ಧಾರವಾಡ:
ಕೇಂದ್ರ ಪುರಸ್ಕೃತ ರಾಷ್ಟ್ರೀಯ ಕಾಲು ಬಾಯಿ ರೋಗ ನಿಯಂತ್ರಣ ಲಸಿಕೆ ಅಭಿಯಾನವನ್ನು ಜಿಲ್ಲೆಯಾದ್ಯಂತ ನ. 3ರಿಂದ ಡಿ. 2ರ ವರೆಗೆ ಹಮ್ಮಿಕೊಳ್ಳಲಾಗಿದೆ.ಜಿಪಂ ಭವನದಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಈ ಕುರಿತು ಮಾತನಾಡಿ, ರೈತರು, ಪಶುಪಾಲನೆ ಮಾಡುವವರು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯೊಂದಿಗೆ ಸಹಕರಿಸಿ ತಮ್ಮಲ್ಲಿರುವ ಎಲ್ಲ ಜಾನುವಾರುಗಳಿಗೆ ಲಸಿಕೆ ಹಾಕಿಸಿಕೊಳ್ಳಲು ಗ್ರಾಮಮಟ್ಟದಲ್ಲಿ ಅಧಿಕಾರಿಗಳು ಮಾಹಿತಿ ನೀಡಿ, ಜಾಗೃತಿ ಮೂಡಿಸಲು ತಿಳಿಸಿದರು.
ಕೇಂದ್ರ ಪುರಸ್ಕೃತ ಯೋಜನೆ, ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮ ಅಡಿಯಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಲಸಿಕೆ ನೀಡಿ 20230ರೊಳಗಾಗಿ ರೋಗ ನಿರ್ಮೂಲನೆ ಮಾಡುವ ಯೋಜನೆ ಇದೆ. ಇದರಿಂದ ಜಾನುವಾರುಗಳ ಉತ್ಪಾದನೆ ಹೆಚ್ಚಾಗುವ ಜತೆಗೆ , ಜಾನುವಾರು ಉತ್ಪನ್ನಗಳ ರಫ್ತಿಗೆ ಅವಕಾಶವಿದೆ. ಈ ಮೂಲಕ ರೈತರ ಆದಾಯ ಹೆಚ್ಚಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.ನ. 3ರಿಂದ ಡಿ. 2ರ ವರೆಗೆ 8ನೇ ಸುತ್ತಿನ ಕಾಲು ಬಾಯಿ ಬೇನೆ ಲಸಿಕೆ ಅಭಿಯಾನ ನಡೆಯಲಿದ್ದು, ಸುಮಾರು 1,34,986 ದನ ಮತ್ತು 45,247 ಎಮ್ಮೆಗಳಿಗೆ ರೈತರ ಮನೆಬಾಗಿಲಲ್ಲೇ ಉಚಿತವಾಗಿ ಲಸಿಕೆ ಹಾಕಲಾಗುವುದು ಎಂದರು.ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಎಸ್.ವಿ. ಸಂತಿ ಮಾತನಾಡಿ, ಅಭಿಯಾನ ಯಶಸ್ವಿಗಾಗಿ ಎಲ್ಲ ಗ್ರಾಮ, ಪಟ್ಟಣವನ್ನು ಸುಮಾರು 100 ಜಾನುವಾರು ಹೊಂದಿರುವ 1,779 ಬ್ಲಾಕ್‌ಗಳನ್ನಾಗಿ ವಿಂಗಡಿಸಿ, ಮೈಕ್ರೋಪ್ಯಾನ್ ಸಿದ್ಧಪಡಿಸಲಾಗಿದೆ. ಪ್ರತಿ ಬ್ಲಾಕ್‌ನಲ್ಲಿರುವ ಜಾನುವಾರು ಮಾಲೀಕರ ಮಾಹಿತಿ ಸಂಗ್ರಹಿಸಲಾಗಿದೆ ಹಾಗೂ ಲಸಿಕೆದಾರರ 110 ತಂಡ ರಚಿಸಲಾಗಿದೆ. ಇಬ್ಬರು ಲಸಿಕೆದಾರರ ಒಂದು ತಂಡ ಪ್ರತಿ ದಿನ ಒಂದು ಬ್ಲಾಕ್‌ಗೆ ಭೇಟಿ ನೀಡಿ ಎಲ್ಲ ಜಾನುವಾರುಗಳಿಗೆ ಲಸಿಕೆ ನೀಡಲಾಗುವುದು ಎಂದರು.
ಅಭಿಯಾನ ಕಾರ್ಯಕ್ರಮಕ್ಕೆ ಬೇಕಾಗಿರುವ 1.9 ಲಕ್ಷ ಡೋಸ್ ಲಸಿಕೆ ಸರಬರಾಜಾಗಿದ್ದು, ಸಿರಿಂಜ್, ಪ್ರಚಾರ ಸಾಮಗ್ರಿ, ತುರ್ತು ಔಷಧ ಇತ್ಯಾದಿಗಳನ್ನು ಸಂಗ್ರಹಿಸಲಾಗಿದೆ ಎಂದರು.ಪಶುಪಾಲನಾ ಇಲಾಖೆಯ ನವಲಗುಂದ ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿ ಡಾ. ಮೋಹನ ದ್ಯಾಬೇರಿ, ಜಿಪಂ ಸಿಇಒ ಭುವನೇಶ ಪಾಟೀಲ, ಪ್ರೊಬೇಷನರಿ ಐಎಎಸ್ ಅಧಿಕಾರಿ ರೀತಿಕಾ ವರ್ಮಾ ಸೇರಿ ವಿವಿಧ ಇಲಾಖಾಧಿಕಾರಿಗಳಿದ್ದರು.