ಜನಪದ ಸಂಸ್ಕೃತಿ ಮಾನವ ಬಂಧುತ್ವದ ನೆಲೆಗಳ ಪ್ರತಿರೂಪ

KannadaprabhaNewsNetwork | Published : Dec 14, 2024 12:46 AM

ಸಾರಾಂಶ

ಚಿತ್ರದುರ್ಗ: ಜನಪದ ಸಂಸ್ಕೃತಿ ಮಾನವ ಬಂಧುತ್ವ ನೆಲೆಗಳ ಪ್ರತಿರೂಪ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯ ಡಾ.ಕರಿಯಪ್ಪ ಮಾಳಿಗೆ ಅಭಿಪ್ರಾಯಪಟ್ಟರು.

ಚಿತ್ರದುರ್ಗ: ಜನಪದ ಸಂಸ್ಕೃತಿ ಮಾನವ ಬಂಧುತ್ವ ನೆಲೆಗಳ ಪ್ರತಿರೂಪ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯ ಡಾ.ಕರಿಯಪ್ಪ ಮಾಳಿಗೆ ಅಭಿಪ್ರಾಯಪಟ್ಟರು.ನಗರದ ತರಾಸು ರಂಗಮಂದಿರದಲ್ಲಿ ಮದಕರಿ ಯುವಕ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಜಾನಪದ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕರ್ನಾಟಕದಲ್ಲಿ ಸುಮಾರು 150ಕ್ಕೂ ಹೆಚ್ಚು ಜನಪದ ಪ್ರದರ್ಶನ ಕಲೆಗಳಿವೆ. ಆಧುನಿಕತೆಯ ಭರಾಟೆಯಲ್ಲಿ ಹಲವಾರು ಕಲೆಗಳು ಕಣ್ಮರೆಯಾಗಿವೆ. ವ್ಯವಹಾರಿಕ ಪ್ರಧಾನ ವ್ಯವಸ್ಥೆಯಲ್ಲಿ ಮಾನವ ಪ್ರೀತಿಗಳು, ಸಹಬಾಳ್ವೆಯ ಬದುಕಿನ ನೆಲೆಗಳು ಇಲ್ಲವಾಗಿವೆ. ಜಾಗತೀಕರಣದ ಈ ಸಂದರ್ಭದಲ್ಲಿ ಜನಪದ ಸಂಸ್ಕೃತಿಯ ಪ್ರಸ್ತುತತೆಯನ್ನು ಅದರಲ್ಲಿನ ಸಾರ್ವಕಾಲಿಕತೆಯನ್ನು ಕುರಿತು ತಾತ್ವಿಕ ಅಧ್ಯಯನ ನಡೆಸಿದರೆ ಅದರ ಮಹತ್ವ ಮತ್ತು ಅಗತ್ಯತೆ ತಿಳಿಯುತ್ತದೆ ಎಂದರು. ಜನಪದ ಸಂಸ್ಕೃತಿ ಎಂದರೆ ಕೂಡಿಸುವ ಸಂಸ್ಕೃತಿ. ಜಾತಿ ಮತ, ಧರ್ಮಗಳನ್ನು ಮೀರಿದ ಮಾನವೀಯ ಗುಣವುಳ್ಳದ್ದು. ವಿಘಟಿಸುವ, ಶಿಥಿಲಗೊಳಿಸುವ ಸ್ವಾರ್ಥದ ಚಿಂತನೆಗಳಿಗೆ ಅಲ್ಲಿ ಅವಕಾಶವಿಲ್ಲ. ಅದೊಂದು ಅಪ್ಪಿಕೊಳ್ಳುವ ಸಂಸ್ಕೃತಿ. ನಿತ್ಯ ಜೀವನಕ್ಕೆ ಎಲ್ಲರಿಗೂ ಬೇಕಾದ ತಾಯಿಸಂಸ್ಕೃತಿ ಎಂದು ಬಣ್ಣಿಸಿದರು.ಇಂಥ ಜನಪದ ಸಂಸ್ಕೃತಿಯಲ್ಲಿ ಹಾಡು, ಕುಣಿತ, ವಾದ್ಯ, ಸಂಗೀತವಷ್ಟೇ ಅಲ್ಲದೆ ನೆಲ, ಜಲ, ಪರಿಸರ, ಜೀವನಾವಶ್ಯಕತೆ, ಜೊತೆಗೆ ಹುಟ್ಟು, ಸಾವುಗಳನ್ನು ಒಳಗೊಂಡಂತೆ ಬದುಕಿನ ಎಲ್ಲ ಅವಸ್ಥೆಗಳ ಆಗು ಹೋಗುಗಳು ಮಿಳಿತವಾಗಿವೆ. ಅದರೊಳಗೆ ಅನೇಕ ನಂಬಿಕೆಗಳಿವೆ, ರೂಢಿ ಸಂಪ್ರದಾಯ, ಆಚರಣೆಗಳಿವೆ. ಗ್ರಾಮ ದೇವತೆಗಳ ಹಬ್ಬ, ಹರಿದಿನ ಉತ್ಸವಗಳಿವೆ. ಒಟ್ಟಾರೆ ಮನಷ್ಯನ ಸಾಂಸ್ಕೃತಿಕ ಚರಿತ್ರೆಯೇ ಅದರೊಳಗೆ ತುಂಬಿಕೊಂಡಿದೆ. ಇವುಗಳಿಗೆ ಲಿಖಿತ ದಾಖಲೆಯಾಗಲಿ ಇತಿಹಾಸವಾಗಲಿ ಇಲ್ಲ. ನಿಸರ್ಗವೇ ಅವರಿಗೆ ಅಂತಿಮ. ಅದೇ ದೇವರು, ಧರ್ಮ, ಅದರೊಂದಿಗೆ ಅವರ ಅವಿನಾಭಾವ ಸಂಬಂಧ ಎಂದು ತಿಳಿಸಿದರು.

