ಮುಂದಿನ ತಲೆಮಾರಿಗೆ ಜಾನಪದ ಸವಿಯನ್ನುಣಿಸಬೇಕು : ಬಾಲಾಜಿ

KannadaprabhaNewsNetwork | Published : Jul 22, 2024 1:26 AM

ಸಾರಾಂಶ

ಚಿಕ್ಕಮಗಳೂರು, ಜನರ ಆಚಾರ ವಿಚಾರ, ಬದುಕು ಭಂಡಾರವೇ ಜಾನಪದ ಸಾಹಿತ್ಯವಾಗಿ ಹೊರಹೊಮ್ಮಿದೆ. ಜಾನಪದ ಭಂಡಾರದ ಸೊಗಡನ್ನು ದಾಖಲಿಸಿಕೊಳ್ಳುವ ಮೂಲಕ ಮುಂದಿನ ತಲೆಮಾರಿನವರಿಗೆ ಜಾನಪದದ ಸವಿಯನ್ನುಣಿಸಬೇಕು ಎಂದು ಕನ್ನಡ ಜಾನಪದ ಪರಿಷತ್‌ನ ರಾಜ್ಯಾಧ್ಯಕ್ಷ ಡಾ. ಎಸ್‌. ಬಾಲಾಜಿ ಹೇಳಿದರು.

ಜಾನಪದ ಯುವ ಬ್ರಿಗೇಡ್ ಜಿಲ್ಲಾ ಘಟಕದ ಸೇವಾದೀಕ್ಷಾ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜನರ ಆಚಾರ ವಿಚಾರ, ಬದುಕು ಭಂಡಾರವೇ ಜಾನಪದ ಸಾಹಿತ್ಯವಾಗಿ ಹೊರಹೊಮ್ಮಿದೆ. ಜಾನಪದ ಭಂಡಾರದ ಸೊಗಡನ್ನು ದಾಖಲಿಸಿಕೊಳ್ಳುವ ಮೂಲಕ ಮುಂದಿನ ತಲೆಮಾರಿನವರಿಗೆ ಜಾನಪದದ ಸವಿಯನ್ನುಣಿಸಬೇಕು ಎಂದು ಕನ್ನಡ ಜಾನಪದ ಪರಿಷತ್‌ನ ರಾಜ್ಯಾಧ್ಯಕ್ಷ ಡಾ. ಎಸ್‌. ಬಾಲಾಜಿ ಹೇಳಿದರು.

ನಗರದ ಕನ್ನಡ ಭವನದಲ್ಲಿ ಭಾನುವಾರ ನಡೆದ ಜಾನಪದ ಯುವ ಬ್ರಿಗೇಡ್ ಜಿಲ್ಲಾ ಘಟಕದ ಸೇವಾದೀಕ್ಷಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿಂದಿನ ಕಾಲದ ದಾಸಯ್ಯರು ಕಾಣಸಿಗುವುದಿಲ್ಲ. ಗದ್ದೆ ನಾಟಿ ಮಾಡುವಾಗ ಹಿಂದೆಲ್ಲಾ ಜಾನಪದ ಹಾಡು ಹೇಳಿಕೊಂಡು ಕೆಲಸ ಮಾಡುತ್ತಿದ್ದರು. ಇಂದಿನ ಕಾಲಘಟ್ಟದಲ್ಲಿ ಅವುಗಳು ಮರೆಯಾಗುತ್ತಿರುವ ಹಿನ್ನೆಲೆ ಯಲ್ಲಿ ಜಾನಪದ ಮೂಲ ಸೊಗಡನ್ನು ಪ್ರತಿಬಿಂಬಿಸುವ ಕಲೆಗೆ ಪ್ರೋತ್ಸಾಹ ಕೊಡಬೇಕು ಎಂದು ತಿಳಿಸಿದರು.

