ಜನಪದ ಕಲಾ ತಂಡಗಳಿಂದ ಮೆರವಣಿಗೆಗೆ ಮೆರುಗು: ಲೋಕೇಶಕುಮಾರ

KannadaprabhaNewsNetwork |  
Published : Aug 25, 2025, 01:00 AM IST
ರಟ್ಟೀಹಳ್ಳಿ ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ನಡೆದ ಗೌರಿ-ಗಣೇಶ ಹಾಗೂ ಈದ್ ಮಿಲಾದ್‌ ಹಬ್ಬದ ಶಾಂತಿಸಭೆಯಲ್ಲಿ ಡಿವೈಎಸ್‍ಪಿ ಲೋಕೇಶಕುಮಾರ ಮಾತನಾಡಿದರು. | Kannada Prabha

ಸಾರಾಂಶ

ರಟ್ಟೀಹಳ್ಳಿ ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ನಡೆದ ಗೌರಿ-ಗಣೇಶ ಹಾಗೂ ಈದ್ ಮಿಲಾದ್‌ ಹಬ್ಬದ ಶಾಂತಿಸಭೆಯಲ್ಲಿ ಡಿವೈಎಸ್‍ಪಿ ಲೋಕೇಶಕುಮಾರ ಅವರು ಹಬ್ಬದ ವೇಳೆ ಅನುಸರಿಸಬೇಕಾದ ನಿಯಮಗಳ ಕುರಿತು ಮಾಹಿತಿ ನೀಡಿದರು.

ರಟ್ಟೀಹಳ್ಳಿ: ಗೌರಿ-ಗಣೇಶ ಹಾಗೂ ಈದ ಮಿಲಾದ್ ಹಬ್ಬಗಳಲ್ಲಿ ಜನಪದ ಕಲಾ ತಂಡಗಳನ್ನು ಬಳಕೆ ಮಾಡಬೇಕು. ಅದರಿಂದ ಮೆರವಣಿಗೆ ಮೆರುಗು ಹೆಚ್ಚುತ್ತದೆ. ಡಿಜೆ ಬಳಕೆಗೆ ಅವಕಾಶವಿಲ್ಲ ಎಂದು ಡಿವೈಎಸ್‍ಪಿ ಲೋಕೇಶಕುಮಾರ ಹೇಳಿದರು.

ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ನಡೆದ ಗೌರಿ-ಗಣೇಶ ಹಾಗೂ ಈದ್ ಮಿಲಾದ್‌ ಹಬ್ಬದ ಶಾಂತಿಸಭೆಯಲ್ಲಿ ಮಾತನಾಡಿದ ಅವರು, ನ್ಯಾಯಾಲಯದ ನಿರ್ದೇಶನದಂತೆ ಡಿಜೆ ಬಳಸಲು ಅವಕಾಶವಿಲ್ಲ. ಡಿಜೆಗೆ ನೀಡುವ ಹಣವನ್ನು ಜನಪದ ಕಲಾತಂಡಗಳಿಗೆ ನೀಡಿ. ಅದರಿಂದ ಕಲಾವಿದರ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಲು ನೆರವಾಗುವುದು ಎಂದು ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ಸಮುದಾಯಗಳ ವಿರುದ್ಧ ಪ್ರಚೋದನಕಾರಿ ಪೋಸ್ಟ್‌ಗಳನ್ನು ಮಾಡುವುದು ಹಾಗೂ ಅವುಗಳನ್ನು ಹಂಚಿಕೊಳ್ಳುವುದು ಅಪಾಯಕಾರಿ. ಪೊಲೀಸ್ ಇಲಾಖೆ ಅಂತಹ ಚಟುವಟಿಕೆ ಮೇಲೆ ಹದ್ದಿನ ಕಣ್ಣು ಇಟ್ಟಿದೆ. ನಿಯಮಗಳನ್ನು ಮೀರಿ ನಡೆದುಕೊಂಡರೆ ಅಂಥವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅದೇ ರೀತಿ ಈದ್ ಮಿಲಾದ್‌ ಹಬ್ಬದ ಮೆರವಣಿಗೆಯಲ್ಲೂ ಡಿಜೆಗೆ ಅವಕಾಶವಿಲ್ಲ. ಹಬ್ಬದ ಸಂದರ್ಭದಲ್ಲಿ ಟ್ಯಾಬ್ಲೋಗಳಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ತಹಸೀಲ್ದಾರ್‌ ಶ್ವೇತಾ ಅಮರಾವತಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲ ಜಾತಿ, ಧರ್ಮಗಳಿಗೆ ಅವರದೇ ಆದ ಆಚರಣೆ, ಸಂಪ್ರದಾಯಗಳಿಗೆ ಅವಕಾಶ ಇದೆ. ಅಂತಹ ಆಚರಣೆಗಳು ಪ್ರತಿಯೊಬ್ಬರಿಗೂ ನೆಮ್ಮದಿ ನೀಡುವಂತಿರಬೇಕು. ಕಾನೂನಿನ ಚೌಕಟ್ಟು ಮೀರದೇ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸೋಣ ಎಂದರು.

ಪರಿಸರಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸೋಣ. ಸಾರ್ವಜನಿಕ ಗಣೇಶೋತ್ಸವದಲ್ಲಿ ಬೆಲೆಬಾಳುವ ಆಭರಣಗಳನ್ನು ಬಳಸುವುದು ಅಪಾಯಕಾರಿ ಎಂದು ಹೇಳಿದರು.

ಡಿಜೆಗೆ ಅವಕಾಶ ನೀಡಲು ಮನವಿ: ಗಣೇಶೋತ್ಸವ ಮೆರವಣಿಗೆ ಸಂದರ್ಭದಲ್ಲಿ ಡಿಜೆಗೆ ಅವಕಾಶ ನೀಡುವಂತೆ ವಿವಿಧ ಗಣೋಶೋತ್ಸವ ಮಂಡಳಿಗಳ ಪದಾಧಿಕಾರಿಗಳು ಮನವಿ ಮಾಡಿದರು.

ಸಿಪಿಐ ಬಸವರಾಜ ಪಿ.ಎಸ್., ಪಿಎಸ್‌ಐ ರಮೇಶ ಪಿ.ಎಸ್., ಕೃಷ್ಣಪ್ಪ ತೋಪಿನ, ಎಎಸ್‌ಐ ಅಶೋಕ ಕೊಂಡ್ಲಿ, ಹೆಸ್ಕಾಂ ಅಧಿಕಾರಿ ನಾಗರಾಜ ಸೋಮಕ್ಕಳವರ, ಪಪಂ ಅಧಿಕಾರಿ ರಾಜಕುಮಾರ ಹೇಂದ್ರೆ, ಅಗ್ನಿಶಾಮಕ ಅಧಿಕಾರಿ ಕಿಲ್ಲೇದಾರ, ಮಾಲತೇಶಗೌಡ ಗಂಗೋಳ, ದೇವರಾಜ ನಾಗಣ್ಣನವರ, ಬಸವರಾಜ ಆಡಿನವರ, ಮುತ್ತು ಬೆಣ್ಣಿ, ರವೀಂದ್ರ ಮುದಿಯಪ್ಪನವರ, ರವಿ ಹದಡೇರ, ಹನುಮಂತಪ್ಪ ಗಾಜೇರ, ನವೀನ ಮಾದರ, ಮನೋಜ ಗೊಣೆಪ್ಪನವರ, ಶ್ರೀನಿವಾಸ ಬೈರೋಜಿಯವರ, ಸರ್ಪರಾಜ ಮಾಸೂರ, ಸಿಖಂದರ ಮುಲ್ಲಾ, ಬಸವರಾಜ ಕಟ್ಟಿಮನಿ, ಆನಂದ ಎಂ.ಎಂ., ಕುಮಾರ ದ್ಯಾವನಕಟ್ಟಿ, ಪ್ರಶಾಂತ ದ್ಯಾವಕ್ಕಳವರ, ಮಕಬೂಲ್ ಮುಲ್ಲಾ, ಅಬ್ಬಾಸ ಗೋಡಿಹಾಳ ಇದ್ದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