ಯಲ್ಲಾಪುರದಲ್ಲಿ ಸ್ವಚ್ಛತಾ ಕಾರ್ಯಕ್ಕೆ ವಿದೇಶಿಗರೂ ಸಾಥ್‌

KannadaprabhaNewsNetwork | Published : Dec 13, 2024 12:46 AM

ಸಾರಾಂಶ

ಅಮೆರಿಕ, ಜಪಾನ್, ಇಟಲಿ, ಪೋಲೆಂಡ್‌ನ ಪ್ರಜೆಗಳು ಅಧ್ಯಯನದ ಜತೆಗೆ ಸ್ವಚ್ಛತೆಯ ಅಭಿಯಾನದಲ್ಲಿ ಪಾಲ್ಗೊಂಡು ನೈರ್ಮಲ್ಯದ ಮಹತ್ವ ಸಾರಿದರು.

ಶಂಕರ ಭಟ್ಟ ತಾರೀಮಕ್ಕಿ

ಯಲ್ಲಾಪುರ: ಯೋಗ ಅಧ್ಯಯನಕ್ಕೆಂದು ಪಟ್ಟಣಕ್ಕೆ ಆಗಮಿಸಿರುವ ವಿದೇಶಿಗರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ಗಮನ ಸೆಳೆದರು.

ಪಟ್ಟಣದ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿ ಡಾ. ವಿಘ್ನೇಶ್ವರ ಭಟ್ಟ ಬಾಗಿನಕಟ್ಟಾ ಅವರು ಸ್ಥಾಪಿಸಿದ ಋಷಿಕುಲಂ ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಇಂಡಿಕ್ ಸ್ಟಡೀಸ್ ಆ್ಯಂಡ್ ರಿಸರ್ಚ್ ಸೆಂಟರ್‌ನಲ್ಲಿ ಯೋಗ, ಭಗವದ್ಗೀತೆ, ಭಾರತೀಯ ಸಂಸ್ಕೃತಿ, ಕಲೆ ಇವುಗಳ ಅಧ್ಯಯನಕ್ಕಾಗಿ ಹಲವು ರಾಷ್ಟ್ರಗಳ ಆಸಕ್ತ ಪ್ರಜೆಗಳು ಆಗಮಿಸಿ ತರಬೇತಿ ಪಡೆಯುತ್ತಿದ್ದಾರೆ. ಅದೇ ರೀತಿ ಇಲ್ಲಿ ತರಬೇತಿಗಾಗಿ ಆಗಮಿಸಿರುವ ವಿದೇಶಿಗರು ಡಿ. ೧೧ರಂದು ಗೀತಾಜಯಂತಿ ಅಂಗವಾಗಿ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು. ಅಮೆರಿಕ, ಜಪಾನ್, ಇಟಲಿ, ಪೋಲೆಂಡ್‌ನ ಪ್ರಜೆಗಳು ಅಧ್ಯಯನದ ಜತೆಗೆ ಸ್ವಚ್ಛತೆಯ ಅಭಿಯಾನದಲ್ಲಿ ಪಾಲ್ಗೊಂಡು ನೈರ್ಮಲ್ಯದ ಮಹತ್ವ ಸಾರಿದರು.

ಅಮೆರಿಕದ ಯಮಲಗುಚಿ, ಜಪಾನಿನ ಅಕಿಕೋ, ಇಟಲಿಯ ಎರಿಕಾ ಮತ್ತು ಪೋಲೆಂಡಿನ ಮ್ಯಾಕ್ಸ್ ಅವರು ಗೀತೆಯ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಉದ್ದೇಶದಿಂದ ಇಲ್ಲಿ ವಿ. ವಿಘ್ನೇಶ್ವರ ಭಟ್ಟರ ಮಾರ್ಗದರ್ಶನದಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಗೀತೆಯ ಮುಖ್ಯಾಂಶವಾದ ಕರ್ಮಯೋಗವನ್ನು ಅವರು ಸ್ವಚ್ಛತಾ ಅಭಿಯಾನದ ಮೂಲಕ ತರಬೇತಿಗೊಳಿಸುತ್ತಿದ್ದಾರೆ. ಹೌಸಿಂಗ್ ಬೋರ್ಡ್ ಸುತ್ತಲ ಪ್ರದೇಶದಲ್ಲಿ ಬಿದ್ದ ಕಸಕಡ್ಡಿ, ತ್ಯಾಜ್ಯವನ್ನು ವಿದೇಶಿಗರು ತೆರವುಗೊಳಿಸಿದರು. ವಿಘ್ನೇಶ್ವರ ಭಟ್ಟರ ಮಾರ್ಗದರ್ಶನದಲ್ಲಿ ವೇದಾ ಭಟ್ಟ ಹಾಗೂ ಪಟ್ಟಣ ಪಂಚಾಯಿತಿ ಸಿಬ್ಬಂದಿ ಸಹಕರಿಸಿದ್ದರು.

ಅಮೆರಿಕದ ಯಮಲಗುಚಿ ಮಾತನಾಡಿ, ಯಲ್ಲಾಪುರ ಅಂತಾರಾಷ್ಟ್ರೀಯ ಅಧ್ಯಾತ್ಮ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಇಲ್ಲಿ ಯೋಗ, ಭಾರತೀಯ ಸಂಸ್ಕೃತಿ, ವೇದವಿಜ್ಞಾನ ಮತ್ತು ಭಾರತೀಯ ತತ್ವದರ್ಶನವನ್ನು ಬೋಧಿಸುವ ಉದ್ದೇಶದಿಂದ ಆರಂಭಿಸಿರುವುದು ನಮ್ಮಂತಹ ಅನೇಕರಿಗೆ ಸಹಕಾರಿಯಾಗಿದೆ.

ಡಾ. ವಿಘ್ನೇಶ್ವರ ಭಟ್ಟ ಅವರು ಮೈಸೂರು ಮಹಾರಾಜ ಸಂಸ್ಕೃತ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ದೇಶ- ವಿದೇಶಗಳಲ್ಲಿ ಅನೇಕ ಪ್ರಬಂಧ, ಉಪನ್ಯಾಸಗಳನ್ನು ನೀಡಿದ್ದಾರೆ. ಇತ್ತೀಚೆಗೆ ಋಷಿಕುಲಂ ಸಂಸ್ಥೆಯನ್ನು ಸ್ಥಾಪಿಸಿ ಯೋಗ, ಭಾರತೀಯ ವೇದ, ಸಂಸ್ಕೃತಿ ಇವುಗಳ ಮೌಲ್ಯವನ್ನು ವಿಶ್ವಕ್ಕೆ ತಲುಪಿಸುವ ಮಹಾನ್ ಕಾರ್ಯ ಮಾಡುತ್ತಿದ್ದಾರೆ.

Share this article