ಕನ್ನಡಪ್ರಭ ವಾರ್ತೆ ಮಳವಳ್ಳಿ
ಈ ನಾಡಿನ ಮಣ್ಣಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಜಾನಪದ ಕಲೆಯನ್ನು ಯುವ ಸಮುದಾಯ ಪ್ರೋತ್ಸಾಹಿಸುವ ಜೊತೆಗೆ ತಮಗೆ ಆಸಕ್ತಿಗೆ ಅನುಗುಣವಾಗಿ ಕಲೆಯನ್ನು ಕರಗತ ಮಾಡಿಕೊಳ್ಳಬೇಕು ಎಂದು ತಾಲೂಕು ವೈದ್ಯಧಿಕಾರಿ ಡಾ.ಪಿ.ವೀರಭದ್ರಪ್ಪ ತಿಳಿಸಿದರು.ಪಟ್ಟಣದ ಶಾಂತಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಮಹೇಶ್ವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವದ ಅಂಗವಾಗಿ ಆಯೋಜಿಸಿದ್ದ ಜಾನಪದ ಝೇಂಕಾರ ಮತ್ತು ಸಾಂಸ್ಕೃತಿಕ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಾಂಸ್ಕೃತಿಕ ಕಲೆ ಮತ್ತು ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವುದರ ಜತೆಗೆ ಅದನ್ನು ಮುಂದಿನ ಪೀಳಿಗೆಯ ಯುವಸಮೂಹಕ್ಕೆ ಪರಿಚಯಿಸುವ ಕೆಲಸ ಮಾಡಬೇಕಿದೆ. ಬಾಯಿಂದ ಬಾಯಿಗೆ ಬಂದ ಜಾನಪದ ಕಲೆಗೆ ವಿಜ್ಞಾನವಾದಗ ಸಮಾಜದಲ್ಲಿ ಬದುಕುವುದು ಹೇಗೆ ಎನ್ನುವುದನ್ನು ಕಲಿಸುತ್ತಿದೆ ಎಂದರು.ಮಂಡ್ಯ ಜಿಲ್ಲೆ ಸಾಂಸ್ಕೃತಿಕ, ಕಲೆ, ಸಾಹಿತ್ಯ, ರಾಜಕೀಯ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದೆ. ಜೊತೆಗೆ ಮಳವಳ್ಳಿ ತಾಲೂಕು ಮಹದೇಶ್ವರ, ಮಂಟೇಸ್ವಾಮಿ ಸಿದ್ದಪ್ಪಾಜಿಯವರು ನಡೆದಾಡಿದ ಸ್ಥಳವಾಗಿದ್ದರಿಂದ ಜಾನಪದ ನೆಮ್ಮದಿ ದೊರೆಯಲಿದೆ. ನಮ್ಮ ಜಾನಪದ ನೆಲದ ಸಂಸ್ಕೃತಿಯ ಜತೆಗೆ ಜಾನಪದ ಕಲೆಯನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರು ಜೋಡಿಸಬೇಕು ಎಂದರು.
ಮಹೇಶ್ವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಮಹದೇವಸ್ವಾಮಿ ಮಾತನಾಡಿ, ಜಾನಪದ ಸಂಸ್ಕೃತಿಯಲ್ಲಿ ಸಂಸ್ಕಾರ ಆಡಗಿದೆ. ಅದನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಮನಸ್ಸಿನ ನೋವಿನ ಔಷಧಿಯು ಜಾನಪದವೇ ಆಗಿದೆ ಎಂದರು.ಕಷ್ಟ,ಸುಖ ಸಂಬಂಧ ಸೇರಿದಂತೆ ಪ್ರತಿಯೊಂದಕ್ಕೂ ಪದವನ್ನು ಕಟ್ಟಿ ಅರ್ಥವಾಗುವ ರೀತಿಯಲ್ಲಿ ಜಾಪದ ಹಾಡಿನಲ್ಲಿಯೇ ತಿಳಿವಳಿಕೆ ನೀಡುತ್ತಿದೆ. ಇಂತಹ ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಕೋಟ್ಯಾಂತರ ರು. ಅನುದಾನ ನೀಡುತ್ತಿದೆ. ಹಿರಿಯ ಕಲಾವಿದರಿಗೆ ಮಾಸಶನದೊಂದಿಗೆ ಗೌರವಿಸುವ ಕೆಲಸ ಮಾಡುತ್ತಿದೆ ಎಂದರು.