ಜಾನಪದ ಸಂಸ್ಕೃತಿ ಹೊಸ ರೂಪ ಪಡೆದಿರಬಹುದು. ಆದರೆ ಅದಕ್ಕೊಂದು ಕ್ರಿಯಾಶೀಲ ಮತ್ತು ಸೃಜನಶೀಲತೆ ಇದೆ. ಅಧ್ಯಯನಯೋಗ್ಯವಾಗಿದೆ. ಈ ಹೊತ್ತು ಶೈಕ್ಷಣಿಕ ವಲಯದಲ್ಲಿ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಮುಖ್ಯವಾಹಿನಿಗೆ ಬಂದಿದೆ. ಮರೆತ ಕಾಲುದಾರಿಯಲ್ಲಿನ ಮಾನವ ಚರಿತ್ರೆಯ ಪ್ರತಿಬಿಂಬದಂತಿರುವ ಪಾರಂಪರಿಕ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಹೆಚ್ಚು ಹೆಚ್ಚು ಪ್ರದರ್ಶನ ಮತ್ತು ಪ್ರಯೋಗಗಳ ಮೂಲಕ ಉಳಿಸಿಕೊಳ್ಳಬೇಕಿದೆ ಎಂದರು. ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎ.ನಾಗರಾಜ್ ಮಾತನಾಡಿ, ಜಾಗತೀಕರಣ, ಖಾಸಗೀಕರಣ ಮತ್ತು ಆಧುನೀಕರಣದಿಂದ ಜಾನಪದ ಕಲೆಗಳು ಕಣ್ಮರೆಯಾಗಿದ್ದು, ದೇಶೀಯ ಭಾಷೆ ಮತ್ತು ಸಂಸ್ಕೃತಿಗೆ ಪೆಟ್ಟು ಬಿದ್ದಿದೆ. ಮೊಬೈಲ್, ಜಾಲತಾಣದ ಹಾವಳಿಯಿಂದ ಸಾಮಾಜಿಕ ಸಂಬಂಧ, ಮಾನವೀಯತೆ ಮರೆಯಾಗಿದೆ. ಸಾಹಿತ್ಯ, ಸಂಗೀತ, ರಂಗಕಲೆ ಕಡೆ ಬಂದಾಗ ಜನರು ಮಾನಸಿಕ ಖುಷಿ ಪಡೆಯುತ್ತಾರೆ ಎಂದು ಹೇಳಿದರು.

ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಡಿ.ಗೋಪಾಲಸ್ವಾಮಿ ನಾಯಕ್ ಮಾತನಾಡಿ, ಪ್ರಾಚೀನ ಕಾಲದ ಜನರು ತಮ್ಮ ಜೀವನದ ಆಸರೆ, ಬೇಸರ ಕಳೆಯಲು ಸಂಜೆಯ ಬಿಡುವಿನ ಸಮಯದಲ್ಲಿ ಹಾಡು, ಅಭಿನಯದ ಮೂಲಕ ಪ್ರಾರಂಭಿಸಿದ ಕಲೆ ಜನರಿಂದ ಜನರಿಗೆ, ಬಾಯಿಂದ ಬಾಯಿಗೆ ಮುಂದುವರೆದು ಜನಪದವಾಯಿತು. ಜನಪದ ಕಲೆ ಪ್ರಾಚೀನ ಗ್ರಾಮೀಣ ಭಾರತದ ತಾಯಿ ಬೇರಾಗಿದೆ ಎಂದು ತಿಳಿಸಿದರು.

ಸಂಗೀತವು ಕಾರ್ಯಕ್ಷಮತೆ, ಆರೋಗ್ಯ, ನೆಮ್ಮದಿ, ಯೋಗಕ್ಷೇಮ, ಏಕಾಗ್ರತೆ ಮತ್ತು ಬೌದ್ಧಿಕ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅಲ್ಲದೆ ಅಪಾರ ಶಾಂತಿಯನ್ನು ನೀಡುತ್ತದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಂಗೀತ ಕಲೆಯನ್ನು ಮೈಗೂಡಿಸಿಕೊಂಡು ಸಂಸ್ಕಾರವಂತರಾಗಬೇಕು. ಸಂಗೀತ ಕಲಾ ಪ್ರಕಾರಗಳನ್ನು ಅರಿತುಕೊಂಡು ಕಲೆ ಮತ್ತು ಕಲಾವಿದರನ್ನು ಪೋಷಿಸಬೇಕಿದೆ ಎಂದರು. ವದ್ದಿಕೆರೆಯ ಶ್ರೀ ಗುರು ಕರಿಬಸವೇಶ್ವರಸ್ವಾಮಿ ಮಠದ ವದ್ದಿಕೆರೆ ಕಾಂತರಾಜು, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ್ ಮಳಲಿ ಇದ್ದರು.

ಗಾರಡಿ ಗೊಂಬೆ, ಕೀಲು ಕುದುರೆ, ನವಿಲು ಕುಣಿತ, ಜಾನಪದ ಸಂಗೀತ, ಭಜನೆ, ಕೋಲಾಟ, ಕಹಳೆ, ಗೊರವ ಕುಣಿತ, ತತ್ವ ಪದಗಳ ಗಾಯನ ಕಾರ್ಯಕ್ರಮ ನಡೆಯಿತು.

ಮದಕರಿ ಯುವಕ ಸಂಘದ ಅಧ್ಯಕ್ಷ ಸೋಮಶೇಖರ್ ಸ್ವಾಗತಿಸಿದರು.

Share this article