ತೋಳಹುಣಸೆ ರೈಲ್ವೇ ಮೇಲ್ಸೇತುವೆಗೆ ಗಿಡ-ಮರಗಳ ಕಾಟ!

KannadaprabhaNewsNetwork | Published : Jul 7, 2024 1:21 AM

ಸಾರಾಂಶ

ದಾವಣಗೆರೆ ತಾ. ತೋಳಹುಣಸೆ ಗ್ರಾಮದಲ್ಲಿ ರೈಲ್ವೇ ಮಾರ್ಗಕ್ಕೆ ಅಡ್ಡಲಾಗಿ ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ನಿರ್ಮಿಸಿರುವ ಸುಮಾರು ಒಂದು ಕಿ.ಮೀ.ಗೂ ಅದಿಕ ಉದ್ದನೆ ರೈಲ್ವೇ ಮೇಲ್ಸೇತುವೆ ಎರಡೂ ಬದಿ, ಸೇತುವೆ ಸಿಮೆಂಟ್ ಬ್ಲಾಕ್‌ಗಳಲ್ಲಿ ಬೆಳೆದಿರುವ ಗಿಡಗಳು ಮೇಲ್ಸೇತುವೆಗೆ ಅಪಾಯ ತಂದೊಡ್ಡುತ್ತಿವೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ತೋಳಹುಣಸೆ ಗ್ರಾಮದ ರೈಲ್ವೇ ಮಾರ್ಗವನ್ನು ಹಾದು ಹೋಗುವಂತೆ ನಿರ್ಮಿಸಿರುವ ರೈಲ್ವೇ ಮೇಲ್ಸೇತುವೆಯು ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯದಿಂದಾಗಿ, ನಿರ್ಮಾಣವಾದ ಏಳೆಂಟು ವರ್ಷಗಳಲ್ಲೇ ಹಾಳಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ತಾಲೂಕಿನ ತೋಳಹುಣಸೆ ಗ್ರಾಮವನ್ನು ಹಾದು ಹೋಗಿರುವ ರೈಲ್ವೇ ಮಾರ್ಗಕ್ಕೆ ಅಡ್ಡಲಾಗಿ ಸುಮಾರು ಒಂದು ಕಿ.ಮೀ.ಗೂ ಅಧಿಕ ಉದ್ದದ ಮೇಲ್ಸೇತುವೆ ನಿರ್ಮಿಸಿರುವ ಎರಡೂ ಬದಿಯಲ್ಲಿ ಗಿಡ-ಮರಗಳು ಬೆಳೆಯುತ್ತಿವೆ. ಸೇತುವೆ ಸಂದಿಗಳಿಂದಲೂ ಆಲ, ಅರಳಿ ಮರ, ನೇರಳೆ, ಮುಳ್ಳು ಗಿಡ ಗಂಟೆ ಬೆಳೆಯುತ್ತಿರುವುದು ಸಹಜವಾಗಿಯೇ ಮೇಲ್ಸೇತುವೆಗೆ ಧಕ್ಕೆ ತಂದೊಡ್ಡಿದೆ.

ಕೆಲವೇ ವರ್ಷಗಳ ಹಿಂದಷ್ಟೇ ತೋಳಹುಣಸೆ ಗ್ರಾಮವನ್ನು ಹಾದು ಹೋಗಿರುವ ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿ ನಿರ್ಮಾಣವಾಗಿತ್ತು. ಈಗ ಗ್ರಾಮಸ್ಥರು, ವಾಹನಗಳ ಸವಾರರು ಈ ಮಾರ್ಗದಲ್ಲಿ ಸಂಚರಿಸಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಮುಂಚೆ ತೋಳಹುಣಸೆ ಗ್ರಾಮದ ರೈಲ್ವೇ ಮಾರ್ಗಕ್ಕೆ ಅಡ್ಡಲಾಗಿ ಗೇಟ್ ಅಳವಡಿಸಲಾಗಿತ್ತು. ಗೇಟ್‌ಗೆ ಪರ್ಯಾಯವಾಗಿ ರೈಲ್ವೇ ಮೇಲ್ಸೇತುವೆ ನಿರ್ಮಿಸಲು ಹಿಂದಿನ ಸಂಸದ ಜಿ.ಎಂ.ಸಿದ್ದೇಶ್ವರ ಸಾಕಷ್ಟು ಪ್ರಯತ್ನಪಟ್ಟಿದ್ದರು.

