ರೈತರ ಜಮೀನುಗಳಿಗೆ ಕಾಡಾನೆ ಉಪಟಳ

KannadaprabhaNewsNetwork | Published : Jul 4, 2024 1:04 AM

ಸಾರಾಂಶ

ಎಂ.ಜಿ ದೊಡ್ಡಿ ಸುತ್ತಮುತ್ತಲಿನ ರೈತರ ಜಮೀನುಗಳಿಗೆ ಕಾಡಾನೆ ಉಪಟಳವನ್ನು ತಡೆಗಟ್ಟುವಲ್ಲಿ ಅರಣ್ಯ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹನೂರು ಎಂ.ಜಿ ದೊಡ್ಡಿ ಸುತ್ತಮುತ್ತಲಿನ ರೈತರ ಜಮೀನುಗಳಿಗೆ ಕಾಡಾನೆ ಉಪಟಳವನ್ನು ತಡೆಗಟ್ಟುವಲ್ಲಿ ಅರಣ್ಯ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ಹನೂರು ತಾಲೂಕಿನ ಬೈಲೂರು ಗ್ರಾಪಂ ವ್ಯಾಪ್ತಿಗೆ ಬರುವ ಎಂ.ಟಿ ದೊಡ್ಡಿ ಗ್ರಾಮದ ಮಾದೇಶ್ ಹಾಗೂ ಶಂಕರ್ ಅವರ ಜಮೀನಿಗೆ ಬಿ.ಆರ್.ಟಿ ಅರಣ್ಯ ಪ್ರದೇಶದಿಂದ ಕಾಡಾನೆಯು ದಿನನಿತ್ಯ ಬಂದು ಬೆಳೆ ನಾಶಪಡಿಸಿ ಪರಿಕರಗಳನ್ನು ಹಾಳು ಮಾಡುತ್ತಿದೆ ಎಂದು ಗ್ರಾಮದ ರೈತರು ತಿಳಿಸಿದ್ದಾರೆ.

ಫಸಲು ನಾಶ: ಎಂ.ಟಿ ದೊಡ್ಡಿ ಗ್ರಾಮದ ಶಂಕರ್ ಹಾಗೂ ಮಾದೇಶ್ ರೈತರ ಜಮೀನಿನಲ್ಲಿ ಅರಿಶಿಣ ಬೆಳ್ಳುಳ್ಳಿ ಹಾಗೂ ಬೀನ್ಸ್ ಬೆಳೆಗಳನ್ನು ಲಕ್ಷಾಂತರ ರು. ಸಾಲ ಮಾಡಿ ಬೆಳೆಯನ್ನು ಹಾಕಲಾಗಿದೆ. ಇದನ್ನೇ ನಂಬಿ ಜೀವನ ನಡೆಸುತ್ತಿದ್ದ ನಮಗೆ ದಿನನಿತ್ಯ ಕಾಡಾನೆಗಳು ಜಮೀನಿಗೆ ಬಂದು ಫಸಲನ್ನು ಹಾಳು ಮಾಡುತ್ತಿದೆ. ಜೊತೆಗೆ ಜಮೀನಿನಲ್ಲಿ ನೀರಾವರಿ ಕೃಷಿ ಚಟುವಟಿಕೆಗೆ ಬಳಕೆ ಮಾಡಲಾಗಿರುವ ಪರಿಕರಗಳನ್ನು ಸಹ ಆನೆಗಳು ತುಳಿದು ನಾಶಗೊಳಿಸುತ್ತಿವೆ.

ಭಯದಲ್ಲೇ ವಾಸ: ಯಾವ ಗಳಿಗೆಯಲ್ಲಿ ಮನುಷ್ಯನ ಮೇಲೆ ದಾಳಿ ಮಾಡುತ್ತದೋ ಎಂಬ ಭಯದಲ್ಲೇ ಜಮೀನಿನ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಬೇಕಾಗಿದೆ. ಇದರಿಂದಾಗಿ ರೈತರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಗುಂಡಿ ಮೊಳಕೆ ಹೋಗುವ ರಸ್ತೆಯನ್ನು ಸಂಜೆ ಬಂದ್ ಮಾಡಿದರೆ ಕಾಡಾನೆಗಳು ರೈತರ ಜಮೀನಿಗೆ ಬರುವುದಿಲ್ಲ. ಸಂಬಂಧಪಟ್ಟ ವಲಯ ಅರಣ್ಯ ಅಧಿಕಾರಿ ಹಾಗೂ ಜಿಲ್ಲಾಡಳಿತ ಇತ್ತ ಗಮನ ಹರಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಸೂಕ್ತ ಪರಿಹಾರಕ್ಕೆ ಆಗ್ರಹ: ಅರಣ್ಯದಂಚಿನಲ್ಲಿ ಬರುವ ಗ್ರಾಮಗಳಲ್ಲಿ ಇತ್ತೀಚೆಗೆ ಕಾಡು ಪ್ರಾಣಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ರೈತರಿಗೆ ಆಗಿರುವ ಬೆಳೆ ನಷ್ಟದ ಅಂದಾಜು ಪಟ್ಟಿ ತಯಾರಿಸಿ ತುರ್ತಾಗಿ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.ಗುಂಡಿಮಾಳ ಗ್ರಾಮಕ್ಕೆ ತೆರಳುವ ಪಿಡಬ್ಲ್ಯೂಡಿ ರಸ್ತೆ ಇರುವುದರಿಂದ ಎರಡು ಕಡೆ ಅರಣ್ಯ ಪ್ರದೇಶ ಇದೆ. ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಅರಣ್ಯ ಇಲಾಖೆ ವತಿಯಿಂದ ಗೇಟ್ ಅನ್ನು ಸಹ ಅಳವಡಿಸಲಾಗಿದೆ. ಗ್ರಾಮಕ್ಕೆ ತೆರಳುವವರು ಗೇಟನ್ನು ತೆರೆದು ಹೋಗುವುದರಿಂದ ಕಾಡಾನೆಗಳು ರೈತರ ಜಮೀನಿಗೆ ಬರುತ್ತಿವೆ. ರಾತ್ರಿ ವೇಳೆ ಇಬ್ಬರು ಸಿಬ್ಬಂದಿಯನ್ನು ಕಾಡಾನೆಗಳ ಚಲನವಲನ ಗಮನಿಸಲು ನೇಮಕ ಮಾಡಲಾಗಿದೆ. ಗ್ರಾಮದ ಗೇಟ್ ಅನ್ನು ಸಂಜೆ 6ರಿಂದ ಬೆಳಗ್ಗೆ 6ರವರೆಗೆ ಬಂದ್ ಮಾಡಲು ಗ್ರಾಪಂ, ಡೀಸಿಯಿಂದ ನಮಗೆ ಅನುಮತಿ ದೊರೆತರೆ ಗುಂಡಿ ಮಾಳಕ್ಕೆ ತೆರುಳುವ ರಸ್ತೆಯನ್ನು ರಾತ್ರಿ ವೇಳೆ ಬಂದ್ ಮಾಡುತ್ತೇವೆ.

-ಪ್ರಮೋದ್, ವಲಯ ಅರಣ್ಯಾಧಿಕಾರಿ, ಬಿ.ಆರ್.ಟಿ

Share this article