ಅನಾರೋಗ್ಯಕ್ಕೆ ಆಹಾರವೇ ಔಷಧ!

KannadaprabhaNewsNetwork | Published : Nov 29, 2023 1:15 AM

ಸಾರಾಂಶ

ಇತ್ತೀಚೆಗೆ ಧಾರವಾಡದಲ್ಲಿ ಆರೋಗ್ಯದ ವಿಷಯದಲ್ಲಿ ಹೊಸ ಮತ್ತು ಆಶಾದಾಯಕ ಬೆಳವಣಿಗೆಗಳು ನಡೆಯುತ್ತಿವೆ. ರಿಫೈನ್ಡ್‌ ಎಣ್ಣೆ ಬದಲು ಸಾಂಪ್ರದಾಯಿಕ ಗಾಣದ (ಕೋಲ್ಡ್ ಕಾಂಪ್ರೆಸ್ಡ್) ಎಣ್ಣೆ ತಯಾರಿಕೆ ಜತೆಗೆ ಬಳಕೆಯೂ ಹೆಚ್ಚಿದೆ.

ಬಸವರಾಜ ಹಿರೇಮಠ

ಕನ್ನಡಪ್ರಭ ವಾರ್ತೆ ಧಾರವಾಡ

ಇತ್ತೀಚೆಗೆ ಧಾರವಾಡದಲ್ಲಿ ಆರೋಗ್ಯದ ವಿಷಯದಲ್ಲಿ ಹೊಸ ಮತ್ತು ಆಶಾದಾಯಕ ಬೆಳವಣಿಗೆಗಳು ನಡೆಯುತ್ತಿವೆ. ರಿಫೈನ್ಡ್‌ ಎಣ್ಣೆ ಬದಲು ಸಾಂಪ್ರದಾಯಿಕ ಗಾಣದ (ಕೋಲ್ಡ್ ಕಾಂಪ್ರೆಸ್ಡ್) ಎಣ್ಣೆ ತಯಾರಿಕೆ ಜತೆಗೆ ಬಳಕೆಯೂ ಹೆಚ್ಚಿದೆ. ಹೆಚ್ಚಿನ ಪ್ರಮಾಣದ ಸಾವಯವ ಕೃಷಿ ವಸ್ತುಗಳ ಉತ್ಪಾದನೆ ಮಾರಾಟ, ಸ್ವದೇಶಿ ಮತ್ತು ಗೃಹ ಕೈಗಾರಿಕಾ ವಸ್ತುಗಳ ಉತ್ಪಾದನೆ ಹಾಗೂ ಮಾರಾಟದಲ್ಲಿ ಏರಿಕೆ ಕಂಡಿದೆ. ಜತೆಗೆ ಯೋಗ ಮತ್ತು ಆಯುರ್ವೇದದಲ್ಲಿ ಹೆಚ್ಚಿನ ಜನರು ಆಸಕ್ತಿ ವಹಿಸುತ್ತಿದ್ದಾರೆ.

ಧಾರವಾಡ ಸಮೀಪದ ಮನಗುಂಡಿ ಬಸವಾನಂದ ಸ್ವಾಮೀಜಿ ಹಲವು ವರ್ಷಗಳಿಂದ ಉಪವಾಸ ಚಿಕಿತ್ಸೆ ಸಹ ಯಶಸ್ವಿಯಾಗಿದ್ದನ್ನು ಸ್ಮರಿಸಬಹುದು. ಇದೀಗ ಮುಂದುವರಿದ ಭಾಗವಾಗಿ ರಾಜೀವ್‌ ದೀಕ್ಷಿತ್‌ ವಿಚಾರ ವೇದಿಕೆ ಮೂಲಕ ಸ್ವದೇಶಿ ಅಭಿಮಾನಿಗಳು ಅಲೋಪಥಿಕ್, ಆಯುರ್ವೇದದಂತಹ ಯಾವುದೇ ಚಿಕಿತ್ಸಾ ಪದ್ಧತಿ ಬಳಸದೇ ಬರೀ ಆಹಾರದ ಪದ್ಧತಿ ಬದಲಾವಣೆ ಮಾಡುವ ಮೂಲಕ ರೋಗಗಳನ್ನು ಗುಣಮುಖ ಮಾಡುವ ಹೊಸ ಚಿಂತನೆಯೊಂದನ್ನು ಹುಟ್ಟು ಹಾಕಿದ್ದಾರೆ.

