ಸಂಡೂರು: ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಚುನಾವಣೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ನಿರ್ದೇಶಕರ ಆಯ್ಕೆ ಪ್ರಕ್ರಿಯೆಯಲ್ಲಿ ಬೈಲಾ ನಿಯಮ ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ ಈಗಾಗಲೆ ಆರಂಭವಾಗಿರುವ ಚುನಾವಣಾ ಪ್ರಕ್ರಿಯೆ ಸ್ಥಗಿತಗೊಳಿಸಬೇಕು ಎಂದು ತಾಲೂಕು ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ (ಜಿಪಿಟಿ)ದ ಅಧ್ಯಕ್ಷ ಬಿ.ಎಂ. ಶಶಿಧರ ಒತ್ತಾಯಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ಒಟ್ಟು ೫ ನಿರ್ದೇಶಕರ ಸ್ಥಾನಗಳಿವೆ. ತಾಲೂಕಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಪ್ರಾಥಮಿಕ ಶಾಲಾ ಶಿಕ್ಷಕರು (ಪಿಎಸ್‌ಟಿ) ಹಾಗೂ ಪದವೀಧರ ಪ್ರಾಥಮಿಕ ಶಿಕ್ಷಕರು (ಜಿಪಿಟಿ) ಎಂದು ಪ್ರತ್ಯೇಕಿಸಲಾಗಿದೆ. ಇದು ಸಂಘದ ಬೈಲಾಗೆ ವಿರುದ್ಧವಾಗಿದೆ. ತಾಲೂಕಿನಲ್ಲಿ ೩೪೩ ಪಿಎಸ್‌ಟಿ ಹಾಗೂ ೨೨೯ ಜಿಪಿಟಿ ಶಿಕ್ಷಕರಿದ್ದಾರೆ. ಆದರೆ, ಚುನಾವಣೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಇರುವ ಒಟ್ಟು ೫ ಸ್ಥಾನಗಳಲ್ಲಿ ಪಿಎಸ್‌ಟಿ ಶಿಕ್ಷಕರಿಗೆ ೪ ಸ್ಥಾನಗಳನ್ನು ಹಾಗೂ ಜಿಪಿಟಿ ಶಿಕ್ಷಕರಿಗೆ ೧ ಸ್ಥಾನವನ್ನು ನಿಗದಿಪಡಿಸಲಾಗಿದೆ. ಈ ರೀತಿಯ ಪ್ರತ್ಯೇಕತೆ ಕೇವಲ ತಾಲೂಕಿನಲ್ಲಿ ಮಾತ್ರ ಮಾಡಲಾಗಿದೆ. ರಾಜ್ಯದ ಇತರೆಡೆಗೆ ಈ ಪ್ರತ್ಯೇಕತೆ ಇಲ್ಲ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.ಎನ್‌ಜಿಒ ಬೈಲಾ ಪ್ರಕಾರ ಪಿಎಸ್‌ಟಿ ಹಾಗೂ ಜಿಪಿಟಿ ಎಂದು ಪ್ರತ್ಯೇಕಿಸಲು ಸಾಧ್ಯವಿಲ್ಲ. ಅನುಬಂಧ ೩ರಲ್ಲಿ ಈ ರೀತಿ ಪ್ರತ್ಯೇಕಿಸಿರುವುದು ಬೈಲಾ ನಿಯಮದ ಉಲ್ಲಂಘನೆಯಾಗಿದೆ. ಅನುಬಂಧ ೩ರಲ್ಲಿ ಕ್ರಮಸಂಖೆ ೬ರಲ್ಲಿ ರಾಜ್ಯಾಧ್ಯಕ್ಷರು ತಿದ್ದುಪಡಿ ಮಾಡಿದ್ದಾರೆಂದು ಕೈಬರಹದ ತಿದ್ದುಪಡಿ ಮಾಡಿದ್ದಾರೆ. ತಿದ್ದುಪಡಿ ವಿಷಯವನ್ನು ತಾಲೂಕು ಮಟ್ಟದ ಎನ್‌ಜಿಒ ಸಭೆಯಲ್ಲಿ ಶಿಕ್ಷಣ ಇಲಾಖೆಯ ನಿರ್ದೇಶಕರ ಗಮನಕ್ಕೆ ತಾರದೆ, ಸಭಾ ನಡಾವಳಿ ಮಾಡದೆ, ಅನುಮೋದಿಸಿದ್ದಾರೆ. ಇದು ಅಧಿಕಾರದ ದುರಪಯೋಗವಾಗಿದೆ. ಸ್ವಜನ ಪಕ್ಷಪಾತಕ್ಕಾಗಿ ಜಿಲ್ಲೆಯ ಎಲ್ಲೂ ಇಲ್ಲದ, ನಿಯಮವನ್ನು ನಮ್ಮ ತಾಲೂಕಿನಲ್ಲಿ ಅನ್ವಯಿಸಲು ಹೊರಟಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ದೂರಿದರು.
