ಹಿರೇಕೆರೂರು: ಹಿರೇಕೆರೂರ-ರಟ್ಟೀಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ವಿವಿಧ ಕಾಮಗಾರಿಗಳಿಗಾಗಿ ಪ್ರವಾಸೋದ್ಯಮ ಇಲಾಖೆ ಕೆ.ಟಿಐ.ಎಲ್ ಸಂಸ್ಥೆಯ ಮೂಲಕ ೧.೩೦ ಕೋಟಿ ರು.ಗಳನ್ನು ಮಂಜೂರು ಮಾಡಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ಪಟ್ಟಣದ ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಕಾಮಗಾರಿಗಳಿಗಾಗಿ ಕೈಗೊಳ್ಳಲು ಪ್ರವಾಸೋದ್ಯಮ ಇಲಾಖೆಗೆ ೨ ಕೋಟಿ ರು.ಗಳ ಬೇಡಿಕೆಯ ಮನವಿ ಸಲ್ಲಿಸಲಾಗಿತ್ತು, ಮನವಿಗೆ ಸ್ಪಂದಿಸಿದ ಪ್ರವಾಸೋದ್ಯಮ ಸಚಿವರಾದ ಎಚ್.ಕೆ. ಪಾಟೀಲ ಅವರು ೧.೩೦ ಕೋಟಿ ಅನುದಾನ ನೀಡಿದ್ದು, ತಾಲೂಕಿನ ಹಲವಾರು ಗ್ರಾಮದ ಜನರು ಬಹು ದಿನಗಳಿಂದ ತಮ್ಮ ಗ್ರಾಮಗಳ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಯಾತ್ರಿ ನಿವಾಸಗಳ ನಿರ್ಮಾಣಕ್ಕಾಗಿ ಹಣ ನೀಡುವಂತೆ ಬೇಡಿಕೆಯನ್ನು ಸಲ್ಲಿಸಿದ್ದರು. ಅವರ ಬೇಡಿಕೆ ಈಗ ಈಡೇರಿದೆ. ಹಣ ಬಿಡುಗಡೆಯಾಗಿದ್ದು ತಾಲೂಕಿನ ೦೪ ಗ್ರಾಮಗಳಲ್ಲಿ ಯಾತ್ರಿ ನಿವಾಸಗಳು ನಿರ್ಮಾಣವಾಗಲಿದೆ. ಹಿರೇಕೆರೂರ ತಾಲೂಕಿನ ಅಬಲೂರು ಗ್ರಾಮದ ಸರ್ವಜ್ಞ ಯಾತ್ರಿ ನಿವಾಸ ಕಾಮಗಾರಿಗೆ ೪೦ ಲಕ್ಷ, ಸಾತೇನಹಳ್ಳಿ ಗ್ರಾಮದ ಶಿವಾಲಿ ಬಸವೇಶ್ವರ ಯಾತ್ರಿ ನಿವಾಸ ಕಾಮಗಾರಿಗೆ ೨೫ ಲಕ್ಷ, ಗೊಡಚಿಕೊಂದ ಗ್ರಾಮದ ಬಸವೇಶ್ವರ ಯಾತ್ರಿ ನಿವಾಸ ಕಾಮಗಾರಿಗೆ ೨೫ ಲಕ್ಷ ಹಾಗೂ ರಟ್ಟೀಹಳ್ಳಿ ತಾಲೂಕಿನ ಮಾಸೂರ ಗ್ರಾಮದ ಸರ್ವಜ್ಷ ಯಾತ್ರಿ ನಿವಾಸ ಕಾಮಗಾರಿಗೆ ೪೦ ಲಕ್ಷ ಅನುದಾನ ದೊರಕಿದ್ದು ಕೆ.ಟಿಐ.ಎಲ್ ಸಂಸ್ಥೆಯ ಮೂಲಕ ಕಾಮಗಾರಿಗಳು ಅನುಷ್ಠಾನಗೊಳ್ಳಲಿವೆ ಎಂದರು.ಈ ಸಂದರ್ಭದಲ್ಲಿ ಡಾ. ನಿಂಗಪ್ಪ ಚಳಗೇರಿ, ಪಿ.ಡಿ. ಬಸನಗೌಡ್ರ, ನಾಗಪ್ಪ ಗೌರಕ್ಕನವರ, ಮಹೇಶ ಗುಬ್ಬಿ, ಗಂಗನಗೌಡ, ನಾರಾಯಣ ಕಲಾಲ, ಬರಮಣ್ಣ ಬ್ಯಾಡಗಿ ಹಾಗೂ ಸಾತೇನಹಳ್ಳಿ, ಅಬಲೂರು, ಗೊಡಚಿಕೊಂದ ಹಾಗೂ ಮಾಸೂರ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.