ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ನಿಯಮ ಹಾಗೂ ನಿಬಂಧನೆಗಳ ಅನುಸಾರ ಅಂಗನವಾಡಿ, ಶಾಲೆ, ಹಾಸ್ಟೆಲ್‍ಗಳು ಆಹಾರ ಸುರಕ್ಷತೆ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಆಹಾರ ಸುರಕ್ಷತಾ ಅಧಿಕಾರಿಗಳು ಆಹಾರ ಗುಣಮಟ್ಟದ ಖಾತ್ರಿ ಕುರಿತು ನಿಯಮಿತವಾಗಿ ತಪಾಸಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಸೂಚನೆ ನೀಡಿದರು.ಮಂಗಳವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಕುರಿತು ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಹಾರ ಸೇವಿಸುವ ಮಕ್ಕಳ ಸುರಕ್ಷತೆ ಪ್ರಮುಖವಾದದು. ಮಧ್ಯಾಹ್ನದ ಬಿಸಿ ಊಟ ನೀಡುವ ಶಾಲೆಗಳು, ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಸ್ಟೆಲ್‍ಗಳು, ಅಂಗನವಾಡಿಗಳು ತಪ್ಪದೇ ಆಹಾರ ಸುರಕ್ಷತೆಯ ನೋಂದಣಿ ಮಾಡಿಕೊಳ್ಳಬೇಕು. ಮಕ್ಕಳಿಗೆ ಊಟ ತಯಾರಿಸುವ ಬಾಣಸಿಗರು ಹಾಗೂ ಬಡಿಸುವರ ವೈದ್ಯಕೀಯ ಪ್ರಮಾಣ ಪತ್ರ ಪಡೆಯಬೇಕು. ಬಳಸುವ ನೀರಿನ ಪರೀಕ್ಷೆ ಮಾಡಿಸಬೇಕು. ಅಡುಗೆಗೆ ಬಳಸುವ ಆಹಾರ ಪದಾರ್ಥಗಳ ಗುಣಮಟ್ಟದ ಜೊತೆಗೆ ಸ್ಪಚ್ಛತೆಗೂ ಆದ್ಯತೆ ನೀಡಬೇಕು. ಆಹಾರ ಸುರಕ್ಷತೆ ಪ್ರಮಾಣ ಪತ್ರ ಪಡೆಯುವುದರಿಂದ ಅಡುಗೆ ತಯಾರಕರು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬಹುದು ಎಂದರು.ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ. ಪಾಲಾಕ್ಷ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೆ 450 ಶಾಲೆಗಳು ನೋಂದಣಿ ಮಾಡಿಕೊಂಡಿದ್ದು, ಇನ್ನೂ ಸುಮಾರು 2,000 ಶಾಲೆಗಳ ನೋಂದಣಿ ಬಾಕಿಯಿದೆ. ಶಾಲೆ, ಹಾಸ್ಟೆಲ್, ಅಂಗನವಾಡಿ ಕಾರ್ಯಕರ್ತೆಯರಿಗೆ ಆಹಾರ ಸುರಕ್ಷತೆ ಹಾಗೂ ಪಾಲಿಸಬೇಕಾದ ನಿಯಮಗಳ ಕುರಿತು ಕಾರ್ಯಾಗಾರ ಆಯೋಜಿಸಲಾಗುತ್ತಿದೆ ಎಂದರು.
ನಗರಸಭೆ ಸೇರಿ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಆಹಾರ ಪದಾರ್ಥಗಳ ವ್ಯಾಪಾರಿಗಳಿಗೆ ಪರವಾನಗಿ ಹಾಗೂ ಅನುಮತಿ ಪತ್ರ ನೀಡುವ ಮೊದಲು ಆಹಾರ ಸುರಕ್ಷತೆಯ ನೋಂದಣಿ ಮಾಡುವಂತೆ ಷರತ್ತು ವಿಧಿಸಬೇಕು. ನೋಂದಣಿ ಮಾಡಿಕೊಳ್ಳದ ಆಹಾರ ಪದಾರ್ಥಗಳ ವ್ಯಾಪಾರಿಗಳ ಪರವಾನಗಿ ರದ್ದು ಮಾಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೆಂಕಟೇಶ್.ಟಿ ಸೂಚನೆ ನೀಡಿದರು.ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ನಗರಸಭೆ, ಪುರಸಭೆ, ಸ್ಥಳೀಯ ಸಂಸ್ಥೆಗಳು ಸೇರಿದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳೊಂದಿಗೆ ಕೈ ಜೋಡಿಸಿ ಆಹಾರ ಸುರಕ್ಷತೆ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಹೋಟೆಲ್ ಹಾಗೂ ಬೀದಿ ಬದಿಯ ಆಹಾರ ಪದಾರ್ಥಗಳ ಮಾರಾಟ ಮಾಡುವ ಸ್ಥಳಗಳಿಗೆ ಭೇಟಿ ನೀಡಿ ನಿಯಮಿತವಾಗಿ ಗುಣಮಟ್ಟ ಹಾಗೂ ಸ್ವಚ್ಛತೆ ಬಗ್ಗೆ ತಪಾಸಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.೨ ಅಂಗನವಾಡಿ ಮಾತ್ರ ನೋಂದಣಿ
ಜಿಲ್ಲೆಯಲ್ಲಿ ೨೪೨೮ ಅಂಗನವಾಡಿ ಕೇಂದ್ರಗಳಿವೆ. ಆದರೆ ಆಹಾರ ಸುರಕ್ಷತೆ ಅಡಿಯಲ್ಲಿ ಕೇವಲ ೨ ಅಂಗನವಾಡಿಗಳು ಮಾತ್ರ ನೋಂದಣಿ ಮಾಡಿಸಿಕೊಂಡಿವೆ. ಉಳಿದ ಅಂಗನವಾಡಿಗಳು ಆಯಾಯ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಆಹಾರ ಸುರಕ್ಷತೆ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಭಾರತಿ ಬಣಕಾರ್ ತಿಳಿಸಿದರು.