ಅರಣ್ಯಭೂಮಿ ಒತ್ತುವರಿ ತೆರವು ಆದೇಶ ಮಲೆನಾಡಿಗರ ನೆಮ್ಮದಿಗೆ ಭಂಗ ತಂದಿದೆ. ವಯನಾಡು ದುರಂತದ ನಂತರ ಎಚ್ಚೆತ್ತಿರುವ ರಾಜ್ಯ ಸರ್ಕಾರ ಕಟ್ಟುನಿಟ್ಟಾಗಿ ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸುವಂತೆ ಆದೇಶಿಸಿ ಅಧಿಕಾರಿಗಳಿಗೆ ಕಾಲಮಿತಿ ನಿಗಧಿ
ಸಕಲೇಶಪುರ : ಅರಣ್ಯಭೂಮಿ ಒತ್ತುವರಿ ತೆರವು ಆದೇಶ ಮಲೆನಾಡಿಗರ ನೆಮ್ಮದಿಗೆ ಭಂಗ ತಂದಿದೆ. ವಯನಾಡು ದುರಂತದ ನಂತರ ಎಚ್ಚೆತ್ತಿರುವ ರಾಜ್ಯ ಸರ್ಕಾರ ಕಟ್ಟುನಿಟ್ಟಾಗಿ ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸುವಂತೆ ಆದೇಶಿಸಿ ಅಧಿಕಾರಿಗಳಿಗೆ ಕಾಲಮಿತಿ ನಿಗಧಿಪಡಿಸಿರುವುದರಿಂದ ಅಧಿಕಾರಿಗಳು ಸಹ ಕಾರ್ಯಚರಣೆಗೆ ಸಿದ್ಧತೆ ನಡೆಸಿ ನೋಟಿಸ್ ನೀಡಲಾರಂಭಿಸಿರುವುದು ಒತ್ತುವರಿದಾರರ ನೆಮ್ಮದಿಗೆ ಧಕ್ಕೆ ತಂದಿದೆ.
ತಾಲೂಕಿನಲ್ಲಿ 1708 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂಬ ಅಂಕಿಅಂಶಗಳನ್ನು ಮುಂದಿಟ್ಟಿರುವ ಅಧಿಕಾರಿಗಳು ಒತ್ತುವರಿ ತೆರವು ಕಾರ್ಯಾಚರಣೆ ರೂಪರೇಷೆಯ ಸಭೆ ನಡೆಸಿದ್ದಾರೆ. ಸಭೆಯ ಪ್ರಕಾರ 2ರಿಂದ 5 ಎಕರೆ ಭೂಮಿ ಒತ್ತುವರಿದಾರರ ತಂಟೆಗೆ ಸದ್ಯಕ್ಕೆ ಕೈಹಾಕದಿರುವುದು. 5 ರಿಂದ 10 ಎಕರೆ ಪ್ರದೇಶ ಒತ್ತುವರಿದಾರರಿಗೆ ಎರಡನೇ ಹಂತದಲ್ಲಿ ನೋಟಿಸ್ ನೀಡುವುದು, 10 ಎಕರೆಗಿಂತ ಅಧಿಕ ಅರಣ್ಯ ಭೂಮಿ ಒತ್ತುವರಿ ಮಾಡಿರುವ ಬೆಳೆಗಾರರ ವಿರುದ್ಧ ಶೀಘ್ರವೆ ನೋಟಿಸ್ ನೀಡಿ ಉತ್ತರ ಪಡೆದು ಕಾರ್ಯಾಚರಣೆ ಆರಂಭಿಸುವುದು. ಏಕಾಏಕಿ ಕಾರ್ಯಚರಣೆಗೆ ಇಳಿದರೆ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಕಾನೂನಿನಂತೆ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಲಾಗಿದೆ.
ಸಕಲೇಶಪುರದಲ್ಲೆ ಹೆಚ್ಚು: ಸಕಲೇಶಪುರ ಉಪವಿಭಾಗದಲ್ಲಿ 1708 ಎಕರೆ ಪ್ರದೇಶ ಒತ್ತುವರಿಯಾಗಿದೆ. ಇದರಲ್ಲಿ ಸಕಲೇಶಪುರ ವಲಯ ವ್ಯಾಪ್ತಿಯಲ್ಲಿ 1350 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದ್ದರೆ, ಉಪವಿಭಾಗ ವ್ಯಾಪ್ತಿಯ ಯಸಳೂರು ವಲಯ ಹಾಗೂ ಅರಕಲಗೂಡು ತಾಲೂಕಿನಲ್ಲಿ ಕೇವಲ 358 ಎಕರೆ ಪ್ರದೇಶ ಒತ್ತುವರಿಯಾಗಿದೆ ಎನ್ನಲಾಗುತ್ತಿದೆ. ಆದರೆ ವಾಸ್ತವಾಗಿ 1708 ಎಕರೆ ಮಾತ್ರವಲ್ಲ ಈ ಅಂಕಿ ಅಂಶದ ನಾಲ್ಕುಪಟ್ಟು ಹೆಚ್ಚಿನ ಜಮೀನು ಒತ್ತುವರಿಯಾಗಿದೆ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಮಾತು.
