ಕೊಡವ ಉಡುಪಿನಲ್ಲಿ ದೇವಸ್ಥಾನ ಪ್ರವೇಶಕ್ಕೆ ಒತ್ತಾಯ ಪೂರ್ವಕ ತಡೆ : ಕೊಡವ ಸಮಾಜ ಖಂಡನೆ

KannadaprabhaNewsNetwork | Updated : Dec 29 2024, 11:12 AM IST

ಸಾರಾಂಶ

ಹಲ್ಲೆ ಮಾಡಿರುವ ಘಟನೆ ಅತ್ಯಂತ ಹೇಯ, ಅನಾಗರಿಕ, ಅಮಾನವೀಯ ಹಾಗೂ ಗೂಂಡಾಗಿರಿಯ ವರ್ತನೆಯಾಗಿದೆ, ಇವರ ಅಂತರಂಗ ಬಹಿರಂಗವಾಗಿದೆ ಎಂದು ಪೊನ್ನಂಪೇಟೆ ಕೊಡವ ಸಮಾಜ ಖಂಡಿಸಿದೆ.

  ಶ್ರೀಮಂಗಲ :  ಕಟ್ಟೆಮಾಡು ಮೃತ್ಯುಂಜಯ ದೇವಸ್ಥಾನದಲ್ಲಿ ನಡೆದ ವಾರ್ಷಿಕ ಉತ್ಸವಕ್ಕೆ ಕೊಡವ ಜನಾಂಗದ ಪುರುಷರು ಹಾಗೂ ಮಹಿಳೆಯರು ಕೊಡವ ಉಡುಪಿನಲ್ಲಿ ಭಕ್ತಿ ಪೂರ್ವಕವಾಗಿ ಆಗಮಿಸಿರುವುದನ್ನು ಅಲ್ಲಿನ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಒಂದು ಜನಾಂಗಕ್ಕೆ ಸೇರಿದ ಕೆಲವು ಪುಂಡರು ಒತ್ತಾಯಪೂರ್ವಕವಾಗಿ ತಡೆದು ನಿಂದನೆ ಮಾಡಿ ಹಲ್ಲೆ ಮಾಡಿರುವ ಘಟನೆ ಅತ್ಯಂತ ಹೇಯ, ಅನಾಗರಿಕ, ಅಮಾನವೀಯ ಹಾಗೂ ಗೂಂಡಾಗಿರಿಯ ವರ್ತನೆ ಯಾಗಿದ್ದು ಇವರ ಅಂತರಂಗ ಬಹಿರಂಗವಾಗಿದೆ ಎಂದು ಪೊನ್ನಪೇಟೆ ಕೊಡವ ಸಮಾಜ ಆಡಳಿತ ಮಂಡಳಿ ತೀವ್ರವಾಗಿ ಖಂಡನೆ ಮಾಡಿದೆ.

ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶವಾಗಿದ್ದು ವೈವಿಧ್ಯಮಯ ಸಂಸ್ಕೃತಿ, ಭಾಷೆಯನ್ನು ಹೊಂದಿದೆ. ಆಹಾರ, ಭಾಷೆ ಉಡುಪುಗಳನ್ನು ಧರಿಸುವುದಕ್ಕೆ ಎಲ್ಲಿಯೂ ತಡೆ ಮಾಡುವಂತಿಲ್ಲ, ಅದು ಅವರ ಸ್ವಾತಂತ್ರ್ಯವಾಗಿದೆ. ಕೊಡವರು ಕೊಡಗಿನ ಆದಿ ಮೂಲ ನಿವಾಸಿಗಳಾಗಿದ್ದು, ಅನಾದಿ ಕಾಲದಿಂದಲೂ ಸಾಂಪ್ರಾದಾಯಿಕ ಉಡುಪು ಹೊಂದಿದ್ದು,ಕೊಡವರು ಯಾವ ಬಟ್ಟೆಯನ್ನು ಧರಿಸಬೇಕೆಂದು ನಿರ್ಧರಿಸುವ ಹಕ್ಕು ಬೇರೆಯವರಿಗೆ ಇಲ್ಲ ಎಂದು ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಅವರು ತೀಕ್ಷಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ಹಿಂದೆ ಕೊಡವರ ಕುಲ ದೇವತೆ ತಲಕಾವೇರಿ ದೇವಸ್ಥಾನಕ್ಕೆ ಕೊಡವರು ಸಾಂಪ್ರದಾಯಿಕ ಉಡುಪು ಹಾಕಿ ಬರಬಾರದು ಎಂದು ಇದೇ ವ್ಯಕ್ತಿಗಳ ಕುಮ್ಮಕ್ಕಿ ನಿಂದ ಇದೀಗ ಕಟ್ಟೆಮಾಡಿನಲ್ಲಿಯೂ ಈ ಒಂದು ದುಷ್ಕತ್ಯಕ್ಕೆ ಕೈ ಹಾಕಿದ್ದಾರೆ ಇಂಥವರಿಂದ ಕೊಡಗಿನಲ್ಲಿ ಸಾಮರಸ್ಯ ಕದಡಲು ಕುಮ್ಮಕ್ಕು ನೀಡುತ್ತಿದ್ದು ಇಂಥವರನ್ನು ಪೊಲೀಸ್ ಇಲಾಖೆ ಬಂಧಿಸಿ ಗಡಿಪಾರು ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.ಕೊಡವರಿಗೆ ಅತ್ಯಂತ ವೈಭವಯುತ ಸಂಸ್ಕೃತಿ ಸಂಸ್ಕಾರ ಆಹಾರ ಉಡುಪು ಹಬ್ಬಗಳು ಜಾನಪದ ಕಲೆ ಇವೆ. 

ಅವುಗಳನ್ನು ನೋಡಿ ದೇಶ ವಿಶ್ವದಲ್ಲಿ ಖುಷಿ ಪಡುವ ಜನ ಇದ್ದಾರೆ. ಆದರೆ ಸ್ವಂತ ಸಂಸ್ಕೃತಿ ಇಲ್ಲದವರು, ಇತರ ಸಂಸ್ಕೃತಿಯನ್ನು ನಕಲಿ ಮಾಡುವವರು ಅದನ್ನು ಹೊಟ್ಟೆಕಿಚ್ಚಿನಿಂದ ನೋಡುವ ಕಿಡಿಗೇಡಿಗಳು ಕೆಲವರು ಇದ್ದಾರೆ ಎನ್ನುವುದು ಇದೀಗ ಖಾತರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.ಕೊಡವರ ಶ್ರೀಮಂತ ಸಂಸ್ಕೃತಿಯನ್ನು ಅಳಿಸಿ ಹಾಕಲು ಇಂತ ಪ್ರಯತ್ನ ನಡೆಯುತ್ತಿದೆ, ಇದರಿಂದ ಕೊಡವರು ಇನ್ನಷ್ಟು ಹೆಚ್ಚಿನ ಅಭಿಮಾನದಲ್ಲಿ ತನ್ನ ಸ್ವಂತ ಸಂಸ್ಕೃತಿಯನ್ನು ಆಚರಣೆ- ಅನುಸರಣೆ ಮಾಡಲು ಮೈಕೊಡವಿ ಗಟ್ಟಿಯಾಗಿ ನಿಲ್ಲುತ್ತಾರೆ ಹೊರತು ಇಂತಹ ಬೆದರಿಕೆಗಳಿಗೆ ಎಂದು ತಲೆಬಾಗುವುದಿಲ್ಲ ಎಂದು ಮೋಟಯ್ಯ ಅವರು ಎಚ್ಚರಿಸಿದ್ದಾರೆ.