ಪ್ರಕರಣ - 1

ಮುಗದ ಗ್ರಾಮದ ದೇವೇಂದ್ರಪ್ಪ ಚವ್ಹಾಣ ಎಂಬವರಿಗೆ ಮೆದೋಜೀರಕ ಗ್ರಂಥಿಯ ಕ್ಯಾನ್ಸರ್ ಆಗಿ ಕೊನೆ ಹಂತದಲ್ಲಿದ್ದರು. ಊಟ ಹೋಗದೇ 60ರಿಂದ 30 ಕೆಜಿಗೆ ತೂಕ ಇಳಿಕೆಯಾಗಿತ್ತು. ಕೀಮೋಥೆರಪಿ ಪಡೆದಾಗೊಮ್ಮೆ ಹುಷಾರಾಗಿರುತ್ತಿದ್ದ ಅವರು ನಂತರ ಮತ್ತೆ ನೋವಿನಿಂದ ನರಳುತ್ತಿದ್ದರು. ವೈದ್ಯರು ಆರು ತಿಂಗಳು ಸಮಯ ಸಹ ನೀಡಿದ್ದರು. ಡೆಹರಾಡೂನ್‌ ಥರ್ಡ್‌ ಐ ಆಸ್ಪತ್ರೆಯ ವೈದ್ಯರಾದ ಡಾ. ಅವದೇಶಪಾಂಡೆ ಮಾರ್ಗದರ್ಶನದಲ್ಲಿ ಮನೆ ಮದ್ದು ಹಾಗೂ ಆಹಾರ ಪದ್ಧತಿ ಮತ್ತು ಉತ್ತಮ ಜೀವನ ಶೈಲಿ ಅಳವಡಿಸಿಕೊಳ್ಳುವ ಮೂಲಕ ಇದೀಗ ದೇವೇಂದ್ರಪ್ಪ ಸಂಪೂರ್ಣ ಗುಣಮುಖರಾಗಿದ್ದಾರೆ. ಜತೆಗೆ ಆಹಾರ ಪದ್ಧತಿಯ ಬಗ್ಗೆ ಉಳಿದವರಿಗೂ ಪ್ರಚಾರ ಮಾಡುತ್ತಿದ್ದಾರೆ.

ಪ್ರಕರಣ - 2

ಪರಿಸರ ಸ್ನೇಹಿ ಗಣಪತಿ ಮೂರ್ತಿ ಕಲಾವಿದ ಮಂಜುನಾಥ ಹಿರೇಮಠ ಅವರಿಗೆ ಕಳೆದ ವರ್ಷ ಹೃದಯಕಾಯಿಲೆ ಬಂದಿತ್ತು. ಸ್ಟಂಟ್‌ ಹಾಕದೇ ಇದ್ದರೆ ತುಂಬ ಕಷ್ಟ ಎಂದು ಖಾಸಗಿ ಆಸ್ಪತ್ರೆ ವೈದ್ಯರು ಹೇಳಿದ್ದರು. ಜತೆಗೆ ನಿತ್ಯ ಮಾತ್ರೆಗಳನ್ನು ನುಂಗುವುದು ಕಡ್ಡಾಯವಾಗಿತ್ತು. ಅವರು ಸಹ ಆಹಾರ ಪದ್ಧತಿಯಲ್ಲಿ ಬದಲಾವಣೆ ಹಾಗೂ ಮನೆ ಮದ್ದಿನ ಮೂಲಕವೇ ಸಂಪೂರ್ಣ ಗುಣಮುಖರಾಗಿದ್ದಾರೆ. ಜತೆಗೆ ನಿತ್ಯ ತೆಗೆದುಕೊಳ್ಳುತ್ತಿದ್ದ ಮಾತ್ರೆಗಳನ್ನು ಕೈ ಬಿಟ್ಟಿದ್ದಾರೆ. ಮೊದಲು 80 ಕೆಜಿ ತೂಕವಿದ್ದ ಅವರು ಇದೀಗ 60 ಕೆಜಿಗೆ ತೂಕ ಇಳಿಕೆಯಾಗಿದ್ದು ಮತ್ತಷ್ಟು ಆರೋಗ್ಯರಾಗಿದ್ದಾರೆ. ಇಂತಹ ನೂರಾರು ಉದಾರಣೆಗಳಿವೆ.