ಆಗ ಕಡೆಗೂ ತೋಳಹುಣಸೆ ಗ್ರಾಮದಲ್ಲಿ ಪದೇಪದೇ ರೈಲ್ವೇ ಗೇಟ್ ಸಮಸ್ಯೆ ಬಗೆಹರಿಸಲು ಸುಮಾರು 1 ಕಿ.ಮೀ. ಅಧಿಕ ಉದ್ದನೆ ನಾಲ್ಕು ಪಥಗಳ ಮೇಲ್ಸೇತುವೆ ನಿರ್ಮಿಸಲಾಗಿತ್ತು. ಕಳೆದ ಕೆಲ ತಿಂಗಳಿನಿಂದ ಮೇಲ್ಸೇತುವೆ ಎರಡೂ ಬದಿಯಲ್ಲಿ ಪ್ರಾಣಿಪಕ್ಷಿಗಳು ಆಹಾರ ತಿಂದು ಮಲ ವಿಸರ್ಜಿಸಿದ್ದ ಸ್ಥಳದಲ್ಲಿ ಬೀಜಗಳು ಸಸಿ ರೂಪ ಪಡೆದು, ಈಗ ಆರೇಳು ಅಡಿ ಎತ್ತರದ ಗಿಡಗಳಾಗಿ ಬೆಳೆದು ನಿಂತಿವೆ. ಆಲದ ಮರ, ಅರಳಿ ಮರ, ನೇರಳೆ ಗಿಡ, ಬೇವಿನ ಗಿಡಗಳು, ಇತರೆ ಹೂವಿನ ಗಿಡಗಳು ಹಾಗೂ ಹುಲ್ಲು ಸೇರಿದಂತೆ ಅನೇಕ ಸಸ್ಯಗಳು ಫ್ಲೈಓವರ್‌ನ ಎರಡೂ ಬದಿಯಲ್ಲೂ ಬೆಳೆದಿರುವುದರಿಂದ ಮೇಲ್ಸೇತುವೆಗೆ ಧಕ್ಕೆಯುಂಟು ಮಾಡುವ ಅಪಾಯವಿದೆ.

ಮೇಲ್ಸೇತುವೆಯುದ್ದಕ್ಕೂ ಎರಡೂ ಬದಿ ಕೆಳಗೆ ಹಾದು ಹೋಗಿರುವ ಗೋಡೆ ಮಧ್ಯದಿಂದ ಮರಗಳು ಸಹ ಬೆಳೆಯುತ್ತಿವೆ. ಸಾಮಾನ್ಯವಾಗಿ ಬೆಳೆದ ಅರಳಿ ಮರ, ಆಲದ ಮರವನ್ನು ಕತ್ತರಿಸಲು ಅಥವಾ ತೆರವು ಮಾಡಲು ಜನರು ಹಿಂದೇಟು ಹಾಕುತ್ತಾರೆ. ಸಿಮೆಂಟ್‌ ಬ್ಲಾಕ್ ಗಳ ಸಂದಿಗಳಿಂದಲೂ ಗಿಡಗಳು ಟಿಸಿಲೊಡೆದು ಬೆಳೆಯುತ್ತಿದ್ದು, ಹತ್ತಾರು ಕೋಟಿ ವೆಚ್ಚದಲ್ಲಿ ನಿರ್ಮಿಸಿದ ರೈಲ್ವೇ ಮೇಲ್ಸೇತುವೆಗೆ ಧಕ್ಕೆ ತಂದೊಡ್ಡುವ ದಿನಗಳು ದೂರವಿಲ್ಲ ಎಂಬ ಆತಂಕ ಸಹಜವಾಗಿಯೇ ಸ್ಥಳೀಯರಲ್ಲಿ ಕಾಡುತ್ತಿದೆ.

ಕೆಲವು ತಿಂಗಳ ಹಿಂದೆ ಮೇಲ್ಸೇತುವೆಯಲ್ಲಿ ಬೆಳೆದಿದ್ದ ಗಿಡ ಗಂಟೆಗಳನ್ನು ಲೋಕೋಪಯೋಗಿ ಇಲಾಖೆ ತೆರವು ಮಾಡಿಸಿತ್ತು. ಆಗಲೇ ರೌಂಡ್ ಅಪ್‌ ಹಾಕಿ, ಗಿಡಗಳು ಬೆಳೆಯದಂತೆ ಮಾಡಲಾಗಿತ್ತು. ಆದರೆ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಒಣಗಿದ್ದ ಸ್ಥಳದಲ್ಲಿ ಹೊಸ ಮಣ್ಣು ಬಂದು, ಧೂಳಿನ ಕಣಗಳ ಆಸರೆಯಾಗಿ ಮತ್ತಷ್ಟು ಗಿಡ ಗಂಟೆಗಳು ಬೆಳೆಯುತ್ತಿವೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಕಾರ್ಯ ನಿರ್ವಾಹಕ ಅಭಿಯಂತರ ನರೇಂದ್ರ ಬಾಬು ಗಮನಕ್ಕೆ ಈ ವಿಚಾರ ತಂದ ಹಿನ್ನೆಲೆಯಲ್ಲಿ ಜು.7 ಶನಿವಾರದಂದು ಬೆಳಿಗ್ಗೆಯಿಂದಲೇ ಗಿಡ ಗಂಟೆ ತೆರವು ಮಾಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ರೌಂಡ್ ಅಪ್ ಸಿಂಪಡಿಸಲು ಕ್ರಮ ಕೈಗೊಳ್ಳುವುದಾಗಿ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ್ದಾರೆ.

Share this article