ಕಟ್ಟೆಮಾಡು ಘಟನೆ - ವಿರಾಜಪೇಟೆ ಕೊಡವ ಸಮಾಜದಿಂದ ತೀವ್ರ ಖಂಡನೆಮಡಿಕೇರಿ: ಕಟ್ಟೆಮಾಡು ಶ್ರೀ ಮೖತ್ಯುಂಜಯ ದೇವಾಲಯದ ವಾರ್ಷಿಕ ಉತ್ಸವಕ್ಕೆ ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ ಬಂದ ಕೊಡವರನ್ನು ಅವಮಾನಿಸಿದ್ದಲ್ಲದೇ ದೇವಾಲಯಕ್ಕೆ ಪ್ರವೇಶ ನಿರಾಕರಿಸಿರುವ ಪ್ರಕರಣವನ್ನು ವಿರಾಜಪೇಟೆ ಕೊಡವ ಸಮಾಜ ತೀವ್ರವಾಗಿ ಖಂಡಿಸಿದೆ ಎಂದು ಸಮಾಜದ ಅಧ್ಯಕ್ಷ ಕುಂಬೇರ ಮನುಕುಮಾರ್ ಹೇಳಿದ್ದಾರೆ.

ಕೊಡವರ ಸಾಂಪ್ರದಾಯಿಕ ಉಡುಗೆಗೆ ವಿಶ್ವಮಾನ್ಯತೆಯಿದೆ. ಕುಪ್ಯಚ್ಯಾಲೆ ಕೊಡವರಿಗೆ ಪರಂಪರೆಯಿಂದ ಬಂದ ಹಕ್ಕಿನ ಧಿರಿಸಾಗಿದೆ. ಹೀಗಿರುವಾಗ ಕೊಡವರ ನಾಡಿನಲ್ಲಿಯೇ ಈ ಧಿರಿಸು ಧರಿಸಿ ದೇವಾಲಯಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸುವುದು ಖಂಡನೀಯ. ದೇವಾಲಯ ಅಥವಾ ದೇವರು ಎಲ್ಲಾ ಭಕ್ತರಿಗೂ ಸೇರಿದ್ದಾಗಿದ್ದು, ದೇವಾಲಯಕ್ಕೆ ಸಾಂಪ್ರದಾಯಿಕ ಉಡುಗೆ ಧರಿಸಿ ಬರಬೇಡಿ ಎಂದಿರುವ ಕೆಲವರ ಮಾತುಗಳನ್ನು ವಿರಾಜಪೇಟೆ ಕೊಡವ ಸಮಾಜ ತೀವ್ರವಾಗಿ ಖಂಡಿಸಿದೆಯಲ್ಲದೇ ಮುಂದಿನ ದಿನಗಳಲ್ಲಿ ಈ ಪ್ರಕರಣ ಸಂಬಂಧಿತ ಕೈಗೊಳ್ಳಲಾಗುವ ಯಾವುದೇ ಪ್ರತಿಭಟನಾ ಹೋರಾಟಕ್ಕೂ ವಿರಾಜಪೇಟೆ ಕೊಡವ ಸಮಾಜ ತನ್ನ ಬೆಂಬಲ ನೀಡುವುದಾಗಿಯೂ ಕುಂಬೇರ ಮನು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೊಡವ ವೆಲ್ ಫೇರ್ ಐಂಡ್ ರಿಕ್ರಿಯೇಷನ್ ಅಸೋಸಿಯೇಷನ್ ಖಂಡನೆಮಡಿಕೇರಿ : ಮರಗೋಡಿನ ಕಟ್ಟೆಮಾಡು ಶ್ರೀಮಹಾ ಮೃತ್ಯುಂಜಯ ದೇವಾಲಯದಲ್ಲಿ ನಡೆಯುತ್ತಿರುವ ವಾರ್ಷಿಕ ಜಾತ್ರಾ ಮಹೋತ್ಸವದ ಸಂದರ್ಭ ಕೊಡವ ಸಾಂಪ್ರದಾಯಿಕ ಕುಪ್ಯಚೇಲೆಯನ್ನು ಧರಿಸುವ ಕೊಡವರ ಸ್ವಾತಂತ್ರ್ಯ ವನ್ನು ಕಸಿದುಕೊಳ್ಳುವ ಪ್ರಯತ್ನ ನಡೆದಿದೆ ಎಂದು ಅರೆಕಾಡು ಹೊಸ್ಕೇರಿಯ ಕೊಡವ ವೆಲ್ ಫೇರ್ ಐಂಡ್ ರಿಕ್ರಿಯೇಷನ್ ಅಸೋಸಿಯೇಷನ್ ಆರೋಪಿಸಿದೆ.

