ಸುಬ್ರಮಣಿ ಕನ್ನಡಪ್ರಭ ವಾರ್ತೆ ಸಿದ್ದಾಪುರ
ಸಿದ್ದಾಪುರ ಭಾಗದಲ್ಲಿ ಕಾಡಾನೆಗಳ ಹಿಂಡು ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದು ಬೆಳೆಗಾರರು, ಕಾರ್ಮಿಕರು ಆತಂಕದಲ್ಲಿದ್ದಾರೆ. ಕಾಡಾನೆಗಳು ಬೆಳೆಗಳನ್ನು ನಾಶ ಪಡಿಸುತ್ತಿದ್ದು ಕಾಡಾನೆಗಳ ಉಪಟಳದಿಂದ ಬೆಳೆಗಾರರು ಕಂಗಾಲಾಗಿದ್ದಾರೆ.ಸಿದ್ದಾಪುರ ಭಾಗದ ಕರಡಿಗೋಡು, ಗುಹ್ಯ, ಇಂಜಿಲಗೆರೆ ಮಾಲ್ದಾರೆ ಮುಂತಾದ ಕಡೆಗಳಲ್ಲಿನ ಕಾಫಿ ತೋಟಗಳು ಕಾಡಾನೆಗಳ ಅವಾಸ ಸ್ಥಾನವಾಗಿದೆ. ಕಾಫಿ ತೋಟಗಳಲ್ಲಿ ಸಿಗುವ ಅಡಕೆ, ತೆಂಗು, ಬಾಳೆ, ಹಲಸಿನ ಹಣ್ಲು ತಿಂದು ಕಾಫಿ ತೋಟಗಳಲ್ಲಿರುವ ಕೆರೆ ಕೊಲ್ಲಿಗಳ ನೀರನ್ನು ಸ್ವಚ್ಛಂದವಾಗಿ ಸಂಚರಿಸುತ್ತಿವೆ. ಹಾಡ ಹಗಲಲ್ಲೇ ಕಾಫಿ ತೋಟಗಳಲ್ಲಿ ಕಾಡಾನೆಗಳು ಸಂಚರಿಸುವುದರಿಂದ ಕಾರ್ಮಿಕರು ತೋಟಗಳಲ್ಲಿ ಕೆಲಸ ಮಾಡಲು ಹಿಂಜರಿಯುತ್ತಿದ್ದು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ.
ಒಂದು ತೋಟದಿಂದ ಮತ್ತೊಂದು ತೋಟಕ್ಕೆ ನಿತ್ಯ ಕಾಡಾನೆಗಳು ಮರಿಯಾನೆಗಳೊಂದಿಗೆ ರಸ್ತೆ ಮೂಲಕ ದಾಟುವುದರಿಂದ ವಾಹನ ಸವಾರರು ವಿದ್ಯಾರ್ಥಿಗಳು ಸ್ಥಳೀಯರಲ್ಲಿನ ಆತಂಕ ಹೆಚ್ಚಿಸಿದೆ.ಕಾಡಿಗಟ್ಟುವ ಕಾರ್ಯಾಚರಣೆ: ಅರಣ್ಯ ಇಲಾಖೆ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸುತ್ತಿದ್ದರು. ಅದರಿಂದ ಯಾವುದೇ ಪ್ರಯೋಜನವಿಲ್ಲ. ಕಾಡಾನೆಗಳು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಹೋಗುತ್ತದೆ ಹೊರತು ಅರಣ್ಯಕ್ಕೆ ಹೋಗುತ್ತಿಲ್ಲ. ಹಾಗಾಗಿ ಕಾಡಿಗಟ್ಟುವ ಕಾರ್ಯಾಚರಣೆ ಕಾಟಚಾರಕ್ಕಷ್ಟೇ ಎಂದು ಸ್ಥಳೀಯರು ದೂರುತ್ತಿದ್ದಾರೆ.
