ಕನ್ನಡಪ್ರಭ ವಾರ್ತೆ ಸೊರಬ
ಪರಿಸರ ಪ್ರತಿ ಜೀವಿಯ ಉಸಿರು. ಮನುಷ್ಯನ ದಬ್ಬಾಳಿಕೆಯಿಂದ ಮಲೆನಾಡಿನ ಹಸಿರು ಕಾನನ ತನ್ನ ಜೀವ ಸೆಲೆಯನ್ನು ಕಳೆದುಕೊಂಡು ಬರಡಾಗುತ್ತಿದೆ. ಇದರಿಂದ ಪರಿಸರದಲ್ಲಿ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಆದ್ದರಿಂದ ಅಳಿದು ಉಳಿದಿರುವ ಕಾಡು ರಕ್ಷಣೆಗೆ ಮುಂದಾಗದಿದ್ದರೆ ಇಡೀ ಜೀವ ಸಂಕುಲಕ್ಕೆ ಸಂಭವಿಸುವ ಸಂಚಕಾರವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪರಿಸರ ಜಾಗೃತಿ ಟ್ರಸ್ಟ್ ಅಧ್ಯಕ್ಷ, ಹಿರಿಯ ವಕೀಲ ಎಂ.ಆರ್.ಪಾಟೀಲ್ ಎಚ್ಚರಿಸಿದರು.ಗುರುವಾರ ಪಟ್ಟಣದ ಹೊರವಲಯದಲ್ಲಿರುವ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಅರಣ್ಯ ಇಲಾಖೆ, ಕೆ.ವಿ.ಸುಬ್ಬಣ್ಣ ರಂಗಸಮೂಹ ಹೆಗ್ಗೋಡು ಹಾಗೂ ಸಾರ ಸಂಸ್ಥೆ ಪೊಡವಿಯ ಕೊಡವಿದರೆ ಎಂಬ ಶೀರ್ಷಿಕೆಯ ಕಾಡು ಸಂರಕ್ಷಣೆ ಕುರಿತ ಹಮ್ಮಿಕೊಂಡಿದ್ದ ಬೀದಿ ನಾಟಕ ಉದ್ಘಾಟಿಸಿ ಮಾತನಾಡಿದರು.
ಭೂಮಿಯಲ್ಲಿನ ಪ್ರತಿಯೊಂದು ಜೀವಿಯ ಬದುಕು ಅರಳುವುದೇ ಪರಿಸರದಲ್ಲಿ. ಅದರ ಸಮತೋಲನ ಕಾಯ್ದುಕೊಂಡರೆ ಯಾವುದೇ ವಿಪತ್ತುಗಳು ಎದರುರಾಗವುದಿಲ್ಲ ಎಂದರು.ಪರಿಸರ ಜಾಗೃತಿ ಟ್ರಸ್ಟ್ ಉಪಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ ಮಾತನಾಡಿ, ಪರಿಸರ ಸಂರಕ್ಷಣೆ ವಿಷಯದಲ್ಲಿ ಕೇವಲ ಅರಣ್ಯ ಇಲಾಖೆ ಮಾತ್ರ ಜವಾಬ್ದಾರಿ ಹೋರುವುದಲ್ಲ. ಸಂಘ-ಸಂಸ್ಥೆಗಳತ್ತ ಬೆರಳು ತೋರಿಸುವುದನ್ನು ತೊರೆದು ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಗ್ರಾಮ, ಊರು, ಪಟ್ಟಣ ಎಲ್ಲಾ ಕಡೆಯೂ ಕಾಡು ರಕ್ಷಣೆಗೆ ಸೈನಿಕರಂತೆ ಕಾರ್ಯಪ್ರವೃತ್ತ ರಾಗಬೇಕು. ನಮ್ಮದೂ ಆದ್ಯ ಕರ್ತವ್ಯ ಎಂದು ಭಾವಿಸಿ ಕೈ ಜೋಡಿಸಿ ಉಳಿದಿರುವ ಅರಣ್ಯ ಸಂಪತ್ತಾನಾದರೂ ರಕ್ಷಿಸಿಕೊಳ್ಳುವ ಸಂಕಲ್ಪ ಮಾಡಬೇಕು ಎಂದರು.ಹೆಗ್ಗೋಡು ರಂಗ ಸಮೂಹ ಪರಿಣಾಮಕಾರಿ ಪರಿಸರ ಸಂರಕ್ಷಣೆಯ ಕಥಾ ಹಂದರದ ಪ್ರಹಸನವನ್ನು ಕಟ್ಟಿಕೊಂಡು ಬೀದಿ ನಾಟಕಗಳ ಮೂಲಕ ಪರಿಸರ ರಕ್ಷಣಾ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ. ಅವರ ಜೊತೆಗೆ ಸಂಘ-ಸಂಸ್ಥೆಗಳೂ ಕೂಡ ಭಾಗಿಯಾಗಿಬೇಕು ಎಂದರು.