ಪತ್ರಿಕಾ ಪ್ರಕಟಣೆ ನೀಡಿರುವ ಅಸೋಸಿಯೇಷನ್ ನ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಅವರು ಪ್ರಕರಣವನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದ್ದಾರೆ.ತಮ್ಮ ತಮ್ಮ ಸಂಪ್ರದಾಯಕ್ಕೆ ಅನುಗುಣವಾಗಿ ತಮಗೆ ಒಪ್ಪುವ ಉಡುಪನ್ನು ತೊಡುವ ಮತ್ತು ಆಹಾರವನ್ನು ಸೇವಿಸುವ ಸ್ವಾತಂತ್ರ್ಯ ವನ್ನು ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಪ್ರತಿಯೊಬ್ಬರಿಗೂ ನೀಡಿದೆ. ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ದೇವಾಲಯ ಪ್ರವೇಶಿಸಬಾರದು ಎನ್ನುವ ಸರ್ವಾಧಿಕಾರದ ಧೋರಣೆಯನ್ನು ಸಹಿಸಲು ಸಾಧ್ಯವಿಲ್ಲ. 

ಅತ್ಯಂತ ವಿಶಿಷ್ಟವಾದ ಸಂಸ್ಕೃತಿಯನ್ನು ಹೊಂದಿರುವ ಸೂಕ್ಷ್ಮ ಜನಾಂಗದ ಕೊಡವರು ದೇವಾಲಯಗಳಿಗೆ ಕುಪ್ಯಚೇಲೆಯನ್ನು ಧರಿಸಿ ಪ್ರವೇಶಿಸುವ ಸಂಪ್ರದಾಯವನ್ನು ಬಹಳ ಹಿಂದಿನಿಂದಲೂ ರೂಢಿಸಿಕೊಂಡು ಬಂದಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇದನ್ನು ತಡೆಯುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದು, ಇದು ಕಾನೂನಿಗೆ ವಿರುದ್ಧವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಕೊಡವರ ಕುಪ್ಯಚೇಲೆಗೆ ವಿಶ್ವದಾದ್ಯಂತ ಗೌರವವಿದೆ, ಆದರೆ ಕೊಡವರು ಹುಟ್ಟಿ ಬೆಳೆದ ನಾಡಿನಲ್ಲೇ ಅಪಮಾನವಾಗುತ್ತಿರುವುದು ಅತ್ಯಂತ ವಿಷಾದಕರ ಬೆಳವಣಿಗೆಯಾಗಿದೆ. 

ಸ್ವಾಭಿಮಾನಿ ಕೊಡವರು ಪ್ರತಿಯೊಂದು ಜನಾಂಗದೊಂದಿಗೆ ಅನ್ಯೋನ್ಯತೆಯಿಂದ ಇರಲು ಬಯಸುತ್ತದೆ ಮತ್ತು ಕಾನೂನಿಗೆ ಗೌರವ ನೀಡುತ್ತದೆ. ಆದರೆ ಕಟ್ಟೆಮಾಡು ದೇವಾಲಯದಲ್ಲಿ ಕಾನೂನನ್ನು ಕೈಗೆತ್ತಿಕೊಂಡು ಕೊಡವರನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿರುವ ಜಯ ಚಿಣ್ಣಪ್ಪ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ವಿವಿಧ ಸಂಘಟನೆಗಳು ಮುಂದಿನ ದಿನಗಳಲ್ಲಿ ನಡೆಸುವ “ಕೊಡವರ ನಡೆ ಕಟ್ಟೆಮಾಡು ಕಡೆ” ಬೃಹತ್ ಜಾಥಾಕ್ಕೆ ಕೊಡವ ವೆಲ್ ಫೇರ್ ಐಂಡ್ ರಿಕ್ರಿಯೇಷನ್ ಅಸೋಸಿಯೇಷನ್ ಸಂಪೂರ್ಣ ಬೆಂಬಲ ನೀಡಿ ಭಾಗವಹಿಸಲಿದೆ ಎಂದು ತಿಳಿಸಿದ್ದಾರೆ.

