ವನ್ಯಪ್ರಾಣಿಗಳ ದಾಳಿ ತಡೆಗೆ ಅರಣ್ಯ ಇಲಾಖೆ ಸೂಕ್ತ ಸ್ಪಂದನೆ ಅಗತ್ಯ: ಯದುವೀರ್

KannadaprabhaNewsNetwork |  
Published : Nov 06, 2025, 01:15 AM IST
ಯದುವೀರ್ | Kannada Prabha

ಸಾರಾಂಶ

ಮೈಸೂರು ಹಾಗೂ ಚಾಮರಾಜನಗರದ ಬಂಡೀಪುರ ಅರಣ್ಯದ ಅಂಚಿನ ಗ್ರಾಮಗಳಲ್ಲಿ ಇತ್ತೀಚೆಗೆ ಹುಲಿಗಳ ದಾಳಿ ಹೆಚ್ಚುತ್ತಿದೆ. ಇದಕ್ಕೆ ಅರಣ್ಯ ಇಲಾಖೆ ಸರಿಯಾಗಿ ಸ್ಪಂದಿಸಬೇಕು. ಕಾಡಿನಿಂದ ಆನೆಗಳು ಹೊರ ಬರುತ್ತಿರುವುದು ಮೊದಲಿನಿಂದಲೂ ಇದೆ. ಆದರೆ, ಹುಲಿಗಳು ಹೊರಗೆ ಬರುತ್ತಿರುವುದು ಇತ್ತೀಚೆಗೆ ಹೆಚ್ಚಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ನಂಜನಗೂಡು ಮತ್ತು ಸರಗೂರು ತಾಲೂಕು ಭಾಗದಲ್ಲಿ ಹುಲಿ ದಾಳಿ ನಡೆಯುತ್ತಿದ್ದು, ಇದರ ನಿಯಂತ್ರಣಕ್ಕೆ ಇಲಾಖೆ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಒತ್ತಾಯಿಸಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಹಾಗೂ ಚಾಮರಾಜನಗರದ ಬಂಡೀಪುರ ಅರಣ್ಯದ ಅಂಚಿನ ಗ್ರಾಮಗಳಲ್ಲಿ ಇತ್ತೀಚೆಗೆ ಹುಲಿಗಳ ದಾಳಿ ಹೆಚ್ಚುತ್ತಿದೆ. ಇದಕ್ಕೆ ಅರಣ್ಯ ಇಲಾಖೆ ಸರಿಯಾಗಿ ಸ್ಪಂದಿಸಬೇಕು. ಕಾಡಿನಿಂದ ಆನೆಗಳು ಹೊರ ಬರುತ್ತಿರುವುದು ಮೊದಲಿನಿಂದಲೂ ಇದೆ. ಆದರೆ, ಹುಲಿಗಳು ಹೊರಗೆ ಬರುತ್ತಿರುವುದು ಇತ್ತೀಚೆಗೆ ಹೆಚ್ಚಾಗಿದೆ. ಹಾಗಾಗಿ ದತ್ತಾಂಶ ನೋಡಬೇಕು. ಅರಣ್ಯದಲ್ಲಿ ಹುಲಿಗಳ ಸಂಖ್ಯೆ ಎಷ್ಟಿದೆ ಎನ್ನುವುದನ್ನು ನೋಡಬೇಕು. ಇದಕ್ಕಾಗಿ ಸಮೀಕ್ಷೆಯನ್ನು ರಾಜ್ಯ ಸರ್ಕಾರ ಅಗ್ಗಿಂದಾಗಿ ಕೈಗೊಳ್ಳಬೇಕು ಎಂದರು.

