ಕನ್ನಡಪ್ರಭ ವಾರ್ತೆ ಮುಧೋಳ
ನಗರದ ನಿರಾಣಿ ಸಕ್ಕರೆ ಕಾರ್ಖಾನೆ ಮಾಲೀಕರು ಪ್ರಸಕ್ತ ಹಂಗಾಮಿಗೆ ಕಬ್ಬು ನುರಿಸುವ ಕಾರ್ಯವನ್ನು ಪ್ರಾರಂಭ ಮಾಡಲಾಗುವುದಿಲ್ಲ ಎಂದು ಹೇಳುತ್ತಿದ್ದು ಈ ಕೂಡಲೇ ಜಿಲ್ಲಾಡಳಿತವು ಮಧ್ಯಸ್ಥಿಕೆವಹಿಸಿ ರೈತರ ಹಿತದೃಷ್ಟಿಯಿಂದ ಕಾರ್ಖಾನೆ ಪ್ರಾರಂಭಿಸುವಂತೆ ಒತ್ತಾಯಿಸಿ ನ.16ರಂದು ಬೆಳಗ್ಗೆ 10 ಗಂಟೆಗೆ ಮುಧೋಳ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದೆಂದು ರೈತ ಮುಖಂಡರಾದ ಮಲ್ಲಪ್ಪ ಪೂಜಾರಿ ಮತ್ತು ಎಸ್.ಎಸ್.ಅಕ್ಕಿಮರಡಿ ಹೇಳಿದರು.ಶುಕ್ರವಾರ ಸಂಜೆ ಸುದ್ದಿಗಾರರ ಜೊತೆ ಮಾತನಾಡಿ, ರಾಜ್ಯ ಮಾತ್ರವಲ್ಲ ಜಿಲ್ಲೆಯಲ್ಲಿನ ಎಲ್ಲ ಸಕ್ಕರೆ ಕಾರ್ಖಾನೆಗಳು ಸರ್ಕಾರದ ಆದೇಶದಂತೆ 2024-25ರ ಕಬ್ಬು ನುರಿಸುವ ಹಂಗಾಮು ಪ್ರಾರಂಭವಾಗಿದ್ದು, ಆದರೆ ಅತೀ ಹೆಚ್ಚು ಕಬ್ಬು ನುರಿಸುವ ಸಾಮರ್ಥ್ಯ ಹೊಂದಿರುವ ಮುಧೋಳದ ನಿರಾಣಿ ಸಕ್ಕರೆ ಕಾರ್ಖಾನೆ ಪ್ರಾರಂಭವಾಗಿಲ್ಲ. ಕಾರಣವಲ್ಲದ ತೊಂದರೆಗಳಿಂದ ಕಾರ್ಖಾನೆಯ ಮಾಲೀಕರು ಕಾರ್ಖಾನೆ ಬಂದ್ ಮಾಡಿದ್ದು, ಇನ್ನು ಮುಂದೆ ಪ್ರಾರಂಭ ಮಾಡಲಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಈ ಕಾರ್ಖಾನೆ ಪ್ರಾರಂಭವಾಗದಿದ್ದರೆ ಲಕ್ಷಾಂತರ ರೈತರಿಗೆ ತೀವ್ರ ನಷ್ಟವಾಗುತ್ತದೆ. ಈ ಕಾರಣಕ್ಕಾಗಿ ನ.12ರಂದು ಕಾರ್ಖಾನೆಯ ಆವರಣದಲ್ಲಿ ನಡೆದ ಘಟನೆಯಿಂದ ಈ ನಿರ್ಧಾರಕ್ಕೆ ಬಂದಿದ್ದು. ಅವರು ಕಾರ್ಖಾನೆ ಪ್ರಾರಂಭ ಮಾಡದಿದ್ದರೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ರೈತರ, ಟ್ರ್ಯಾಕ್ಟರ್ ಮಾಲೀಕರ ಕೊಟ್ಯಂತರ ರು. ನಷ್ಟ ಅನುಭವಿಸುತ್ತಾರೆ. ಇದರಿಂದ ರೈತರು ಸಾಲದ ಸುಳಿಯಲ್ಲಿ ಸಿಲುಕಿ ಬಾರಿ ಬೆಲೆ ತೆರಬೇಕಾಗುತ್ತದೆ. ಈ ಕಾರಣಗಳಿಂದಾಗಿ ಕೂಡಲೇ ಸಕ್ಕರೆ ಕಾರ್ಖಾನೆಯನ್ನು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತವು ಪೊಲೀಸ್ ಮಧ್ಯಸ್ಥಿಕೆಯಲ್ಲಿ ಸೂಕ್ತ ಬಂದೋಬಸ್ತ್ ನೀಡಿ ಪ್ರಾರಂಭಿಸಬೇಕು ಹಾಗೂ ಕಬ್ಬು ಕಳಿಸುವ ರೈತರಿಗೆ ಮತ್ತು ಟ್ರ್ಯಾಕ್ಟರ್ ಮಾಲೀಕರಿಗೆ ಭದ್ರತೆ ಒದಗಿಸಿದಾಗ ಮಾತ್ರ ಈ ಕಾರ್ಖಾನೆ ಪ್ರಾರಂಭವಾಗಲು ಸಾಧ್ಯವೆಂದು ಹೇಳಿದರು.