ಕುಪ್ಯಚೇಲೆಗೆ ಅಗೌರವ ತೋರಿರುವುದು ಖಂಡನೀಯ : ಅಸಮಾಧಾನ ಮಡಿಕೇರಿ : ಮರಗೋಡಿನ ಕಟ್ಟೆಮಾಡು ಶ್ರೀಮಹಾ ಮೃತ್ಯುಂಜಯ ದೇವಾಲಯದ ಜಾತ್ರಾ ಮಹೋತ್ಸವದಲ್ಲಿ ಕೊಡವ ಸಾಂಪ್ರದಾಯಿಕ ಕುಪ್ಯಚೇಲೆಯನ್ನು ಧರಿಸಿ ದೇವರ ದರ್ಶನ ಪಡೆಯುತ್ತಿದ್ದ ಕೊಡವರನ್ನು ಅವಮಾನಿಸಿರುವ ಮತ್ತು ಕುಪ್ಯಚೇಲೆಯನ್ನು ಅಗೌರವಿಸಿರುವ ಪ್ರಕರಣವನ್ನು ತೀವ್ರವಾಗಿ ಖಂಡಿಸುವುದಾಗಿ ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ನ ಅಧ್ಯಕ್ಷ ಹಂಚೆಟ್ಟಿರ ಮನು ಮುದ್ದಪ್ಪ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತೀಯ ಸಂಸ್ಕೃತಿಯಲ್ಲಿ ಸಾಂಪ್ರದಾಯಿಕ ಉಡುಗೆ ತೊಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ದೇವಾಲಯಗಳು ಊರಿನ ಜನರನ್ನು ಒಗ್ಗೂಡಿಸುವ ಶ್ರದ್ಧಾಭಕ್ತಿಯ ಕೇಂದ್ರವಾಗಿದೆ. ಆದರೆ ದೇವಾಲಯದಲ್ಲೇ ಜನಾಂಗ ಜನಾಂದ ನಡುವೆ ಒಡಕು ಮೂಡಿಸುವ ಪ್ರಯತ್ನ ಮಾಡಿರುವುದು ವಿಷಾದನೀಯವೆಂದು ತಿಳಿಸಿದ್ದಾರೆ.

ಕೊಡವರು ತಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ನು ಉಳಿಸುವುದಕ್ಕಾಗಿ ಸಾಂಪ್ರದಾಯಿಕ ಕುಪ್ಯಚೇಲೆಯನ್ನು ಧರಿಸಿ ದೇವಾಲಯಗಳಿಗೆ ತೆರಳುತ್ತಾರೆಯೇ ಹೊರತು ಯಾರನ್ನೂ ನೋಯಿಸುವುದಕ್ಕಾಗಿ ಅಲ್ಲ. ಈ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಆದರೆ ಕಟ್ಟೆಮಾಡು ಶ್ರೀಮಹಾ ಮೃತ್ಯುಂಜಯ ದೇವಾಲಯದಲ್ಲಿ ಕೆಲವರು ಕುಪ್ಯಚೇಲೆ ಧರಿಸಿದ ಕೊಡವರನ್ನು ನೋಯಿಸಿದ್ದಾರೆ. ಕುಪ್ಯಚೇಲೆಯನ್ನು ಕಳಚುವಂತೆ ಒತ್ತಡ ಹೇರಿದ್ದಾರೆ. ಇದು ಕೊಡಗಿನ ಸಾಮರಸ್ಯವನ್ನು ಕದಡುವ ಯತ್ನವಾಗಿದೆ ಎಂದು ಆರೋಪಿಸಿದ್ದಾರೆ.

