ಕಾರವಾರ: ಕಾಡಿನ ಹಕ್ಕಿ ಎಂದೇ ಪ್ರಸಿದ್ಧರಾಗಿದ್ದ ಜಾನಪದ ಹಾಡುಗಾರ್ತಿ, ಪದ್ಮಶ್ರೀ ಸುಕ್ರಿ ಬೊಮ್ಮ ಗೌಡ (91) ಗುರುವಾರ ನಸುಕಿನ 4 ಗಂಟೆ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ.
ಶ್ವಾಸಕೋಶ ಸಮಸ್ಯೆ, ಹೃದಯದ ತೊಂದರೆಯಿಂದ ಬಳಲುತ್ತಿದ್ದ ಅವರು ಅಂಕೋಲೆಯ ಬಡಗೇರಿಯಲ್ಲಿರುವ ಸ್ವಗೃಹದಲ್ಲಿ ನಿಧನರಾದರು. ಉಸಿರಾಟ ಸಮಸ್ಯೆಯಿಂದ ಸೋಮವಾರ ಮಂಗಳೂರಿನ ಆಸ್ಪತ್ರೆಗೆ ತೆರಳಿದ್ದರು. ತಪಾಸಣೆ ನಡೆಸಿದ ವೈದ್ಯರು ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದಾಗ ಅಂಕೋಲಾಕ್ಕೆ ಕರೆತರಲಾಗಿತ್ತು. ಬುಧವಾರವೂ ಎಂದಿನಂತೆ ಲವಲವಿಕೆಯಿಂದ ಮನೆಯವರೊಂದಿಗೆ ಮಾತನಾಡಿದ್ದರು.
ರಾತ್ರಿ ಮಲಗಿದ ಮೇಲೂ ಆಗೊಮ್ಮೆ ಈಗೊಮ್ಮೆ ಹಾ, ಹೂಂ ಎನ್ನುತ್ತಿದ್ದ ಸುಕ್ರಿ ಗೌಡ ಅವರ ಬಾಯಿಂದ ಶಬ್ದಗಳು ಹೊರಬರದೆ ಇರುವುದನ್ನು ಗಮನಿಸಿ ಮನೆಯವರು ಬಂದು ನೋಡಿದಾಗ ಉಸಿರಾಟ ನಿಲ್ಲಿಸಿದ್ದರು. ನಂತರ ವೈದ್ಯರು ಆಗಮಿಸಿ ಮೃತಪಟ್ಟಿರುವುದನ್ನು ಖಚಿತಪಡಿಸಿದರು.
ವಿವಾಹವಾದ ಕೆಲವೇ ವರ್ಷಗಳಲ್ಲಿ ಪತಿಯನ್ನು ಕಳೆದುಕೊಂಡಿದ್ದ ಅವರು, ನಂತರ ದತ್ತು ಪುತ್ರನನ್ನೂ ಕಳೆದುಕೊಂಡಿದ್ದರು. ಅವರಿಗೆ ಸೊಸೆ ಹಾಗೂ ಇಬ್ಬರು ಮೊಮ್ಮಕ್ಕಳು, ಅಪಾರ ಅಭಿಮಾನಿಗಳು ಇದ್ದಾರೆ.
ನಿರಕ್ಷರಿಯ ಬಾಯಲ್ಲಿ ನಿರರ್ಗಳ ಹಾಡು...
ವಸಂತಕುಮಾರ್ ಕತಗಾಲ
ಕಾರವಾರ: ಮೆಟ್ಟಿನಿಂತ ಭೂಮಿಗೆ ಶರಣೆಂಬೆ, ಮೆಟ್ಟಿನಿಂತ ಭೂಮಿಗೆ ಶರಣೆಂಬೆ ದ್ಯಾವರೆ, ಕಟ್ಟಿದಲೆ ಕವಲಿಗೆ ಶರಣೆಂಬೆ, ಕಟ್ಟಿದ ಕವಲಿಗೆ ಶರಣೆಂಬೆ ದ್ಯಾವರೆ...
ಸದಾ ಈ ಹಾಡನ್ನು ಗುನುಗುನಿಸುತ್ತಿದ್ದ ಹಾಡು ಹಕ್ಕಿ ಸುಕ್ರಿ ಬೊಮ್ಮು ಗೌಡ ಅದೇ ಭೂಮಿ ತಾಯಿ ಸೇರಿದಂತೆ ಪಂಚಭೂತಗಳಲ್ಲಿ ಲೀನವಾದರು.
ಹಳ್ಳಿಯಲ್ಲಿ ಜನಿಸಿ ಅಕ್ಷರವನ್ನೇ ಕಲಿಯದಿದ್ದರೂ ತನ್ನ ಹಾಡು, ಹೋರಾಟದಿಂದ ದೆಹಲಿಯ ತನಕ ವ್ಯಾಪಿಸಿ ವಿದ್ಯಾವಂತರನ್ನೂ ಬೆರಗುಗೊಳಿಸಿದ ಸಾಧನೆ ಸುಕ್ರಿ ಗೌಡ ಅವರದ್ದು.ಎದುರಿಗೆ ಏನೇ ಕಾಣಲಿ, ಪ್ರಚಲಿತ ವಿದ್ಯಮಾನವೇ ಆಗಲಿ, ಮಕ್ಕಳ ಲಾಲನೆ, ಪಾಲನೆ, ಪಟ್ಟ ಪಾಡು ಎಲ್ಲವೂ ಅಸ್ಖಲಿತವಾಗಿ ಹಾಡಾಗಿ ಸುಕ್ರಿಯ ಬಾಯಿಂದ ಹೊರಬರುತ್ತಿತ್ತು.