ಇತ್ತೀಚೆಗೆ ಹುಲಿಗಳ ಸಂಖ್ಯೆ ಹೆಚ್ಚಾಗಿದೆ‌. ಹಾಗಾಗಿ ಕಾಡಿನಿಂದ ಹೊರ ಬರುತ್ತಿವೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಇದಕ್ಕಾಗಿ ಒಳ್ಳೆಯ ಯೋಜನೆ ರೂಪಿಸಬೇಕು. ಕಾಡಂಚಿನ ಗ್ರಾಮದಲ್ಲಿ ವಾಸಿಸುವ ಜನರಿಗೆ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರೆಸಾರ್ಟ್‌ಗಳು ಹೆಚ್ಚು ಹೆಚ್ಚು ಸ್ಥಾಪನೆ ಆಗುತ್ತಿರುವುದರಿಂದ ಸಫಾರಿಯೂ ಹೆಚ್ಚಳವಾಗಿದೆ. ಬಂಡೀಪುರದ ಅರಣ್ಯ ವಿಸ್ತೀರ್ಣದಲ್ಲಿ ಶೇ.10ರಷ್ಟನ್ನು ಸಫಾರಿಗೆ ಬಳಕೆ ಮಾಡಿಕೊಳ್ಳುತ್ತಿಲ್ಲ. ಹುಳಿ ದಾಳಿಯ ಬಗ್ಗೆ ಸಮಗ್ರ ಅಧ್ಯಯನ ಅಗತ್ಯವಾಗಿ ಆಗಬೇಕು. ಅರಣ್ಯದಲ್ಲಿ ಲಂಟಾನ ಯಥೇಚ್ಛವಾಗಿ ಬೆಳೆದಿದೆ. ವಿದೇಶಿ ಕಳೆಗಳು ಬೆಳೆದಿವೆ. ಪರಿಣಾಮವಾಗಿ ಜಿಂಕೆ, ಸಾಂಬರ್ ನಂತಹ ಸಸ್ಯಾಹಾರಿ ಪ್ರಾಣಿಗಳು ಆಹಾರ ಹುಡುಕಿಕೊಂಡು ಕಾಡಿನಿಂದ ಹೊರ ಬರುತ್ತಿವೆ. ಹಾಗಾಗಿ ಇವುಗಳನ್ನು ಬೇಟೆಯಾಡಲು ಹುಲಿಗಳು ಕಾಡಿನಿಂದ ಹೊರ ಬರುತ್ತಿವೆ. ಆದ್ದರಿಂದ ಕಾಡಿನೊಳಗೆ ಹುಲ್ಲುಗಾವಲು ಹೆಚ್ಚಿನ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದರು.ನಗರ ಪಾಲಿಕೆ ಅನುದಾನ ಹಿಂದಕ್ಕೆ

ನಗರ ಪಾಲಿಕೆ ಅಭಿವೃದ್ಧಿ ಕಾರ್ಯಗಳಿಗಾಗಿ ಕೇಂದ್ರ ಸರ್ಕಾರದಿಂದ ಬಂದ 70 ಕೋಟಿ ರು. ಅನುದಾನ ಹಿಂದಕ್ಕೆ ಹೋಗಿದೆ. ನಗರ ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತವಿಲ್ಲ. ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ಹೀಗಾಗಿ ಅನುದಾನ ಬಳಕೆಯಾಗದೇ ಹಿಂದಕ್ಕೆ ಹೋಗಿದೆ. ಆದ್ದರಿಂದ ಗ್ರೇಟರ್‌ ಮೈಸೂರು ಯೋಜನೆ ರೂಪಿಸುವಾಗ ಸ್ಥಳೀಯ ಪ್ರತಿನಿಧಿಗಳ ಸಲಹೆ- ಸೂಚನೆ ಅಗತ್ಯವಿದೆ.

- ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್

PREV

Recommended Stories

ಕಸದಿಂದ ಲಕ್ಷ ಮನೆಗೆ ವಿದ್ಯುತ್ ಪೂರೈಕೆ: ಕರಿಗೌಡ
‘ಶಕ್ತಿ’ಯಿಂದ ಮಹಿಳೆಯರ ಸಾರಿಗೆಯ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