ಸಚಿವರ ಭರವಸೆಯ ಮರುದಿನವೇ ಅರಣ್ಯಕ್ಕೆ ಬೆಂಕಿ

KannadaprabhaNewsNetwork | Published : Mar 14, 2025 12:37 AM

ಸಾರಾಂಶ

ತಾಲೂಕಿನ ಶ್ವಾಸಕೋಶದಂತಿರುವ ಮುದಿಗೆರೆ ಅರಣ್ಯ ಪ್ರದೇಶದ ಕುರಿತು ವಿಪ ಸದಸ್ಯ ಚಿದಾನಂದ ಗೌಡ ಬುಧವಾರ ಪ್ರಶ್ನೆ ಮಾಡಿದ ಬೆನ್ನಲ್ಲಿಯೇ ಗುರುವಾರ ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದಿದ್ದು ಹಲವಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ.

ಕನ್ನಡಪ್ರಭ ವಾರ್ತೆ ಶಿರಾ ತಾಲೂಕಿನ ಶ್ವಾಸಕೋಶದಂತಿರುವ ಮುದಿಗೆರೆ ಅರಣ್ಯ ಪ್ರದೇಶದ ಕುರಿತು ವಿಪ ಸದಸ್ಯ ಚಿದಾನಂದ ಗೌಡ ಬುಧವಾರ ಪ್ರಶ್ನೆ ಮಾಡಿದ ಬೆನ್ನಲ್ಲಿಯೇ ಗುರುವಾರ ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದಿದ್ದು ಹಲವಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ.

ಶಿರಾ ತಾಲೂಕಿನ ಕಸಬಾ ಹೋಬಳಿಯ ಮುದಿಗೆರೆ ಅಮೃತ್ ಮಹಲ್ ಕಾವಲ್ ಸ.ನಂ. 12ರಲ್ಲಿ ಸುಮಾರು 3025 ಎಕರೆ ಅರಣ್ಯ ಪ್ರದೇಶವಿದ್ದು ಇದನ್ನು ಯಾವುದೇ ಕಾರಣಕ್ಕೂ ಬೇರೆ ಉದ್ದೇಶಕ್ಕೆ ಬಳಸಬಾರದು ಎಂದು ವಿಪ ಸದಸ್ಯ ಚಿದಾನಂದಗೌಡ ಸರ್ಕಾರಕ್ಕೆ ಬುಧವಾರವಷ್ಟೇ ಆಗ್ರಹಿಸಿದ್ದರು. ಆದರೆ ಗುರುವಾರ ಬೆಳಿಗ್ಗೆ ಬೆಂಕಿ ಕೆನ್ನಾಲಿಗೆಗೆ ಹಲವಾರು ಎಕರೆ ಅರಣ್ಯ ನಾಶವಾಗಿದೆ. ಬುಧವಾರ ಅರಣ್ಯ ಸಚಿವ ಈಶ್ವರ ಖಂಡ್ರೆ ಅರಣ್ಯ ರಕ್ಷಿಸುವ ಕುರಿತು ಮಾತನಾಡಿದ್ದರು. ಗುರುವಾರ ಬೆಂಕಿ ಬಿದ್ದಾಗ ಇಲಾಖೆ ಸಿಬ್ಬಂದಿ ತಮ್ಮ ಕೈಲಾದಷ್ಟು ಅರಣ್ಯ ನಾಶ ತಡೆದಿದ್ದಾರೆ.

ಈ ಅರಣ್ಯಪ್ರದೇಶದಲ್ಲಿ ತುಗ್ಗಲಿ, ತೆರೆದು, ಹೊನ್ನೆ, ಹೊಂಗೆ, ಕಮರ, ಅರಳಿ, ನೀಲಗಿರಿ, ಅಕೇಶಿಯಾ ಸೇರಿದಂತೆ ಹಲವಾರು ಮರಗಿಡಗಳಿದ್ದು, ಕೂಡಲೇ ಅರಣ್ಯ ಸಚಿವರು ತಾವು ಕೊಟ್ಟ ಮಾತಿನಂತೆ ಶಿರಾ ಮುದಿಗೆರೆ ಅಮೃತ್ ಮಹಲ್ ಕಾವಲ್ ಅರಣ್ಯಪ್ರದೇಶವನ್ನು ಉಳಿಸಬೇಕು. ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳಬೇಕು ಹಾಗೂ ಒಮ್ಮೆ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಬೇಕು ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಒತ್ತಾಯಿಸಿದ್ದಾರೆ.

ಕೋಟ್‌...

ಮುದಿಗೆರೆ ಅಮೃತ್ ಮಹಲ್ ಕಾವಲ್ ಅರಣ್ಯ ಪ್ರದೇಶದಲ್ಲಿ ಬೆಂಕಿ ಬಿದ್ದಿರುವ ಬಗ್ಗೆ ಮಾಹಿತಿ ಬಂದ ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ ಅಗ್ನಿಶಾಮಕ ದಳದ ಸಿಬ್ಬಂದಿಗಳೊಂದಿಗೆ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಅರಣ್ಯದಲ್ಲಿದ್ದ ಗಿಡಮರಗಳಿಗೆ ಯಾವುದೇ ಹಾನಿಯಾಗಿಲ್ಲ. ಗಿಡಗಳಿಂದ ಉದುರಿದ್ದ ಎಲೆಗಳು ಸುಟ್ಟು ಹೋಗಿದ್ದು, ಬೆಂಕಿ ಬೀಳದಂತೆ ಸುರಕ್ಷತಾ ಕ್ರಮ ಕೈಗೊಂಡಿದ್ದೇವೆ. ಅರಣ್ಯದಲ್ಲಿ ಕುರಿ ಮೇಕೆ ಕಾಯುವವರು ಅರಣ್ಯದಲ್ಲಿನ ಗಿಡಗಳಿಗೆ ಬೆಂಕಿ ಇಡಬಾರದು- ನವನೀತ್, ವಲಯ ಅರಣ್ಯಾಧಿಕಾರಿ.

Share this article