ಸಾಧ್ಯನಾ: ಎಲ್ಲ ಅರಣ್ಯ ಭೂಮಿ ಒತ್ತುವರಿ ತೆರವು ಅಸಾಧ್ಯ ಎಂಬುದು ಹೆಸರು ಹೇಳಲಿಚ್ಛಸದ ಅಧಿಕಾರಿಯ ಮಾತು. 2014 ರಿಂದ ಹೆಚ್ಚು ಸದ್ದುಮಾಡುತ್ತಿರುವ ಸೆಕ್ಷನ್ 4ರಡಿ ತಾಲೂಕಿನ ಹೆತ್ತೂರು ಹಾಗೂ ಹಾನುಬಾಳ್ ಹೋಬಳಿಯಲ್ಲಿ 7836 ಎಕರೆ ಪ್ರದೇಶ ಒತ್ತುವರಿಯಾಗಿದೆ ಎಂದು ಅರಣ್ಯ ಇಲಾಖೆ ಗುರುತಿಸಿದ್ದು ಅರಣ್ಯ ಇಲಾಖೆ ಏಕಮುಖವಾಗಿ ಸರ್ವೇ ನಡೆಸಿ ಗಡಿಕಲ್ಲುಗಳನ್ನು ಹಾಕಿದೆ.
ಹೀಗೆ ಅರಣ್ಯ ಇಲಾಖೆ ಗುರುತಿಸಿರುವ ಭೂಮಿಯಲ್ಲಿ ಹಲವು ಪುರತಾನ ಗ್ರಾಮಗಳು, ಕಾಫಿತೋಟಗಳು ಒಳಪಟ್ಟಿದ್ದು ನೂರಾರು ತಲೆಮಾರಿನಿಂದ ಜನರು ವಾಸಮಾಡುತ್ತಿದ್ದಾರೆ. ಅರಣ್ಯ ಇಲಾಖೆಯ ಕ್ರಮವನ್ನು ಖಂಡಿಸಿ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೇಗೆ ಸಾಕಷ್ಟು ಆಗ್ರಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ಕಾರ ವರ್ಷದ ಹಿಂದೆ ಜಂಟಿ ಸರ್ವೇಗೆ ಆದೇಶ ನೀಡಿದೆ.
ಆದರೆ, ಆದೇಶ ಜಾರಿಯಾಗಿ ವರ್ಷಗಳ ಕಳೆದರೂ ಶೇ 10ರಷ್ಟು ಪ್ರಗತಿಯು ಸಾಧ್ಯವಾಗಿಲ್ಲ. ಇನ್ನೂ ಅರಣ್ಯ ಭೂಮಿ ಒತ್ತುವರಿ ತೆರವು ಯಾವ ಮಾನದಂಡದಲ್ಲಿ ನಡೆಯಲಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಒತ್ತುವರಿ ಜಮೀನು ಸರ್ವೇ ನಡೆಯದೆ ತೆರವು ಹೇಗೆ ಎಂಬ ಪ್ರಶ್ನೆ ಮೂಡಿದ್ದು, ಅರಣ್ಯ ಇಲಾಖೆ ಒತ್ತುವರಿ ತೆರವಿಗೆ ನೀಡುವ ನೋಟಿಸ್‌ನ್ನು ಪಡೆಯದಿರಲು ಬೆಳೆಗಾರರು ನಿರ್ಧರಿಸದ್ದರೆ, ಸರ್ವೇ ಕಾರ್ಯ ನಡೆಯದೆ ಅರಣ್ಯ ಭೂಮಿ ಎಂದು ಹೇಗೆ ತೀರ್ಮಾನಿಸಲಾಗಿದೆ ಎಂಬ ಪ್ರಶ್ನೆಯನ್ನು ಬೆಳೆಗಾರರು ಎತ್ತಿದ್ದಾರೆ.ಪ್ರವಾಸೋದ್ಯಮಕ್ಕೆ ಧಕ್ಕೆ: ತಾಲೂಕಿನ ಪಶ್ಚಿಮಘಟ್ಟದಂಚಿನಲ್ಲಿ ಸಾಕಷ್ಟು ರೆಸಾರ್ಟ್ ಹಾಗೂ ಹೋಂಸ್ಟೇಗಳಿದ್ದು ನೂರಾರು ಸಂಖ್ಯೆಯಲ್ಲಿರುವ ಇವುಗಳನ್ನು ನಂಬಿ ಸಾವಿರಾರು ಜನರು ಕೆಲಸ ಮಾಡುತ್ತಿದ್ದಾರೆ.