ಕಾಡಾನೆ ಸೆರೆಗೆ ಒತ್ತಾಯ: ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ತೋಟಗಳಲ್ಲಿಯೆ ಮರಿಗಳಿಗೆ ಜನ್ಮ ನೀಡುತ್ತಿದೆ. ಹಾಗಾಗಿ ಕಾಡಾನೆ ಹಿಂಡು ಮರಿಯಾನೆಗಳೊಂದಿಗೆ ಸಂಚರಿಸುತ್ತಿರುವುದರಿಂದ ತಮ್ಮ ಮರಿಗಳ ರಕ್ಷಣೆಗಾಗಿ ಸಾರ್ವಜನಿಕರ ಮೇಲೆ ಹೆಚ್ಚಾಗಿ ದಾಳಿ ನಡೆಸುತ್ತಿದೆ. ಈ ಕಾಡಾನೆಗಳು ತೋಟದಾನೆಗಳಾಗಿ ಬದಲಾಗಿದೆ. ಕಾರ್ಮಿಕರ ಮತ್ತು ಬೆಳೆಗಾರರ ಮೇಲೆ ದಾಳಿ ನಡೆಸಿದ ಕಾಡಾನೆಗಳು ಅನೇಕರನ್ನು ಕೊಂದು ಹಾಕಿದ್ದು ಆನೆ ದಾಳಿಯಿಂದ ಅನೇಕರು ಗಾಯಗೊಂಡು ಇಂದಿಗೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ಜನರ ಮೇಲೆ ದಾಳಿ ನಡೆಸುವ ಕಾಡಾನೆಗಳನ್ನು ಸೆರೆ ಹಿಡಿಯಬೇಕು ಎಂದು ಬೆಳೆಗಾರರು ಕಾರ್ಮಿಕರು ಒತ್ತಾಯಿಸುತ್ತಿದ್ದಾರೆ.ಕೊಡಗು ಜಿಲ್ಲೆಯಲ್ಲಿ ಮಾನವ ಕಾಡುಪ್ರಾಣಿಗಳ ಸಂಘರ್ಷ ನಿರಂತರವಾಗಿ ನಡೆಯುತ್ತಿದ್ದು ಬಹುತೇಕ ಕಾರ್ಮಿಕರು ರೈತರು ಸಾವನ್ನಪ್ಪುತ್ತಿದ್ದಾರೆ. ಸರ್ಕಾರ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವುದರಲ್ಲಿ ವಿಫಲವಾಗಿದೆ. ಜಿಲ್ಲೆಯ ಜನರು ಭಯಭೀತರಾಗಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಹಾಗೆ ವಿದ್ಯಾರ್ಥಿಗಳು ದಿನನಿತ್ಯ ಪ್ರಾಣ ಭಯದಲ್ಲಿ ರಸ್ತೆಯಲ್ಲಿ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಕೂಡಲೇ ಆನೆ ಮಾನವ ಸಂಘರ್ಷವನ್ನು ಕೊನೆಗೊಳಿಸಲು ಮುಂದಾಗಬೇಕು ಎಂದು ಜಿಲ್ಲಾ ಕಾರ್ಯದರ್ಶಿ ಸಿಪಿಐಎಂ ಕಾರ್ಮಿಕ ಮುಖಂಡ ಎಚ್. ಬಿ. ರಮೇಶ್ ಹೇಳಿದರು.
ಈಗಾಗಲೇ ಸರ್ಕಾರದಿಂದ ಮೂರು ಆನೆಗಳನ್ನು ಸೆರೆ ಹಿಡಿಯಲು ಆನುಮತಿ ದೊರೆತಿದ್ದು ಮನುಷ್ಯರ ಮೇಲೆ ದಾಳಿ ನಡೆಸುವ ಒಂದು ಕಾಡಾನೆಯನ್ನು ಸೆರೆ ಹಿಡಿದು ಆನೆ ಶಿಬಿರಕ್ಕೆ ಸಾಗಿಸಲಾಗುವುದು. ಅದರಲ್ಲಿ ಎರಡು ಆನೆಗಳಿಗೆ ರೇಡಿಯೋ ಕಾಲರ್ ಹಾಕಿ ಇತರೆ ಆನೆಗಳ ಚಲನವಲನಗಳನ್ನು ಪತ್ತೆ ಹಚ್ಚಲು ಮತ್ತೆ ಅರಣ್ಯಕ್ಕೆ ಬಿಡಲಾಗುವುದು. ಈ ಮೂರು ಆನೆಗಳನ್ನು ಈಗಾಗಲೇ ಪತ್ತೆ ಹಚ್ಚಿದ್ದು ಆದಷ್ಟು ಬೇಗೆ ಸೆರೆ ಹಿಡಿಯುತ್ತೇವೆ ಎಂದು ತಿತಿಮತಿ ಆರ್‌ಎಫ್‌ಒ ಗಂಗಾಧರ್ ತಿಳಿಸಿದರು.ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಕಾಡಾನೆಗಳು ದಿಢೀರನೆ ದಾಳಿ ಮಾಡುತ್ತಿರುವುದರಿಂದ ನಮಗೆ ಕೆಲಸಕ್ಕೆ ಹೋಗಲು ಕಷ್ಟವಾಗುತ್ತಿದೆ. ನಮ್ಮ ಈ ಭಾಗದಲ್ಲಿ ಅನೇಕ ಸಲ ಆನೆ ನಮ್ಮನ್ನು ಓಡಿಸಿದೆ. ದೇವರ ದಯೆಯಿಂದ ಮಾತ್ರ ನಾವು ಬಚಾವಾಗಿರುವುದು. ಪೋರೆಸ್ಟನವರು ಕಾಡಾನೆಗಳನ್ನು ತೋಟದಿಂದ ಓಡಿಸಬೇಕು. ನಮಗೆ ಕೆಲಸ ಮಾಡಲು ಸಹಾಯ ಮಾಡಬೇಕು ಎಂದು ಕರಡಿಗೋಡು ತೋಟ ಕಾರ್ಮಿಕ ಮಣಿ ಹೇಳಿದರು.