ಕಟ್ಟೆಮಾಡು ಶ್ರೀಮಹಾ ಮೃತ್ಯುಂಜಯ ದೇವಾಲಯದಲ್ಲಿ ನಡೆದ ಘಟನೆಯನ್ನು ಕೊಡಗು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು. ಕೊಡವರಿಗೆ ಹಾಗೂ ಕೊಡವ ಸಾಂಪ್ರದಾಯಿಕ ಉಡುಪು ಕುಪ್ಯಚೇಲೆಗೆ ಅಗೌರವ ತೋರಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಕೊಡಗಿನ ದೇವಾಲಯಗಳಲ್ಲಿ ಕೊಡವ ಸಾಂಪ್ರದಾಯಿಕ ವಸ್ತ್ರ ಸಂಹಿತೆಯ ಸ್ವಾತಂತ್ರ್ಯ ಹರಣವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಚೆಟ್ಟಳ್ಳಿ ಕೊಡವ ಸಮಾಜ ಖಂಡನೆ

ಮಡಿಕೇರಿ : ಕೊಡವರು ಕೊಡವ ಕುಪ್ಯಚ್ಯಾಲೆ ಹಾಗೂ ಮಹಿಳೆಯರು ಕೊಡವ ಸಾಂಪ್ರದಾಯಿಕ ಉಡುಪನ್ನು ತೊಟ್ಟು

ಮರಗೋಡು ಕಟ್ಟೆಮಾಡುವಿನ ಮಹಾ ಮೃತ್ಯುಂಜಯ ದೇವಾಲಯದ ವಾರ್ಷಿಕ ಉತ್ಸವದಲ್ಲಿ ಭಾಗಿಯಾದ ಸಂದರ್ಭದಲ್ಲಿ ಕೊಡವ ಸಾಂಪ್ರದಾಯಿಕ ಉಡುಪನ್ನು ತೊಟ್ಟು ದೇವಾಲಯ ಪ್ರವೇಶಿಸ ಬಾರದೆಂದು ತಡೆಹೊಡಿದಲ್ಲದೆ ಕೊಡವರ ಮೇಲೆ ಹಲ್ಲೆ ಹಾಗೂ ಮಹಿಳೆಯರಿಗೆ ಹಲ್ಲೆಮಾಡಲು ಮುಂದಾಗಿರುವ ಘಟನೆಯನ್ನು ಚೆಟ್ಟಳ್ಳಿ ಕೊಡವ ಸಮಾಜ ತೀವ್ರವಾಗಿ ಖಂಡಿಸಲಾಗುವುದು ಎಂದು ಅಧ್ಯಕ್ಷ ಮುಳ್ಳಂಡ ರತ್ತುಚಂಗಪ್ಪ ತಿಳಿಸಿದ್ಧಾರೆ.

ಕುಲದೇವರಾದ ಇಗ್ಗುತಪ್ಪ ಹಾಗು ಕಾವೇರಿ ಮಾತೆಯ ಮಣ್ಣಿದ್ದು ಇಲ್ಲಿ ಕೊಡವರೇ ಮೂಲ ಜನಾಂಗವಾಗಿದೆ. ಕೊಡಗಿನ ಎಲ್ಲಾ ದೇವಾಲಯಗಳಲ್ಲಿ ಕೊಡವರಿಗೇ ಹೆಚ್ಚಿನ ಪ್ರಾಧಾನ್ಯತೆ ಇದೆ, ಹಾಗಿರುವಾಗ ಇಲ್ಲಿ ದೇಶದ್ರೋಹಿಗಳಂತೆ ವರ್ತಿಸುವ ಕೆಲವರು ಜನಾಂಗೀಯವಾಗಿ ಹಾಗು ರಾಜಕೀಯವಾಗಿ ಕೊಡವರನ್ನು ಅವಮಾನಿಸಿರುವುದು ಇಡೀ ಕೊಡವ ಜನಾಂಗಕ್ಕೆ ಮಾಡಿದ ಅವಮಾನ ಮಾಡಿದಂತಾಗಿದೆ ಎಂದು ಹೇಳಿದ್ದಾರೆ.

Share this article