ಕನ್ನಡಪ್ರಭ ವಾರ್ತೆ ಆನಂದಪುರ
ಜಾನಪದ ಕಲೆ ಮತ್ತು ಕಲಾವಿದರು ಗ್ರಾಮೀಣ ಭಾಗದ ತಾಯಿಬೇರು ಇದ್ದಂತೆ. ಜನ ಜೀವನ ಮತ್ತು ಉನ್ನತ ಸಾಂಸ್ಕೃತಿಕ ಪಾರಂಪರೆಯನ್ನು ಬಿಂಬಿಸುವ ಜಾನಪದ ಕಲೆಗಳು ಗ್ರಾಮೀಣ ಭಾರತದ ಜೀವಾಳವಾಗಿದೆ ಎಂದು ಜಾನಪದ ಅಕಾಡೆಮಿಯ ಮಾಜಿ ಅಧ್ಯಕ್ಷ ಬಿ.ಟಾಕಪ್ಪ ಕಣ್ಣೂರ್ ತಿಳಿಸಿದರು.ಇಲ್ಲಿನ ಸಮೀಪದ ಮುರುಘಾ ಮಠದಲ್ಲಿ ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಶಿಬಿರದಲ್ಲಿ ಉಪನ್ಯಾಸ ನೀಡಿದ ಅವರು ಆಧುನಿಕ ಕಲೆಯ ಪ್ರಭಾವದಿಂದ ನಮ್ಮ ಶ್ರೀಮಂತ ಜಾನಪದ ಕಲಾ ಪ್ರಕಾರಗಳು ನಶಿಸುತ್ತಿವೆ. ನಮ್ಮೊಂದಿಗೆ ಬದುಕುತ್ತಿರುವ ಕಲಾವಿದರನ್ನು ಕಡೆಗಣಿಸುವ ಸಂಪ್ರದಾಯ ಬೆಳೆಯುತ್ತಿರುವುದು ನಿಜಕ್ಕೂ ಆತಂಕಕಾರಿ ಎಂದರು. ನಮ್ಮ ನಾಡಿನ ಕಲಾವಿದರ ಬದುಕನ್ನು ಹಸನಗೊಳಿಸಿ ಅವರಲ್ಲಿ ಹುದುಗಿರುವ ಜಾನಪದ ಕಲಾ ಪ್ರಕಾರಗಳನ್ನು ಪೋಷಿಸಿ ಬೆಳೆಸುವಂತಹ ಕಾರ್ಯ ನಡೆಯಬೇಕು. ಕರ್ನಾಟಕ ರಾಜ್ಯದಲ್ಲಿ ಜಾನಪದ ಕಲೆಗಳು ಸಮುದ್ರ ಇದ್ದಹಾಗೆ. 184 ಹೆಚ್ಚಿನ ಜಾನಪದ ಕಲೆಗಳಿವೆ ಎಂದು ತಿಳಿಸಿದರು.
ಈ ಹಿಂದೆ ಪ್ರದೇಶವಾರು ಹಾಗೂ ಜಾತಿ ಜನಾಂಗದ ಆಧರಿತ ಜಾನಪದ ಕಲೆಗಳು ಇದ್ದವು. ಆದರೆ ಇಂದು ಎಲ್ಲಾ ಪ್ರದೇಶಗಳಲ್ಲಿ ಎಲ್ಲಾ ಜನಾಂಗದ ಜಾನಪದ ಕಲಾವಿದರು ಇದ್ದಾರೆ. ಆದರೆ ಇವತ್ತಿನ ದಿನಮಾನಗಳಲ್ಲಿ ಜಾನಪದ ಉಡುಗೆ - ತೊಡುಗೆಗಳು ಕಣ್ಮರೆಯಾಗುತ್ತಿರುವುದು ವಿಷಾದನೀಯ.ಗ್ರಾಮೀಣ ಭಾಗದ ಜಾನಪದ ಆಟಗಳಾದ ಚಿನ್ನೀ ದಾಂಡು, ಬುಗುರಿ, ಗೋಲಿ ಆಟ, ಚಿನ್ನಮಣೆ, ಲಗೋರಿ ಆಟ, ಸೂಳಿಪಟ್ಟೆ, ಸೇರಿದಂತೆ ಅನೇಕ ಆಟಗಳು. ಅಲ್ಲದೆ ಬೀಸುಕಲ್ಲಿನ ಹಾಡು, ಜೋಗುಳದ ಹಾಡು, ಗದ್ದೆಯಲ್ಲಿ ನಾಟಿ ಮಾಡುವಂತಹ ಹಾಡುಗಳು ಕಣ್ಮರೆಯಾಗುತ್ತಿವೆ. ಇಂತಹ ಗ್ರಾಮೀಣ ಭಾಗದ ಜಾನಪದ ಆಟ ಹಾಗೂ ಹಾಡುಗಳ ಬಗ್ಗೆ ಯುವ ಜನಾಂಗ ಆಸಕ್ತಿ ವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಬೆಳ್ಳೂರು ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಡಿ.ಪಿ ಸೋಮಶೇಖರ್ ಮಾತನಾಡಿ, ವಿದ್ಯಾರ್ಥಿಗಳು ಗುರು ಹಿರಿಯರನ್ನು ಜನ್ಮ ಕೊಟ್ಟ ತಂದೆ ತಾಯಿಯನ್ನು ಗೌರವಿಸುವಂಥ ಆಗಬೇಕು. ಯುವ ಸಮೂಹ ದುಶ್ಚಟಗಳಿಂದ ದೂರವಿದ್ದು, ಉತ್ತಮ ಸಂಸ್ಕಾರ ಸಂಪ್ರದಾಯವನ್ನು ಕಲಿಯುವಂತಾಗಬೇಕು. ವಿದ್ಯಾರ್ಥಿ ಜೀವನ ದಲ್ಲಿ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡುವ ಮೂಲಕ ದೇಶದ ಉತ್ತಮ ಪ್ರಜೆಯಾಗಿ ಬದುಕಬೇಕು ಎಂದರು.ಜಾನಪದ ಕಲಾವಿದ ಶಶಿಕುಮಾರ್, ಪತ್ರಕರ್ತರಾದ ಜಗನ್ನಾಥ್, ಮಲ್ಲಿಕಾರ್ಜುನ್ ,ಅಮಿತ್, ಬಸವರಾಜ್, ರವಿಶಂಕರ್, ಎನ್ ಎಸ್ ಎಸ್ ಶಿಬಿರದ ಕಾರ್ಯಕ್ರಮ ಅಧಿಕಾರಿಗಳಾದ ಆರ್.ದೇವರಾಜ್, ಶಿಲ್ಪಾ ಪಾಟೀಲ್ ಉಪಸ್ಥಿತರಿದ್ದರು.