ಸಂಡೂರು: ತಾಲೂಕಿನ ಗಡಿ ಭಾಗದಲ್ಲಿರುವ ೭೩-ಹುಲಿಕುಂಟೆ ಗ್ರಾಮದ ಬಳಿ ಒಳತಿರುವು ರಚಿಸಲು ಒತ್ತಾಯಿಸಿ ಗ್ರಾಮಸ್ಥರು ಶನಿವಾರ ತಹಶೀಲ್ದಾರ್ ಜಿ.ಅನಿಲ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.ಒಳ ತಿರುವು ನಿರ್ಮಿಸದಿದ್ದಲ್ಲಿ, ಲೋಕಸಭಾ ಚುನಾವಣೆ ಹಾಗೂ ಮುಂಬರುವ ಎಲ್ಲ ರೀತಿಯ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದರು.ಮನವಿ ಸಲ್ಲಿಸಿ ಮಾತನಾಡಿದ ಗ್ರಾಮದ ಮುಖಂಡರಾದ ಎ.ಕೆ. ಮರಿಸ್ವಾಮಿ, ಜಿ.ಗಾದೀರಪ್ಪ, ಸಂಡೂರು ತಾಲೂಕಿನ ೭೩ ಹುಲಿಕುಂಟೆ ಗ್ರಾಮ ಕೂಡ್ಲಿಗಿ ಹಾಗೂ ಹೊಸಪೇಟೆ ಮಧ್ಯದ ರಾಷ್ಟ್ರೀಯ ಹೆದ್ದಾರಿಯಲ್ಲಿನ ಶಿವಪುರದ ಬಳಿ ಇದೆ. ಈ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ ೧೩/೫೦ ನಿರ್ಮಾಣ ಕಾರ್ಯ ಮುಕ್ತಾಯವಾಗಿದೆ. ಗ್ರಾಮಸ್ಥರು ಆಸ್ಪತ್ರೆ, ಶಿಕ್ಷಣ ಮತ್ತಿತರ ಕಾರ್ಯಗಳಿಗೆ ರಾಷ್ಟ್ರೀಯ ಹೆದ್ದಾರಿಯ ಮೂಲಕ ಸಮೀಪದ ಕೂಡ್ಲಿಗಿ ಅಥವ ಹೊಸಪೇಟೆಗೆ ತೆರಳುತ್ತಾರೆ. ಇದೀಗ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಗುತ್ತಿಗೆದಾರರು ರಾಷ್ಟ್ರೀಯ ಹೆದ್ದಾರಿಯಿಂದ ನಮ್ಮ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ಒಳ ತಿರುವು ನಿರ್ಮಿಸದಿರುವುದಿಲ್ಲ. ಈ ಮಾರ್ಗವನ್ನು ಮಣ್ಣು ಹಾಕಿ ಬಂದ್ ಮಾಡಿದ್ದಾರೆ. ಇದರಿಂದ ಗ್ರಾಮಸ್ಥರು ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ವಿವಿಧೆಡೆ ತೆರಳಲು ಸಾಧ್ಯವಾಗುತ್ತಿಲ್ಲ’ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.ರಾಷ್ಟ್ರೀಯ ಹೆದ್ದಾರಿಯಿಂದ ೭೩ ಹುಲಿಕುಂಟೆ ಗ್ರಾಮಕ್ಕೆ ತೆರಳಲು ಒಳತಿರುವು ನಿರ್ಮಿಸುವಂತೆ ಒತ್ತಾಯಿಸಿ ಪಿಡಿಒ, ತಹಶೀಲ್ದಾರ್, ತಾಪಂ ಇಒ, ರಾಷ್ಟ್ರೀಯ ಹೆದ್ದಾರಿ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದ್ದರೂ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ರಾಷ್ಟ್ರೀಯ ಹೆದ್ದಾರಿಯಿಂದ ಹುಲಿಕುಂಟೆ ಜನತೆ ತೆರಳಲು ಅನುಕೂಲವಾಗುವಂತೆ ಒಳತಿರುವು ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಲೋಕಸಭೆ ಸೇರಿ ಮುಂಬರುವ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ತಿಳಿಸಿದರು.ಮುಖಂಡರಾದ ನಿಂಗಪ್ಪ ಐಹೊಳೆ, ಶಿವಲಿಂಗಪ್ಪ, ರಾಮಕೃಷ್ಣ ಹೆಗಡೆ, ಗ್ರಾಮಸ್ಥರಾದ ಶ್ರೀನಿವಾಸ್, ಕೆ.ಎಸ್. ರೇವಣ್ಣ, ಬಿ ಭರಮಪ್ಪ, ಅಂಜಿನಪ್ಪ, ವೆಂಕಟೇಶ್, ಬಸಪ್ಪ, ಪರಮೇಶ್, ಜಿ. ಚಿನ್ನಾಪ್ರಪ್ಪ, ಅಂಜಿನಪ್ಪ ಉಪಸ್ಥಿತರಿದ್ದರು.