ಶಾಲಾ ಮುಖ್ಯೋಪಾಧ್ಯಾಯ ಮಾರುತಿ ಮಾತನಾಡಿ, ಅರಣ್ಯ ರಕ್ಷಣೆಯ ಜೊತೆಗೆ ಶಾಲಾ ಪರಿಸರ ರಕ್ಷಣೆಯ ಹೊಣೆ ಶಿಕ್ಷಕ, ವಿದ್ಯಾರ್ಥಿಗಳದ್ದು. ಈ ನಿಟ್ಟಿನಲ್ಲಿ ಮಕ್ಕಳ ಜೊತೆ ಗೂಡಿ ಶಾಲಾ ಆವರಣದಲ್ಲಿ ವ್ಯವಸ್ಥಿತ ಅರಣ್ಯವನ್ನು ಬೆಳೆಸಿ ಸಂರಕ್ಷಿಸಲಾಗುತ್ತಿದೆ ಎಂದರು.ನಂತರ ರಂಗ ಸಮೂಹ ತಂಡದಿಂದ ‘ಪೊಡವಿಯ ಕೊಡವಿದರೆ’ ಎಂಬ ಬೀದಿ ನಾಟಕ ಪ್ರದರ್ಶನಗೊಂಡಿತು. ನಾಟಕದಲ್ಲಿ ಶ್ರೀಪಾದ ಭಾಗವತ್, ಪ್ರಸನ್ನ ಹುಣಸೆಕೊಪ್ಪ, ಕೃಷ್ಣಕುಮಾರ್ ಖಂಡಿಕ, ಗಣಪತಿ ಹೆಗಡೆ ನಂದಿತಳೆ, ಶ್ರೀಧರ ಭಾಗವತ, ಕುಮಾರ್ ಸಾರ ಅಭಿನಯಿಸಿದರು.
ಅರಣ್ಯ ಇಲಾಖೆಯ ಡಿಎಫ್‌ಓ ಯುವರಾಜ ಸೇರಿದಂತೆ ಸಿಬ್ಬಂದಿಗಳು, ಶಿಕ್ಷಕಿಯರಾದ ಮಂಗಳಾ, ಉಷಾ ಶಾಸ್ತ್ರೀ, ವಿದ್ಯಾರ್ಥಿಗಳು ಹಾಜರಿದ್ದರು.ವೃಕ್ಷರಕ್ಷಣೆಗೆ ಮುಂದಾಗಲು ಕರೆ
ಪ್ರಸಕ್ತ ಸಾಲಿನಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಕಳೆದುಕೊಂಡಿದ್ದೇವೆ. ಮಲೆನಾಡು ಭಾಗದಲ್ಲಿ ಸತತ ನಾಲ್ಕು ತಿಂಗಳು ಬಿಡದೇ ಸುರಿಯಬೇಕಿದ್ದ ಮಳೆ ಕೇವಲ ೧೪ ದಿನ ಮಾತ್ರ ಆಗಿದೆ. ತಾಲ್ಲೂಕಿನ ಅನೇಕ ಕಡೆ ಕೊಳವಿಬಾವಿ ಸೇರಿದಂತೆ ಕೆರೆಕಟ್ಟೆ, ಹಳ್ಳ ನದಿಗಳು ಈಗಾಗಲೇ ಬತ್ತಿಹೋಗಿವೆ. ಬಿಸಿಲ ಧಗೆ ಹೆಚ್ಚಾಗುತ್ತಿದ್ದು, ಕುಡಿಯುವ ನೀರಿಗೆ ತತ್ತರಗೊಳ್ಳುವ ದಿನಗಳು ದೂರವಿಲ್ಲ. ಈ ಹಿನ್ನೆಲೆಯನ್ನು ಗಮನಿಸಿಯಾದರೂ ವೃಕ್ಷರಕ್ಷಣೆಗೆ ಮುಂದಾಗಬೇಕು. ಸ್ವಾರ್ಥ ಲಾಲಸೆಯಿಂದ ದೂರವಾಗಿ ನಮ್ಮ ಸ್ವಾಸ್ಥ್ಯ ಬದುಕನ್ನು ನಾವೇ ಸೃಷ್ಟಿಸಿಕೊಳ್ಳಬೇಕು ಎಂ.ಆರ್.ಪಾಟೀಲ್ ಕಿವಿಮಾತು ಹೇಳಿದರು.