ನಾಳೆ ಮೇಲುಕೋಟೆಯಲ್ಲಿ ಜಾನಪದ ಹಬ್ಬ: ರಥಸಪ್ತಮಿ ಮಹೋತ್ಸವಕ್ಕೆ ಸಜ್ಜು..!

KannadaprabhaNewsNetwork | Published : Feb 15, 2024 1:32 AM

ಸಾರಾಂಶ

ರಥಸಪ್ತಮಿ ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ ಭಾರತೀಯ ಸಂಸ್ಕೃತಿ, ಗ್ರಾಮೀಣ ಕಲಾಚಾರ ಪರಂಪರೆ ಅನಾವರಣಗೊಳಿಸುವ ಬೃಹತ್ ವೇದಿಕೆಯಾಗಿದೆ. ಜಾನಪದ ಕಲಾ ಮೇಳ ಫೆ.16ರಂದು ಮುಂಜಾನೆ 6 ಗಂಟೆಗೆ ಆರಂಭವಾಗಿ 10 ಗಂಟೆಗೆ ಮುಕ್ತಾಯವಾಗಲಿದೆ. ಇದೇ ವೇಳೆ ಸೂರ್ಯಮಂಡಲದಲ್ಲಿ ಅಲಂಕೃತನಾಗಿ ವಿಶೇಷ ಪುಷ್ಪಹಾರದಿಂದ ಕಂಗೊಳಿಸುವ ಶ್ರೀಚೆಲುವನಾರಾಯಣಸ್ವಾಮಿಗೆ 700ಕ್ಕೂ ಹೆಚ್ಚು ಜನಪದ ಕಲಾವಿದರು ಕಲಾರಾಧನೆಯ ಸೇವೆ ಮಾಡಲಿದ್ದಾರೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಮೇಲುಕೋಟೆಯಲ್ಲಿ ಫೆ.16ರಂದು ಶ್ರೀಚೆಲುನಾರಾಯಣಸ್ವಾಮಿ ರಥಸಪ್ತಮಿ ಮಹೋತ್ಸವ ಹಾಗೂ 25ನೇ ವರ್ಷದ ಜಾನಪದ ಹಬ್ಬಕ್ಕೆ ಸಿದ್ಧತೆಗಳು ನಡೆಯುತ್ತಿವೆ.

ರಥ ಸಪ್ತಮಿ ಉತ್ಸವಕ್ಕೆ ಸ್ವರ್ಣಲೇಪಿತ ಸೂರ್ಯ ಮಂಡಲವನ್ನು ಸಿದ್ಧ ಮಾಡಿ ದೇವಾಲಯದ ರಾಜಗೋಪುರ ಮತ್ತು ರಾಜಬೀದಿಗೆ ದೀಪಾಲಂಕಾರ ಮಾಡಲಾಗಿದೆ. ಇಡೀ ಉತ್ಸವ ಬೀದಿಗಳನ್ನು ತಳಿರು ತೋರಣಗಳಿಂದ ಸಿಂಗಾರ ಮಾಡಿ ರಾಜ ಬೀದಿಯಲ್ಲಿ ರಂಗವಲ್ಲಿ ಚಿತ್ತಾರಬಿಡಿಸಲು ಸಿದ್ಧತೆಮಾಡಲಾಗಿದೆ.

ಜಾನಪದ ಹಬ್ಬದಲ್ಲಿ ಪಾಲ್ಗೊಳ್ಳುವ ಮಹಿಳಾ ಮತ್ತು ಪುರುಷ ಕಲಾವಿದರಿಗೆ ಪ್ರತ್ಯೇಕ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. ಕಲಾವಿದರು ಹಾಗೂ ಶಾಲಾ ಮಕ್ಕಳು ತಮ್ಮ ಪ್ರತಿಭೆ ಅನಾವರಣಮಾಡಲು ಉತ್ಸುಕರಾಗಿದ್ದಾರೆ.

