ರಾಮನಗರ: ನಗರದ ಶ್ರೀ ಬನ್ನಿಮಹಾಂಕಾಳಿ ಅಮ್ಮನವರ ದೇಗುಲ ಮುಜರಾಯಿ ವ್ಯಾಪ್ತಿಯ ಸಿ ವರ್ಗಕ್ಕೆ ಬರಲಿದೆ. ಆದರೆ, ಕೆಲವರು ಖಾಸಗಿ ಟ್ರಸ್ಟ್ ಸ್ಥಾಪಿಸಿ ಸಾರ್ವಜನಿಕರಿಗೂ ಮಾಹಿತಿ ನೀಡದೆ ಕರಗದ ಹಬ್ಬ ಮಾಡುತ್ತಿದ್ದಾರೆ. ಹಾಗಾಗಿ ದೇವಾಲಯಕ್ಕೆ ಅಧಿಕೃತ ಸರ್ಕಾರದ ವ್ಯವಸ್ಥಾಪನಾ ಸಮಿತಿ ರಚನೆ ಮಾಡಬೇಕು ಎಂದು ಉಪವಿಭಾಗೀಯ ಮಟ್ಟ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಹರೀಶ್ ಎನ್. ಬಾಲು ಆಗ್ರಹಿಸಿದರು.
ಇಂತಹ ಘಟನೆಗಳಿಗೆ ಹಾಕುವ ಸಂಬಂಧ ಮುಜರಾಯಿ ಇಲಾಖೆ ಎ ಗ್ರೇಡ್ ದೇವಾಲಯಗಳಲ್ಲಿ ಜಾರಿ ಇರುವ ಮಾದರಿಯಲ್ಲಿ ಶ್ರೀ ಬನ್ನಿಮಹಾಂಕಾಳಿ ಅಮ್ಮನವರ ದೇಗುಲದಲ್ಲಿ ಸರ್ಕಾರದ ವತಿಯಿಂದಲೇ ವ್ಯವಸ್ಥಾಪನಾ ಸಮಿತಿ ರಚನೆ ಮಾಡಬೇಕು. ಈ ಸಮಿತಿ ವತಿಯಿಂದಲೇ ಪ್ರತಿ ವರ್ಷ ಹಬ್ಬವನ್ನು ಅದ್ಧೂರಿ ಆಚರಣೆ ಮಾಡಬೇಕು ಎಂದು ಆಗ್ರಹಿಸಿದರು.
ಕಳೆದ ಹಲವು ದಿನಗಳಿಂದ ದೇವಾಲಯದಲ್ಲಿ ನಡೆಯುತ್ತಿರುವ ಆಗುಹೋಗುಗಳು ಸಾಕಷ್ಟು ಸುದ್ದಿ ಮಾಡುತ್ತಿವೆ. ಅಮ್ಮನವರ ಕರಗ ಮಹೋತ್ಸವ ಶೀಘ್ರದಲ್ಲಿಯೇ ಆಗಮಿಸಲಿದೆ. ಭಕ್ತಾದಿಗಳು ಸಾರ್ವಜನಿಕರನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು ಎಂದು ಹೇಳಿದರು.ದೇವರು ಉದ್ಭವ ಆದಾಗಿನಿಂದಲೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯದವರ ಜತೆಗೆ ಎಲ್ಲ ಸಮುದಾಯದವರು ಇದಕ್ಕೆ ಕೈಜೋಡಿಸಿ ಪೂಜಿಸಿಕೊಂಡು ಬರುತ್ತಿದ್ದಾರೆ. ಅದರಲ್ಲೂ ಕೊಂಡ ಬಂಡಿ ಮಾಡುವುದು ದಲಿತ ಸಮುದಾಯದವರೆ ಆಗಿದ್ದಾರೆ. ಸೂಕ್ಷ್ಮ ವಿಷಯವಾಗಿರುವುದರಿಂದ ಹಬ್ಬವನ್ನು ಸರ್ಕಾರದ ವತಿಯಿಂದಲೇ ಆಯೋಜಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ರಾಮನಗರ ಉಪವಿಭಾಗಾಧಿಕಾರಿ ಬಿನೋಯ್, ಡಿವೈಎಸ್ಪಿ ದಿನಕರ್ ಶೆಟ್ಟಿ, ಬಿಇಒ ಸೋಮಲಿಂಗಯ್ಯ, ಡಿಎಸ್ ಪದ್ಮಾ, ರಾಮನಗರ ಇಒ ಪ್ರದೀಪ್, ಸಮಾಜದ ಕಲ್ಯಾಣ ಇಲಾಖೆ ಸಹಾಯಕ ನಿರ್ಧೇಶಕ ಡಾ. ಕುಮಾರ್, ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಶಾಂತ್ ಸೇರಿದಂತೆ ಹಲವು ಅಧಿಕಾರಿಗಳು ಇತರರಿದ್ದರು.
ರಾಮನಗರದ ತಾಲೂಕು ಕಚೇರಿ ಆವರಣದಲ್ಲಿ ಉಪವಿಭಾಗ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪಂಗಡದ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ಬರುವ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ನಡೆಯಿತು.