ಕೃಷಿ ಚಟುವಟಿಕೆಗೆ ಅನುಕೂಲವಾಗಬೇಕಾದರೆ ಕಬ್ಬು ಸೂಕ್ತ ಸಮಯದಲ್ಲಿ ಕಳಿಸಬೇಕಾಗತ್ತದೆ. ಆದರೆ ಪ್ರಸಕ್ತ ಹಂಗಾಮಿನಲ್ಲಿ ಕಾರ್ಖಾನೆಯೂ ಇದುವರೆಗೂ ಪ್ರಾರಂಭಗೊಳ್ಳದೇ ಇರುವುದರಿಂದ ನಾವು ಬೆಳೆದ ಕಬ್ಬು ಹಾನಿಗೊಳಗಾಗುವ ಸಂಭವವಿದೆ. ವಿಳಂಬವಾಗುತ್ತಾ ಹೋದರೆ ಕಬ್ಬು ಮಾಗಿ, ಹೂ ಬಿಟ್ಟು, ತೂಕ ಮತ್ತು ಇಳುವರಿ ಕಡಿಮೆಯಾಗುತ್ತದೆ. ಅಲ್ಲದೇ ಜನವರಿ ತಿಂಗಳಿನಿಂದ ಬಿಸಿಲಿನ ಜಳ ಹೆಚ್ಚಾದಂತೆ ಕಬ್ಬು ಕಡಿಯುವ ಆಳುಗಳಿಗೆ ಹೆಚ್ಚಿನ ಹಣ ನೀಡುವ ಸಮಸ್ಯೆ ಉಂಟಾಗಿ ಮುಂದಿನ ಕೃಷಿ ಚಟುವಟಿಕೆಗಳು ಸಹ ಕುಂಠಿತಗೊಳ್ಳುತ್ತವೆ ಎಂದರು.ಪ್ರಗತಿಪರ ರೈತ ಮಲ್ಲಪ್ಪ ಪೂಜಾರ ಮಾತನಾಡಿ, ನಾವು ನಿರಾಣಿ ಕಾರ್ಖಾನೆಯವರು ಈಗಾಗಲೇ ಉಳಿದ ಕಾರ್ಖಾನೆಯಂತೆ 2024-25ರ ದರವನ್ನು ಹಳೆಯ ಬಾಕಿ ಹಣವನ್ನು ಕಬ್ಬು ಪೂರೈಕೆದಾರರು ನಮ್ಮ ಜೊತೆಗೆ ಮಾತನಾಡಿ ನಿಗದಿ ಮಾಡಿ ನೀಡುತ್ತಿದ್ದು, ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರದ ಎಪ್‌ಆರ್‌ಪಿ ದರಕ್ಕಿಂತ ₹1300 ಕೋಟಿ ಹಣ ಹೆಚ್ಚಿಗೆ ನೀಡಿದ್ದಾರೆ. ಆದರೆ ಈ ಭಾಗದಲ್ಲಿ ಉಳಿದ ಕಾರ್ಖಾನೆ ಪ್ರಾರಂಭ ಮಾಡಲು ಬಿಟ್ಟಿದ್ದಾರೆ. ಈ ಕಾರ್ಖಾನೆ ಏಕೆ ಪ್ರಾರಂಭ ಮಾಡಲೊಲ್ಲರು ಎಂಬುದು ತಿಳಿಯದಂತಾಗಿದೆ. ನಾವು ಹಲವಾರು ವರ್ಷಗಳಿಂದ ಕಬ್ಬು ಕಳಿಸುತ್ತಿದ್ದು, ಕಬ್ಬಿಗೆ ಕೇಂದ್ರ ಸರಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನದರವನ್ನು ನೀಡುತ್ತಾ ಬಂದಿದ್ದು. ನಾವೇ ನಿಗದಿಪಡಿಸಿದಂತಹ ಬೆಲೆಯನ್ನು ನೀಡಿದ್ದಾರೆ. ಜಿಲ್ಲೆಯ ಹಲವು ಕಾರ್ಖಾನೆಗಳಂತೆಯೇ ಅವರು ಸಹ ಕಬ್ಬಿನ ಬಿಲ್‌ನ್ನು ನೀಡಿರುತ್ತಾರೆ. ಆದರೂ ಉಳಿದೆಲ್ಲ ಕಾರ್ಖಾನೆಗಳು ಪ್ರಾರಂಭವಾಗಿದ್ದರೂ ಕೆಲವರು ವಿನಾಕಾರಣ ಈ ಕಾರ್ಖಾನೆ ಪ್ರಾರಂಭವಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಆದ್ದರಿಂದ ನಾವು ಬೆಳೆದ ಕಬ್ಬನ್ನು ನಮ್ಮ ಈ ಕಾರ್ಖಾನೆಗೆ ಕಳುಹಿಸಲು ಸಿದ್ಧರಿದ್ದು, ತಾವು ನಮ್ಮ ಕಬ್ಬಿಗೆ ಯಾವುದೇ ರೀತಿಯ ಹಾನಿಯಾಗದಂತೆ ಸೂಕ್ತ ಕ್ರಮಕೈಗೊಂಡು ಕಬ್ಬು ಪೂರೈಸಲು ಅನುಕೂಲ ಮಾಡಿಕೊಡಲು ಮುಂದಾಗಬೇಕೆಂದು ಹೇಳಿದರು.
ಈಶ್ವರಕಾಡಪ್ಪನವರ, ಚನ್ನಪ್ಪ ಪುರಾಣಿಕ, ಯಲ್ಲಪ್ಪ ಬೇಗತಿ, ಚಿಕ್ಕಪ್ಪ ನಾಯಕ , ರಾಮನಗೌಡ ಪಾಟೀಲ, ಎಂ.ಜಿ. ಹಾದಿಮನಿ, ಗಿರೆಪ್ಪ ಬಳಗಾರ, ಎಂ.ಜಿ.ಹಾದಿಮನಿ, ರಂಗನಗೌಡ ಪಾಟೀಲ, ಎಸ್.ಎಸ್.ಅಕ್ಕಿಮರಡಿ, ಪಂಡಿತ ಪೂಜಾರಿ, ಚಿಕ್ಕಪ್ಪ ನಾಯ್ಕ, ಪರಮಾನಂದ ಆಲಗೂರ ಇತರರು ಇದ್ದರು.ಈಗಾಗಲೇ ಪ್ರವಾಹದಲ್ಲಿ ಹಾನಿಯಾಗಿ ನಷ್ಟ ಅನುಭವಿಸುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಈ ರೀತಿ ಸುಖಾ ಸುಮ್ಮನೆ ಕಾರ್ಖಾನೆ ಆರಂಭ ಮಾಡದಿದ್ದರೆ ರೈತರ ಬದುಕು ದುಸ್ಥರವಾಗುತ್ತದೆ. ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಿ ಕಾರ್ಖಾನೆ ಪ್ರಾರಂಭ ಮಾಡಿಸಲು ಮುಂದಾಗಬೇಕು.
ಮಲ್ಲಪ್ಪ ಪೂಜಾರಿ, ಕೋಲೂರ ಗ್ರಾಮದ ರೈತರು.