ಯತಿರಾಜದಾಸರ್ ಗುರುಪೀಠದ ಸ್ಥಾನೀಕಂ ನಾಗರಾಜ ಅಯ್ಯಂಗಾರ್ ಸಾಂಸ್ಕೃತಿಕ ವೇದಿಕೆ, ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಡೆದ ಜಾನಪದ ಹಬ್ಬದಲ್ಲಿ 60 ತಂಡಗಳ ಜೊತೆಗೆ ಮತ್ತಷ್ಟು ಕಲಾತಂಡಗಳು ಭಾಗವಹಿಸುವ ಸಾಧ್ಯತೆ ಇದೆ.

ರಥಸಪ್ತಮಿ ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ ಭಾರತೀಯ ಸಂಸ್ಕೃತಿ, ಗ್ರಾಮೀಣ ಕಲಾಚಾರ ಪರಂಪರೆ ಅನಾವರಣಗೊಳಿಸುವ ಬೃಹತ್ ವೇದಿಕೆಯಾಗಿದೆ. ಜಾನಪದ ಕಲಾ ಮೇಳ ಫೆ.16ರಂದು ಮುಂಜಾನೆ 6 ಗಂಟೆಗೆ ಆರಂಭವಾಗಿ 10 ಗಂಟೆಗೆ ಮುಕ್ತಾಯವಾಗಲಿದೆ. ಇದೇ ವೇಳೆ ಸೂರ್ಯಮಂಡಲದಲ್ಲಿ ಅಲಂಕೃತನಾಗಿ ವಿಶೇಷ ಪುಷ್ಪಹಾರದಿಂದ ಕಂಗೊಳಿಸುವ ಶ್ರೀಚೆಲುವನಾರಾಯಣಸ್ವಾಮಿಗೆ 700ಕ್ಕೂ ಹೆಚ್ಚು ಜನಪದ ಕಲಾವಿದರು ಕಲಾರಾಧನೆಯ ಸೇವೆ ಮಾಡಲಿದ್ದಾರೆ.

ಈ ವೈಭವೋಪೇತ ಜನಪದ ಕಲಾಸಿರಿಯನ್ನು ಕಣ್ತುಂಬಿಕೊಳ್ಳಲು ಸಂಘಟಕರಾದ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ, ಪತ್ರಕರ್ತೆ ಸೌಮ್ಯಸಂತಾನಂ, ಜನಪದಕಲಾವಿದ ಶಿವಣ್ಣಗೌಡ ಕೋರಿದ್ದಾರೆ.

ರಥ ಸಪ್ತಮಿ ಜಾನಪದ ರಸ ಸಂಜೆ:

ಫೆ.15 ರಂದು ಸಂಜೆ 6.30ಕ್ಕೆ ನಡೆಯುವ ರಥಸಪ್ತಮಿ ಜಾನಪದ ರಸ ಸಂಜೆಯಲ್ಲಿ ಜನಪದ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮೈಸೂರಿನ ವೀರಗಾಸೆ ಕಲಾವಿದ ಕೀರಾಳು ಮಹೇಶ್, ತಳಗವಾಡಿ ಕೋಲಾಟ ಕಲಾವಿದೆ ಮನುಜ, ಕೊತ್ತತ್ತಿಯ ಬೆಂಕಿಭರಾಟೆ ಕಲಾವಿದ ಕೃಷ್ಣ ಲಿಂಗದವೀರ, ದೊಡ್ಡಭೋಗನಹಳ್ಳಿ ಕನ್ಯಕುಮಾರ್ ಹಾಗೂ ಪೂಜಾಕುಣಿತ ಕಲಾವಿದ ಕೋರೇಗಾಲ ರಮೇಶ್‌ ಅವರನ್ನು ಸನ್ಮಾನಿಸಲಾಗುತ್ತಿದೆ. ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಉದ್ಘಾಟಿಸಲಿದ್ದು, ಹಲವು ಗಣ್ಯರು ಭಾಗವಹಿಸಲಿದ್ದಾರೆ. ನಂತರ ದೇಗುಲದ ಆವರಣದಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಶಾಲಾ ಮಕ್ಕಳ ನೃತ್ಯ, ಬೆಂಕಿ ಭರಾಟೆ ನಡೆಯಲಿದೆ.

Share this article