ಕೃಷಿಯಿಂದ ಬೆಳೆದು ಬಂದ ಜಾನಪದ ಸಂಸ್ಕೃತಿ, ಮುಂದೆ ಜಾನಪದ ಸಾಹಿತ್ಯವಾಗಿ ಹುಟ್ಟಿಕೊಂಡಿತು. ಜಾನಪದ ಕಲೆ ಎಂದಿಗೂ ಗಟ್ಟಿಯಾಗಿ ತನ್ನದೇಯಾದ ಮಹತ್ವ ಪಡೆದು ಕೊಂಡಿದೆ. ಯಾವುದೇ ತಂತ್ರಿಕ ಯುಗವೇ ಬರಲಿ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ನಾಶವಾಗಲು, ಮೂಲೆ ಗುಂಪಾಗಲು ಸಾಧ್ಯವಿಲ್ಲ ಎಂದರು.ಜಾನಪದ ಎಂಬುದು ಜನರ ಬಾಯಿಂದ ಬಾಯಿಗೆ ಹರಡುತ್ತಾ ಪದವಾಗಿದೆ. ಪೌರಾಣಿಕ ಯುಗದಿಂದ ಇಂದಿನ ಮೊಬೈಲ್ ಯುಗದಲ್ಲೂ ಜಾನಪದ ಸಾಹಿತ್ಯಕ್ಕೆ ಮಹತ್ವ ಇದೆ. ಇದರ ಪ್ರಭಾವ ಎಂದಿಗೂ ಕಡಿಮೆಯಾಗುವುದಿಲ್ಲ, ಹೀಗಾಗಿ ಜಾನಪದ ವಿಷಯದ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಕಜಾಪ ನೂತನ ಜಿಲ್ಲಾ ಸಂಚಾಲಕ ವಿಜಯ್‌ಕುಮಾರ್ ಮಾತನಾಡಿ, ಪೂರ್ವಜರ ಕಾಲಘಟ್ಟದಲ್ಲಿ ಸೃಷ್ಟಿಗೊಂಡ ಸೋಬಾನೆ ಪದ, ತತ್ವಗೀತೆ, ರಂಗಗೀತೆ, ಸಾಂಪ್ರದಾಯಿಕ ಡೋಲು ವಾದನ, ಕಂಗೀಲು ಕುಣಿತ, ಕರಗ ಕೋಲಾಟ, ಪೂಜಾ ಕುಣಿತ, ಕಂಸಾಳೆ ಕುಣಿತ, ವೀರಗಾಸೆ, ಹುಲಿವೇಷ, ಗುಮಟೆ ಕುಣಿತ, ಹೂವಿನಕೋಲು, ಹಾಲಕ್ಕಿ ಸುಗ್ಗಿ ಕುಣಿತ ಆಧುನಿಕ ಕಾಲ ಘಟ್ಟದಲ್ಲಿ ಕಣ್ಮರೆಯಾಗಿವೆ. ಹೀಗಾಗಿ ಪುರಾತನ ಕಲೆ ಸಂಸ್ಕೃತಿಯನ್ನು ಮುಂದಿನ ಯುವ ಪೀಳಿಗೆಗೆ ಶಾಶ್ವತವಾಗಿ ಮುನ್ನಡೆಸುವ ಕಾರ್ಯ ಮಾಡಬೇಕಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಸಾಹಿತ್ಯಕ್ಷೇತ್ರ ದಲ್ಲಿ ಉತ್ತಮ ಸೇವೆ ಸಲ್ಲಿಸಲು ಮೂಲ ಬೇರು ಜಾನಪದವಾಗಿದೆ. ಹೀಗಾಗಿ ತಾಲೂಕು ಸಂಚಾಲಕರು ಮುಂಬರುವ ದಿನ ಗಳಲ್ಲಿ ಹೋಬಳಿ ಹಾಗೂ ಗ್ರಾಮ ಮಟ್ಟದಲ್ಲಿ ಸಂಚಾಲಕರನ್ನು ನೇಮಿಸಿ ಸ್ಥಳೀಯವಾಗಿ ಅನಾವರಣಗೊಳ್ಳುವ ಜಾನಪದ ಸಂಸ್ಕೃತಿ ಬೆಳೆಸಲು ಮುಂದಾಗಿ ಎಂದು ಕಿವಿಮಾತು ಹೇಳಿದರು.