ಕನ್ನಡಪ್ರಭ ವಾರ್ತೆ ಮಡಿಕೇರಿ
ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ ಇದೇ ಏ.26ರಿಂದ 45 ದಿನಗಳ ಕಾಲ 7ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನ ನಡೆಯಲಿದ್ದು, ಈ ಕಾರ್ಯಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೂಚಿಸಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಸಂಬಂಧ ಬುಧವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ರೈತರಿಗೆ ಆರ್ಥಿಕ ಸಂಕಷ್ಟ ಉಂಟುಮಾಡುವ ಕಾಲುಬಾಯಿ ರೋಗವನ್ನು ನಿಯಂತ್ರಿಸುವಲ್ಲಿ ಎಲ್ಲರೂ ಮುಂದಾಗಬೇಕು. ಸರ್ಕಾರದ ನಿರ್ದೇಶನದಂತೆ ಜಾನುವಾರುಗಳಿಗೆ ಲಸಿಕಾ ಅಭಿಯಾನ ಕೈಗೊಳ್ಳುವಂತೆ ಸಲಹೆ ನೀಡಿದರು.ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಲಿಂಗರಾಜ ದೊಡ್ಡಮನಿ ಮಾತನಾಡಿ, ಕಾಲುಬಾಯಿ ರೋಗವು ವೈರಾಣುನಿಂದ ಬರುವ ಅಂಟು ಜಾಡ್ಯವಾಗಿದ್ದು, ಲಸಿಕೆ ಹಾಕುವುದರಿಂದ ಕಾಲುಬಾಯಿ ರೋಗವನ್ನು ನಿಯಂತ್ರಿಸಬಹುದಾಗಿದೆ. ಕಾಲುಬಾಯಿ ರೋಗವು ಎತ್ತು, ಹೋರಿ, ಹಸು, ಎಮ್ಮೆ ಮತ್ತು ಹಂದಿಗಳಿಗೆ ತಗಲುವ ಮಾರಕ ರೋಗವಾಗಿದ್ದು, ಇದನ್ನು ತಡೆಯುವುದು ಅಭಿಯಾನದ ಉದ್ದೇಶವಾಗಿದೆ ಎಂದರು.
ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ಮಡಿಕೇರಿ 9448647276, ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ಸೋಮವಾರಪೇಟೆ 9980360200, ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ವಿರಾಜಪೇಟೆ 9901303996, ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ಕುಶಾಲನಗರ 9448422269 ಹಾಗೂ ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ಪೊನ್ನಂಪೇಟೆ 9740556311 ನ್ನು ಸಂಪರ್ಕಿಸಬಹುದು ಎಂದು ಲಿಂಗರಾಜ ದೊಡ್ಡಮನಿ ವಿವರಿಸಿದರು.ಪಾಲಿಕ್ಲಿನಿಕ್ ಉಪ ನಿರ್ದೇಶಕ ಡಾ.ತಿಮ್ಮಯ್ಯ, ನೋಡಲ್ ಅಧಿಕಾರಿ ಡಾ.ಶಿಲ್ಪ, ತಾಲೂಕು ಪಶು ವೈದ್ಯಾಧಿಕಾರಿಗಳಾದ ಡಾ.ಪ್ರಸನ್ನ, ಡಾ.ರಾಜಶೇಖರ್, ಡಾ.ಗಿರೀಶ್, ಡಾ.ನವೀನ್, ಡಾ.ಶಿಂದೆ, ಸಂಚಾರಿ ಪಶುಚಿಕಿತ್ಸಾ ಘಟಕದ ಡಾ.ಶರತ್, ಹಾಸನ ಕೆಎಂಎಫ್ ಪ್ರಧಾನ ವ್ಯವಸ್ಥಾಪಕ ಡಾ.ರೂಪೇಶ್ ಕುಮಾರ್ ಇತರರು ಇದ್ದರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಭಿತ್ತಿಪತ್ರ ಬಿಡುಗಡೆ ಮಾಡಿದರು.