ಅರಣ್ಯ ಭೂಮಿ ಒತ್ತುವರಿ ತೆರವು ನಿಶ್ಚಿತವಾಗಿ ನಡೆದರೆ ತಾಲೂಕಿನ ನೂರಕ್ಕೂ ಅಧಿಕ ರೆಸಾರ್ಟ್ ಹಾಗೂ ಹೋಂಸ್ಟೆಗಳು ತೆರವುಗೊಳ್ಳಲಿವೆ. ತಾಲೂಕಿನಲ್ಲಿ ರೆಸಾರ್ಟ್ ಪರಿಕಲ್ಪನೆ ಆರಂಭವಾದ ಅಚ್ಚನಹಳ್ಳಿ ಗ್ರಾಮವೊಂದರಲ್ಲೆ ೧೯ ರೆಸಾರ್ಟ್‌ಗಳು ಬಾಗಿಲು ಮುಚ್ಚಲಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಈಗಾಗಲೇ ತೆರವುಗೊಳಿಸ ಬೇಕಿರುವ ಹೋಂಸ್ಟೆ ಹಾಗೂ ರೆಸಾರ್ಟ್‌ಗಳ ಪಟ್ಟಿಯನ್ನು ಸಿದ್ಧಪಡಿಸಿ ನೋಟಿಸ್ ನೀಡಲು ಆರಂಭಿಸಿದ್ದಾರೆ.ಅಸಾಧ್ಯ: ಈಗಾಗಲೇ ಸೇಕ್ಷನ್ ನಾಲ್ಕರ ಅಡಿಯಲ್ಲಿ ಬರುವ ರೆಸಾರ್ಟ್‌ಗಳಿಗೆ ಕಳೆದ ನಾಲ್ಕುವರ್ಷದಿಂದ ನೋಟಿಸ್ ನೀಡಲಾಗುತ್ತಿದೆ. ಹಲವು ರೆಸಾರ್ಟ್‌ಗಳ ತೆರವು ಕಾರ್ಯಾಚರಣೆಗೂ ಅರಣ್ಯ ಇಲಾಖೆ ಮುಂದಾಗಿತ್ತು.
ಆದರೆ, ಅರಣ್ಯ ಇಲಾಖೆಯ ಈ ಕ್ರಮದ ವಿರುದ್ಧ ನ್ಯಾಯಾಲಯದಲ್ಲಿ ತಡೆಯಾಜ್ಞೆ ತರುವ ಮೂಲಕ ರೆಸಾರ್ಟ್‌ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ.ತಪ್ಪಿದ ಆದಾಯ: ಸೆಕ್ಷನ್ ನಾಲ್ಕರ ವ್ಯಾಪ್ತಿಗೆ ಬರುವ ರೆಸಾರ್ಟ್‌ಗಳಿಗೆ ಅನುಮತಿ ನೀಡದಂತೆ ಗ್ರಾಮ ಪಂಚಾಯತ್ ಆಡಳಿತಕ್ಕೆ ತಾಲೂಕು ಆಡಳಿತ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಗ್ರಾ.ಪಂಗಳು ರೆಸಾರ್ಟ್‌ಗಳ ಪರವನಾಗಿಯನ್ನು ನವೀಕರಿಸುತ್ತಿಲ್ಲ. ಆದರೂ ರೆಸಾರ್ಟ್‌ಗಳು ನಿರ್ವಹಣೆ ನಿರಾತಂಕವಾಗಿ ನಡೆಯುತ್ತಿದ್ದು ಗ್ರಾ.ಪಂಗಳಿಗೆ ಬರಬೇಕಿದ್ದ ಆದಾಯ ಮಾತ್ರ ಕೈತಪ್ಪಿದೆ.
1.ಹೇಳಿಕೆ
ಏಕಾಏಕಿ ತೆರವು ಕಾರ್ಯಚರಣೆ ಅಸಾಧ್ಯ. ಸಾಧಕಬಾಧಕಗಳ ಬಗ್ಗೆ ಈಗಾಗಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದ್ದು ಹಂತಹಂತವಾಗಿ ಕಾರ್ಯಚರಣೆ ನಡೆಸಲು ಯೋಜನೆ ರೂಪಿಸಲಾಗಿದೆ.
- ಮಹದೇವ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ.2.ಹೇಳಿಕೆ
ಒತ್ತುವರಿ ತೆರವಿಗೆ ಮುಂದಾದರೆ ನಾವು ನಮ್ಮ ಜಮೀನು ಉಳಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಲೇಬೇಕಿದೆ. ಸರ್ವೇ ನಡೆಯದೆ ಜಮೀನು ಏಕಾಏಕಿ ನಮ್ಮದು ಎಂದು ತೆರವಿಗೆ ಮುಂದಾದರೆ ಹೇಗೆ?
- ಕುಮಾರಸ್ವಾಮಿ, ಅಧ್ಯಕ್ಷರು, ಹೋಂ ಸ್ಟೇ ಮಾಲೀಕರ ಸಂಘ.