ಯಲ್ಲಾಪುರ: ಕಳೆದ ವರ್ಷದ ಹಿಂಗಾರು ಮತ್ತು ಮುಂಗಾರು ಮಳೆಯ ತೀವ್ರ ಕೊರತೆಯಿಂದಾಗಿ ತಾಲೂಕಿನಲ್ಲಿ ಯಾವ ಕಾಲದಲ್ಲಿಯೂ ಸಾಕಷ್ಟು ನೀರು ಕಂಡುಬರುತ್ತಿದ್ದ ಪ್ರದೇಶಗಳಲ್ಲಿನ ವಿವಿಧ ಗ್ರಾಮದ ಕೆರೆಗಳು ಪ್ರಸ್ತುತ ಅಂತರ್ಜಲದ ಕುಸಿತದಿಂದಾಗಿ ಬತ್ತಲಾರಂಭಿಸಿದ್ದು, ಈ ನಡುವೆಯೇ ಬಿಸಿಲಿನ ಬೇಗೆ ದಿನೇ ದಿನೇ ಹೆಚ್ಚುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಕೆಲವು ಕೆರೆಗಳು ಈಗಲೂ ನೀರಿನಿಂದ ನಳನಳಿಸುತ್ತಿವೆ.
ತಾಲೂಕಿನ ಉಮ್ಮಚಗಿಯ ಸರ್ವೇ ನಂ. ೩೦ರಲ್ಲಿ ಸುಮಾರು ೩ ಎಕರೆ ವಿಸ್ತಾರದಲ್ಲಿರುವ ಸರ್ಕಾರವೇ ಅಮೃತ ಸರೋವರವೆಂದು ನಾಮಕರಣ ಮಾಡಿದ ಕೆರೆ ಇಂತಹ ಬಿರು ಬೇಸಿಗೆಯಲ್ಲಿಯೂ ತುಸು ಪ್ರಮಾಣದಲ್ಲಿ ಜಲಮೂಲ ಹೊಂದಿದೆಯಾದರೂ, ಸುಮಾರು ಅರ್ಧ ಎಕರೆಯಷ್ಟು ಕೆರೆ ಜಾಗ ಒತ್ತುವರಿಯಿಂದಾಗಿ ಕಾಣೆಯಾಗಿದೆ. ೨೦೦೮- ೦೯ರಲ್ಲಿ ವಿವಿಧ ಯೋಜನೆಗಳಡಿ ಸ್ಥಳೀಯ ಗ್ರಾಪಂ ಆಡಳಿತವು ಮುತುವರ್ಜಿ ವಹಿಸಿ, ಕೆರೆಯ ಹೂಳು ತೆಗೆಸಿ, ಸಾರ್ವಜನಿಕರ ಶ್ಲಾಘನೆಗೆ ಕಾರಣವಾಗಿತ್ತು. ೨೦೧೬- ೧೭ರಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ₹೫ ಲಕ್ಷ, ೨೦೧೭ರಲ್ಲಿ ಜಿಪಂ ನೆರವಿನಿಂದ ₹೧.೧೬ ಲಕ್ಷ ವೆಚ್ಚದಲ್ಲಿ ಕೆರೆಯ ಹೂಳು ತೆಗೆಸಲಾಗಿತ್ತು. ಅಲ್ಲದೇ ೨೦೦೮- ೦೯ರಲ್ಲಿ ಒತ್ತುವರಿಯನ್ನು ತೆರವು ಮಾಡಲಾಗಿತ್ತು. ಆದರೆ, ಇದೀಗ ಈ ಕೆರೆಗೆ ಪುನಃ ಒತ್ತುವರಿಯ ಕಾಟವೂ ತೊಂದರೆಯಾಗಿದೆ.ಸುಮಾರು ೭ ಅಡಿ ನೀರನ್ನು ಹೊಂದಿರುವ ಈ ಕೆರೆಯ ಹೂಳು ತೆಗೆಯಲು ಕನಿಷ್ಠ ₹೧ ಕೋಟಿ ಅನುದಾನ ಅವಶ್ಯಕತೆಯಿದೆ ಎಂಬುದು ಪ್ರಾಜ್ಞರ ಅಭಿಮತವಾಗಿದೆ.
