ಕನ್ನಡಪ್ರಭ ವಾರ್ತೆ ಕನಕಗಿರಿ
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತವರು ಕ್ಷೇತ್ರವಾದ ಕನಕಗಿರಿ ತಾಲೂಕಿನಲ್ಲಿ ಆ್ಯಂಬುಲೆನ್ಸ್ ಕೊರತೆ ಇರುವ ಕಾರಣ ತುಂಬು ಗರ್ಭಿಣಿಯನ್ನು ಆಟೋದಲ್ಲಿ ಕರೆದುಕೊಂಡು ಆಸ್ಪತ್ರೆಗೆ ದಾಖಲಿಸಿ ಹೆರಿಗೆ ಮಾಡಿಸಿದ ಘಟನೆ ಹುಲಿಹೈದರ ಗ್ರಾಮದಲ್ಲಿ ಮಂಗಳವಾರ ನಡೆದಿದೆ.ಅಂಬಿಕಾ ರವಿಕುಮಾರ ಹೊಸಗುಡ್ಡ ಅವರು ಸೋಮವಾರ ತಡರಾತ್ರಿಯಿಂದಲೂ ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಮಂಗಳವಾರ ಬೆಳಗ್ಗೆ ಅಂಬಿಕಾಳ ಚಿಕ್ಕಪ್ಪ ನಾಗರಾಜ ಆ್ಯಂಬುಲೆನ್ಸ್ ಗೆ ಕರೆ ಮಾಡಿದಾಗ ನಾವು ಗಂಗಾವತಿಯಲ್ಲಿದ್ದೇವೆ, ಬರುವುದು ತಡವಾಗುತ್ತದೆ ಎನ್ನುವ ಉತ್ತರ ಬಂದಿದೆ.
ತಕ್ಷಣವೇ ಎಚ್ಚೆತ್ತ ನಾಗರಾಜ ತಮ್ಮ ಸ್ನೇಹಿತನ ಆಟೋ ತೆಗೆದುಕೊಂಡು ಕನಕಗಿರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾನೆ. ಬೆಳಗ್ಗೆ ೯ ಗಂಟೆ ಸುಮಾರಿಗೆ ಅಂಬಿಕಾಳ ಹೆರಿಗೆಯಾಗಿದ್ದು, ತಾಯಿ, ಮಗು ಆರೋಗ್ಯವಾಗಿದ್ದಾರೆ. ೧೦೮ ವಾಹನ ಸೌಲಭ್ಯ ಇಲ್ಲದೆ ಕೆಲಹೊತ್ತು ತೊಂದರೆ ಅನುಭವಿಸಿದರು.ಡಿ.೭ರಂದು ನನ್ನ ಅಣ್ಣನ ಮಗಳಾದ ಶಿವಲೀಲಾ ರುದ್ರೇಶ ಎನ್ನುವವರ ಹೆರಿಗೆ ಸಮಯದಲ್ಲಿಯೂ ೧೦೮ಗೆ ಕರೆ ಮಾಡಿದಾಗಲೂ ಸ್ಪಂದಿಸಲಿಲ್ಲ. ಹುಲಿಹೈದರ ಎಂದಾಕ್ಷಣ ಆ್ಯಂಬಲೆನ್ಸ್ ಸಿಬ್ಬಂದಿಗಳ ಸ್ಪಂದನೆ ಸರಿಯಾಗಿರುವುದಿಲ್ಲ. ಇಂಥವರ ವಿರುದ್ಧ ಆರೋಗ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸಮಸ್ಯೆಗೆ ಮುಕ್ತಿ ಯಾವಾಗ?ಕಳೆದ ಎರಡು ತಿಂಗಳಿಂದಲೂ ಕನಕಗಿರಿಯ ೧೦೮ ವಾಹನ ಎಂಜಿನ್ ಸಮಸ್ಯೆಯಿಂದಾಗಿ ದುರಸ್ತಿಗೆ ಹೋಗಿದ್ದು, ವಾಪಸ್ ಸೇವೆಗೆ ಬಂದಿರುವುದಿಲ್ಲ. ಇಲ್ಲಿ ೧೦೮ ವಾಹನ ಇಲ್ಲದಿರುವ ಕಾರಣ ತುರ್ತು ಸಂದರ್ಭದ ರೋಗಿಗಳನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ದಾಖಲಿಸುವುದು ಸಮಸ್ಯೆಯಾಗಿದ್ದು, ಈಗಾಗಲೇ ಹುಲಿಹೈದರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಗರ್ಭಿಣಿಯರನ್ನು ಖಾಸಗಿ ವಾಹನಗಳಲ್ಲಿ ಕರೆದುಕೊಂಡು ಬಂದು ಹೆರಿಗೆ ಮಾಡಿಸುವ ದುಸ್ಥಿತಿ ಬಂದೊದಗಿದ್ದು, ಆ್ಯಂಬುಲೆನ್ಸ್ ಕೊರತೆಗೆ ಮುಕ್ತಿ ಯಾವಾಗ? ಎಂಬ ಪ್ರಶ್ನೆಗೆ ಸಾರ್ವಜನಿಕರಲ್ಲಿದೆ. ಕನಕಗಿರಿಯಲ್ಲಿ ೧೦೮ ತುರ್ತು ವಾಹನ ದುರಸ್ತಿಯಲ್ಲಿದೆ. ಇನ್ನೊಂದು ವಾರದಲ್ಲಿ ಆ್ಯಂಬುಲೆನ್ಸ್ ನ್ನು ಸಾರ್ವಜನಿಕ ಸೇವೆಗೆ ಬಿಡಲಾಗುವುದು. ಗಂಗಾವತಿ ಅಥವಾ ಕಾರಟಗಿ, ನವಲಿ ಆಸ್ಪತ್ರೆಯ ೧೦೮ ವಾಹನಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಗರ್ಭಿಣಿಯರನ್ನು ಖಾಸಗಿ ವಾಹನಗಳಲ್ಲಿ ಕರೆ ತಂದು ಆಸ್ಪತ್ರೆಗೆ ದಾಖಲಿಸುತ್ತಿರುವ ವಿಚಾರ ಗಮನಕ್ಕಿಲ್ಲ ಎಂದು ಜಿಲ್ಲಾ ೧೦೮ ವ್ಯವಸ್ಥಾಪಕ ಪ್ರಭಾಕರ ತಿಳಿಸಿದ್ದಾರೆ.