ಸಾರಾಯಿಯ ದುಷ್ಪರಿಣಾಮ ಕುಟುಂಬದಲ್ಲೇ ಕಂಡುಬಂದಾಗ ಸುಕ್ರಿ ಸಾರಾಯಿ ವಿರೋಧಿ ಆಂದೋಲನದಲ್ಲಿ ಧುಮುಕಿ ಜನಜಾಗೃತಿ ಮೂಡಿಸಿದರು. ತಮಗಾದ ನೋವು ಬೇರೆ ಕುಟುಂಬಕ್ಕೆ ಬಾರದಿರಲಿ ಎಂಬ ಉದಾತ್ತ ಮನೋಭಾವ ಪ್ರದರ್ಶಿಸಿದರು.ತಮಗೆ ಓದು- ಬರಹ ಬಾರದಿದ್ದರೂ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎಂದು ದಶಕಗಳ ಕಾಲ ಸಾಕ್ಷರತಾ ಆಂದೋಲನದಲ್ಲಿ ದುಡಿದರು. ಮದ್ಯಪಾನದ ವಿರುದ್ಧ ಹೋರಾಟ, ಅತಿಕ್ರಮಣದಾರರ ಸಮಸ್ಯೆಯ ಕುರಿತು ಸಿಡಿದು ನಿಂತು ಹೋರಾಟ ನಡೆಸಿದರು. ಅಲ್ಲದೇ ಹಾಲಕ್ಕಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆನ್ನುವ ತುಡಿತಕ್ಕೆ 5 ಬಾರಿ ದೆಹಲಿಗೆ ಪ್ರಯಾಣ ಬೆಳೆಸಿ ಹಾಲಕ್ಕಿಗಳ ಬವಣೆ ಕೇಂದ್ರದ ಕಣ್ಣಿಗೆ ಬೀಳುವಂತೆ ಮಾಡಿದವರು ಸುಕ್ರಿ.
ಸುಕ್ರಿ ಗೌಡ ಅವರು ಯಾವುದೆ ಪ್ರಶಸ್ತಿಗಾಗಿ ಅರ್ಜಿ ಹಾಕಲಿಲ್ಲ. ಆದರೆ, ಅವರನ್ನು ಹುಡುಕಿಕೊಂಡು ಪ್ರಶಸ್ತಿಗಳು ಸರದಿಯಲ್ಲಿ ನಿಂತಿದ್ದು ಮಹತ್ವದ ಸಂಗತಿ.2017ರಲ್ಲಿ ಪದ್ಮಶ್ರೀ ಪ್ರಶಸ್ತಿ ಇವರಿಗೆ ಸಂದ ಮೇರು ಪ್ರಶಸ್ತಿ. 1989ರಲ್ಲಿ ಕರ್ನಾಟಕ ಜಾನಪದ ಪ್ರಶಸ್ತಿ, 1999ರಲ್ಲಿ ಜಾನಪದಶ್ರೀ ಪ್ರಶಸ್ತಿ, 2003ರಲ್ಲಿ ಅಡಿಗ ಪ್ರಶಸ್ತಿ, 2017ರಲ್ಲಿ ನಾಡೋಜ ಗೌರವ, 2009ರಲ್ಲಿ ಆಳ್ವಾಸ ನುಡಿಸಿರಿ ಪ್ರಶಸ್ತಿ, 2010ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 2011ರಲ್ಲಿ ಮುಖ್ಯಮಂತ್ರಿಗಳಿಂದ ಬಂಗಾರದ ಪದಕ. ಜಿಲ್ಲೆ ಹಾಗೂ ರಾಜ್ಯಮಟ್ಟದ 80ಕ್ಕೂ ಹೆಚ್ಚು ಪ್ರಶಸ್ತಿಗಳು ಸುಕ್ರಿಯ ಮಡಿಲಿಗೆ ಸಂದಿವೆ.
ಪ್ರಧಾನಿ ನರೇಂದ್ರ ಮೋದಿ ಅಂಕೋಲಾ ಹಾಗೂ ಶಿರಸಿಗೆ ಬಂದಾಗ ಕೈಮುಗಿದ ಮೋದಿ ಅವರ ಮೈದಡವಿ, ತಲೆಯ ಮೇಲೆ ಕೈಯಿಟ್ಟು ಆಶೀರ್ವದಿಸಿದ ಮಹಾತಾಯಿ ಸುಕ್ರಿ. ಕೊರಳ ತುಂಬ ಮಣಿಸರ, ಗೇಟಿ ಕಟ್ಟಿದ ಸೀರೆ, ಕೈಖಡಗ ಧರಿಸಿ ಅಪ್ಪಟ ಹಾಲಕ್ಕಿ ಜನಾಂಗದ ಉಡುಗೆ ತೊಡುಗೆಯಿಂದ ಗಮನ ಸೆಳೆಯುತ್ತಿದ್ದ ಸುಕ್ರಿ, ತಮ್ಮ ನಿಷ್ಕಲ್ಮಶ ಹೃದಯದಿಂದ ಎಲ್ಲರ ಮನ ಗೆಲ್ಲುತ್ತಿದ್ದರು.