ಈ ಕುರಿತು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ ರಾಜೀವ್ ದೀಕ್ಷಿತ ವಿಚಾರ ವೇದಿಕೆಯ ಹಿರಿಯ ಸದಸ್ಯರಾದ ಎಂ.ಡಿ. ಪಾಟೀಲ, ಪ್ರಸ್ತುತ ಜೀವನ ಶೈಲಿ, ಒತ್ತಡದ ಉದ್ಯೋಗ, ಅಶುದ್ಧ ಆಹಾರದಿಂದಾಗಿ ಆಗಾಗ ಅನಾರೋಗ್ಯಕ್ಕೆ ತುತ್ತಾಗುವುದು ಸಾಮಾನ್ಯವಾಗಿದೆ. ಇದರೊಂದಿಗೆ ಕ್ಯಾನ್ಸರ್‌, ಹೃದಯ ಕಾಯಿಲೆ, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕಿಡ್ನಿ ಸಮಸ್ಯೆ ಸೇರಿದಂತೆ ಹತ್ತಾರು ರೋಗಗಳು ಚಿಕ್ಕ ವಯಸ್ಸಿನಲ್ಲಿಯೇ ಕೂಡಿಕೊಂಡು ಆಸ್ಪತ್ರೆಗೆ ಲಕ್ಷಾಂತರ ಹಣ ಖರ್ಚು ಮಾಡುವವರಿದ್ದಾರೆ. ಇದರಿಂದಾಗಿ ಮಾನಸಿಕ ಹಾಗೂ ದೈಹಿಕವಾಗಿ ಕುಗ್ಗುವವರೇ ಜಾಸ್ತಿ. ಈ ಹಿನ್ನೆಲೆಯಲ್ಲಿ ಡೆಹರಾಡೂನ್‌ ಡಾ. ಅವದೇಶಪಾಂಡೆ ಅವರ ಮಾರ್ಗದರ್ಶನದಲ್ಲಿ ನಾವು ಯಾವುದೇ ಖರ್ಚು ವೆಚ್ಚವಿಲ್ಲದೇ ಮನೆ ಮದ್ದು, ಆಹಾರ ಪದ್ಧತಿ ಹಾಗೂ ಯೋಗದ ಮೂಲಕ ರೋಗಗಳನ್ನು ಗುಣಪಡಿಸುವ ಹೊಸ ಪ್ರಯೋಗಕ್ಕೆ ಕೈ ಹಾಕಲಾಗಿದೆ ಎಂದರು.

ತಜ್ಞರಿದ್ದಾರೆ..

ಡಾ. ಅವದೇಶಪಾಂಡೆ ಅವರ ಬಳಿ ಹೋಗಿ ಧಾರವಾಡದ ಡಾ. ಚಾರುತಲಾ, ಡಾ. ಚಿದಾನಂದ ರಾಮನಗೌಡರ, ಡಾ. ವೀಣಾ ಎಂಬುವರು ತರಬೇತಿ ಸಹ ಪಡೆದಿದ್ದು ಸ್ಥಳೀಯ ರೋಗಿಗಳಿಗೆ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಹೆಚ್ಚಿನ ಮಾರ್ಗದರ್ಶನ ಬೇಕಿದ್ದರೆ ವಿಡಿಯೋ ಕಾನ್ಫರೆನ್ಸ್ ಮೂಲಕ ಡಾ. ಅವದೇಶಾಂಡೆ ಅವರಿಂದ ಮಾರ್ಗದರ್ಶನ ಪಡೆಯಲಾಗುತ್ತದೆ. ದೇಹದ ಬೆಳವಣಿಗೆ ಹಾಗೂ ಆರೋಗ್ಯಕ್ಕೆ ಆಹಾರ ಎಷ್ಟು ಮುಖ್ಯವೋ ಅಷ್ಟೇ ಅನಾರೋಗ್ಯಕ್ಕೂ ಮುಖ್ಯ ಎಂಬುದನ್ನು ತಿಳಿದುಕೊಳ್ಳಬೇಕು. ಈ ತಿಳಿವಳಿಕೆಯನ್ನು ರಾಜೀವ ದೀಕ್ಷಿತ್‌ ವಿಚಾರ ವೇದಿಕೆ ವತಿಯಿಂದ ಧಾರವಾಡದ ಹಲವು ಕಡೆಗಳಲ್ಲಿ ಶಿಬಿರಗಳನ್ನು ಮಾಡುವ ಮೂಲಕ ಜನರಿಗೆ ತಿಳಿವಳಿಕೆ ಹೇಳಲಾಗುತ್ತಿದೆ ಎಂದ ಅವರು, ಆಹಾರ ಪದ್ಧತಿ, ಯೋಗ ಸೇರಿದಂತೆ ಆಹಾರವೇ ಔಷಧ ಕುರಿತು ಮಾಹಿತಿ ಬೇಕಿದ್ದರೆ ತಮ್ಮನ್ನು (ಮೊ. 9448360021) ಸಂಪರ್ಕಿಸಬಹುದು ಎಂದು ಹೇಳಿದರು.

Share this article