ಅಧಿಕಾರ ದುರುಪಯೋಗ: ಸಂಘದ ಖಜಾಂಚಿ ಸಂತೋಷ್‌ಕುಮಾರ್ ಮಾತನಾಡಿ, ಶಿಕ್ಷಣ ಇಲಾಖೆಯ ನಿರ್ದೇಶಕರ ಸ್ಥಾನಗಳ ಹಂಚಿಕೆಯ ಬಗ್ಗೆ ತಾಲೂಕಿನ ಚುನಾವಣಾಧಿಕಾರಿಗಳಿಗೆ ಈ ವರೆಗೆ ಯಾವುದೇ ಮಾಹಿತಿ ಇಲ್ಲ. ಅ. ೮ರಂದು ಕೈಬರಹದಿಂದ ತಿದ್ದುಪಡಿ ಮಾಡಿದ ಮಾಹಿತಿಯನ್ನು ಚುನಾವಣಾಧಿಕಾರಿಗೆ ನೀಡಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪಿಎಸ್‌ಟಿ ಹಾಗೂ ಜಿಪಿಟಿ ಶಿಕ್ಷಕರಿಗೆ ಒಂದೇ ಬ್ಯಾಲೆಟ್ ಪೇಪರ್ ಇರುತ್ತದೆಯೋ ಅಥವ ಪ್ರತ್ಯೇಕವಾಗಿರುತ್ತದೆಯೋ ಎಂಬ ಬಗ್ಗೆ ಈಗಲೂ ಮಾಹಿತಿ ಇಲ್ಲ. ಕನಿಷ್ಠ ೨೨ ದಿನಕ್ಕಿಂತ ಮುಂಚಿತವಾಗಿ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಬೇಕು. ಈ ಕಾರ್ಯವಾಗಿಲ್ಲ. ಇಲ್ಲಿ ಅಧಿಕಾರದ ದುರುಪಯೋಗವಾಗಿದೆ. ಹೀಗಾಗಿ ಕೆಲವರು ಮತದಾನದಿಂದ ವಂಚಿತರಾಗಿದ್ದಾರೆ ಎಂದು ಆರೋಪಿಸಿದರು.ತಾಲೂಕಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮೀಸಲಾಗಿರುವ ೫ ನಿರ್ದೇಶಕರ ಸ್ಥಾನಗಳಿಗೆ ಪಿಎಸ್‌ಟಿ ಹಾಗೂ ಜಿಪಿಟಿ ಶಿಕ್ಷಕರು ಸಮಾನವಾಗಿ ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕು. ಇಲ್ಲದಿದ್ದಲ್ಲಿ, ಈ ಸಮಸ್ಯೆ ಬಗೆಹರಿಯುವ ವರೆಗೆ ಸಂಘದ ತಾಲೂಕು ಘಟಕದ ಚುನಾವಣಾ ಪ್ರಕ್ರಿಯೆನ್ನು ಸ್ಥಗಿತಗೊಳಿಸಬೇಕು. ಪ್ರತ್ಯೇಕ ಅಧಿಕಾರಿಯನ್ನು ನೇಮಿಸಿ, ಸೂಕ್ತ ತನಿಖೆ ನಡೆಸಬೇಕು. ಸಮಸ್ಯೆ ಬಗೆಹರಿದ ಮೇಲೆ ತಾಲೂಕು ಘಟಕಕ್ಕೆ ಪ್ರತ್ಯೇಕವಾಗಿ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಪಿಟಿ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ. ಶ್ರೀನಿವಾಸಮೂರ್ತಿ ಹಾಗೂ ಸಹ ಕಾರ್ಯದರ್ಶಿ ಉಮೇಶ್ ಅಂಬಿಗೇರ ಉಪಸ್ಥಿತರಿದ್ದರು.