ಜಾನಪದ ಕಲೆ ಮನನರಂಜನೆಯನ್ನು ನೀಡುವುದರ ಜೊತೆಗೆ ಕಲಾವಿದರ ಬದಕನ್ನು ಹಸನು ಮಾಡುತ್ತದೆ. ವಿದ್ಯಾರ್ಥಿಗಳು ವಿದ್ಯೆಗೆ ಜೊತೆಗೆ ತಮ್ಮ ಆಸಕ್ತಿಗೆ ಅನುಗುಣವಾಗಿ ಕಲೆಯನ್ನು ಮೈಗೂಡಿಸಿಕೊಳ್ಳಬೇಕು. ಜಾನಪದ ಕಲೆ ನಿಜವಾದ ಬದುಕನ್ನು ಕಲಿಸುತ್ತದೆ. ರಾಜ್ಯದಲ್ಲಿ ಜಾನಪದ ಕಲೆಯ ಶ್ರೀಮಂತಿಕೆಯನ್ನು ಹೇಳಲು ಸಾಧ್ಯವಿಲ್ಲ ಎಂದು ಬಣ್ಣಿಸಿದರು.ಅಧ್ಯಕ್ಷತೆ ವಹಿಸಿದ್ದ ಶಾಂತಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಂ.ಎಚ್.ಕೆಂಪಯ್ಯ ಮಾತನಾಡಿ, ಮಳವಳ್ಳಿ ತಾಲೂಕು ನೂರಾರು ಜಾನಪದ ಕಲಾವಿದರನ್ನು ಹೊಂದಿದೆ, ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಮೆಗಳನ್ನು ಅನಾವರಣಗೊಳಿಸಿದ್ದಾರೆ. ಯುವ ಸಮೂಹ ಜಾನಪದ ಕಲೆಗೆ ಹೆಚ್ಚು ಗಮನ ಹರಿಸಬೇಕೆಂದು ಕೋರಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಜಾನಪದ ಗೀತೆ, ಡೊಳ್ಳುಕುಣಿತ, ಪೂಜಾ ಕುಣಿತ, ತಮಟೆ ವಾದನ, ಗೊಂಬೆ ಕುಣಿತ, ಗೋರವನ ಕುಣಿತ, ರಂಗಗೀತೆ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳು ಗಮನ ಸೆಳೆದ್ದವು.ಕಾರ್ಯಕ್ರಮದಲ್ಲಿ ಶಾಂತಿ ಕಾಲೇಜು ಕಾರ್ಯದರ್ಶಿಗಳಾದ ತಿಮ್ಮೇಗೌಡ, ಪುಟ್ಟರಾಜು, ಖಜಾಂಚಿ ಕೆ.ಸಿ.ಪುಟ್ಟೀರೇಗೌಡ, ಪ್ರಾಂಶುಪಾಲರಾದ ವೇದಮೂರ್ತಿ, ಸಿ.ಅನಿತಾ, ಸಾಹಿತಿಗಳಾದ ಬಿ.ಆರ್.ಶಿವಕುಮಾರ್ ಅಂತರಾಷ್ಟ್ರೀಯ ಗಾಯಕ ಸರ್ವೊತ್ತಮ್, ಸೋಮಜಮ್ಮ ಸೇರಿದಂತೆ ಇತರರು ಇದ್ದರು.