ಚಿಕ್ಕಮಗಳೂರು, ಮಲೆನಾಡು ಹಾಗೂ ಬಯಲುಸೀಮೆ ಹೊಂದಿದೆ. ಒಂದೊಂದು ಭಾಗದಲ್ಲಿ ವಿಭಿನ್ನ ಶೈಲಿಯಲ್ಲಿ ಜಾನಪದ ಸೊಗಡಿದೆ. ಆ ನಿಟ್ಟಿನಲ್ಲಿ ಎರಡು ಸಂಪ್ರದಾಯವನ್ನು ಪರಸ್ಪರ ಪರಿಚಯಿಸುವ ಕಾರ್ಯವಾಗಬೇಕು. ಅದರಂತೆ ಜಾನಪದ ಉಳಿವಿಗೆ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತಿರುವ ಬಾಲಾಜಿ ಅವರನ್ನು ಸರ್ಕಾರ ಜಾನಪದ ಅಕಾಡೆಮಿ ಅಧ್ಯಕ್ಷರ ನ್ನಾಗಿಸಬೇಕು ಎಂದು ಮನವಿ ಮಾಡಿದರು.ಇದೇ ವೇಳೆ ಕನ್ನಡ ಜಾನಪದ ಪರಿಷತ್ತಿನ ಯುವ ಬ್ರಿಗೇಡ್‌ಗೆ ಜಿಲ್ಲಾ ಸಂಚಾಲಕ ವಿಜಯ್ ಕುಮಾರ್, ತಾಲೂಕು ಸಂಚಾಲಕರಾದ ಟಿ.ಡಿ.ದಿಲೀಪ್, ಆಮಿತ್ ಆಚಾರ್ಯ, ಸಹ ಸಂಚಾಲಕರಾದ ಎಸ್.ಹರ್ಷಿತ್ ಕುಮಾರ್, ಜೋಯಲ್, ತೇಜಸ್, ಕುಮಾರೇಷನ್, ಸಂಜಯ್, ಕಲಾ ಪ್ರದರ್ಶನದಲ್ಲಿ ದುರ್ಗಾದೇವಿ, ಸಂಜಯ್ ಅವರಿಗೆ ರಾಜ್ಯಾಧ್ಯಕ್ಷರು ಸೇವಾಧೀಕ್ಷೆ ಬೋಧಿಸಿದರು. ಬಳಿಕ ಜಾನಪದ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವಿವಿಧ ಗಣ್ಯರನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ರಂಗಕರ್ಮಿ ಬಿ.ರವಿಕುಮಾರ್, ರಾಮನಗರ ಕಜಾಪ ಜಿಲ್ಲಾಧ್ಯಕ್ಷ ಕೆ.ಸಿ.ಕಾಂತಪ್ಪ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಆಶಾಕಿರಣ ಶಾಲೆ ವ್ಯವಸ್ಥಾಪಕ ಲಕ್ಷ್ಮಣಗೌಡ ನಿರೂಪಿಸಿದರು. ಆರ್.ಉಜ್ವಿನಿ ಪ್ರಾರ್ಥಿಸಿದರು. ಗಾಯಕಿ ರೂಪ ಸ್ವಾಗತಿಸಿದರು. ಉಪನ್ಯಾಸಕ ಸಿ.ಕೆ.ರಘು ವಂದಿಸಿದರು. 21 ಕೆಸಿಕೆಎಂ 6

ಚಿಕ್ಕಮಗಳೂರಿನ ಕನ್ನಡ ಭವನದಲ್ಲಿ ಭಾನುವಾರ ನಡೆದ ಜಾನಪದ ಯುವ ಬ್ರಿಗೇಡ್ ಜಿಲ್ಲಾ ಘಟಕದ ಸೇವಾದೀಕ್ಷಾ ಕಾರ್ಯಕ್ರಮವನ್ನು ರಾಜ್ಯಾಧ್ಯಕ್ಷ ಡಾ. ಎಸ್‌. ಬಾಲಾಜಿ ಉದ್ಘಾಟಿಸಿದರು. ಸೂರಿ ಶ್ರೀನಿವಾಸ್‌, ವಿಜಯ್‌ಕುಮಾರ್‌, ಪುಲಿಕೇಶಿ ಇದ್ದರು.

Share this article