ಹಿಂದಿನ ಅನುದಾನದ ನೆರವಿನಿಂದ ಕೆರೆ ಹೂಳೆತ್ತುವ ಸಂದರ್ಭದಲ್ಲಿಯೇ ಕೆರೆಯಂಚಿಗೆ ಹಾದು ಹೋಗಿರುವ ಗ್ರಾಮದ ರಸ್ತೆಯ ಬದಿಗೆ ಅಗತ್ಯವಿದ್ದ ಪಿಚ್ಚಿಂಗ್ ಕಾರ್ಯವನ್ನೂ ಮಾಡಲಾಗಿದೆ. ಆದರೆ, ಇಂತಹ ಒಂದು ಉತ್ತಮ ಕೆರೆಯನ್ನು ಪ್ರವಾಸಿ ತಾಣದ ಸ್ವರೂಪದಲ್ಲಿ ಪರಿವರ್ತಿಸಬೇಕೆಂಬ ಬಹುವರ್ಷಗಳ ಕನಸು ನನಸಾಗಲು ಗ್ರಾಪಂಗೆ ಅನುದಾನದ ಕೊರತೆ ಬಾಧಿಸುತ್ತಿದೆ.ಆದ್ದರಿಂದ ಸಂಬಂಧಿಸಿದ ಇಲಾಖೆಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಇಂತಹ ಉಪಯುಕ್ತ ಕೆರೆಯ ಪುನರುಜ್ಜೀವನಕ್ಕೆ ನೆರವಾಗಬೇಕೆಂದು ಗ್ರಾಪಂ ಅಧ್ಯಕ್ಷ ಕುಪ್ಪಯ್ಯ ಪೂಜಾರಿ ಮತ್ತು ಸದಸ್ಯ ಗ.ರಾ. ಭಟ್ಟ ಆಶಯವಾಗಿದೆ.
ಪ್ರಸಕ್ತ ಉಮ್ಮಚಗಿ ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕೊರತೆ ನೀಗಿಸಲೆಂದು ಕೇಂದ್ರ ಸರ್ಕಾರದ ಜಲಜೀವನ ಮಿಷಿನ್ ಯೋಜನೆಯಡಿ ೧೮೦ ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದ್ದು, ಚವತ್ತಿ, ಸಂಕದಗುಂಡಿ, ತುಡುಗುಣಿ, ಕನೇನಹಳ್ಳಿ, ಬಾಳೆಗದ್ದೆ ಹಾಗೂ ಜಡ್ಡಿಗದ್ದೆಗಳಲ್ಲಿ ಯೋಜನೆಯ ಅನುಷ್ಠಾನ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.ಅಕ್ಕಪಕ್ಕದ ರೈತರ ಜಮೀನುಗಳಿಗೂ ತಂಪು ನೀಡುವ ಈ ಕೆರೆಯ ನೀರು, ಅಪರೂಪವಾಗುತ್ತಿರುವ ಪಕ್ಷಿ-ಪ್ರಾಣಿಗಳಿಗೆ ನೀರುಣಿಸುವ ಮೂಲವಾಗಿದೆ. ಇತ್ತೀಚೆಗೆ ಕಣ್ಮರೆಯಾಗುತ್ತಿರುವ ಬೆಳ್ಳಕ್ಕಿಗಳೂ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಈ ಕೆರೆಯ ನೀರು ಕುಡಿಯಲು ಕೆಲವು ವಿದೇಶಿ ಪ್ರಭೇದದ ಪಕ್ಷಿಗಳೂ ಆಗಮಿಸುತ್ತವೆ.