖ್ಯೆಗೆ ತಕ್ಕಂತೆ ಮೇವು ಪೂರೈಸಲಾಗುವುದು ಎಂದು ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ಎಂ.ಸಿ. ವಿನೋದ್ ಕುಮಾರ್ ತಿಳಿಸಿದರು.ರೈತರ ಸಂತಸ: ಮೇವಿನ ಸಮಸ್ಯೆ ನೀಗಿಸಲು ಸಂಡೂರು ತಾಲೂಕಿನಲ್ಲಿ ಮೇವು ಬ್ಯಾಂಕ್ ಆರಂಭಿಸುತ್ತಿರುವುದು ಸ್ವಾಗತಾರ್ಹ. ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವು- ನೀರು ಪೂರೈಕೆ ದೊಡ್ಡ ಸವಾಲಾಗಿದೆ. ಜಿಲ್ಲಾಡಳಿತ ಕ್ರಮದಿಂದ ಹೆಚ್ಚು ಸಂತಸವಾಗಿದೆ ಎಂದು ರೈತರಾದ ವೆಂಕಟನಾರಾಯಣ, ವಿ. ಕುಮಾರಸ್ವಾಮಿ ತಿಳಿಸಿದರು.

ತಾಲೂಕು ಒಟ್ಟು ಜಾನುವಾರುಗಳು

ಕಂಪ್ಲಿ 21,541

ಸಿರುಗುಪ್ಪ 38,232

ಬಳ್ಳಾರಿ 50,932

ಕುರುಗೋಡು 21,112

ಸಂಡೂರು 48,794

ಒಟ್ಟು 1,80,611

Share this article