ಹೈಕೋರ್ಟ್ ಉಸ್ತುವಾರಿಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ವಿಶೇಷ ತನಿಖಾ ತಂಡ ರಚಿಸಿ

KannadaprabhaNewsNetwork | Updated : May 07 2024, 01:04 AM IST

ಸಾರಾಂಶ

ಪ್ರಜ್ವಲ್ ರೇವಣ್ಣ ಮೇಲೆ ನಿಷ್ಪಕ್ಷಪಾತ, ಪ್ರಾಮಾಣಿಕ ತನಿಖೆ ನಡೆಯುವ ಬಗ್ಗೆ ಅನುಮಾನ ಮೂಡಿದೆ. ಇದಕ್ಕೆ ಈ ಹಿಂದೆ ನಡೆದ ಪ್ರಕರಣಗಳೇ ಸಾಕ್ಷಿಯಾಗಿವೆ. ಅಕ್ರಮ ಲೈಂಗಿಕ ಹಗರಣದ ಬಗ್ಗೆ ಕಾರ್ಯಾಂಗ ವ್ಯವಸ್ಥೆಗೆ ಗೊತ್ತಿದ್ದರೂ ಕ್ರಮ ವಹಿಸದೆ ಪ್ರಕರಣ ತಿರುಚಿ ಸಂತ್ರಸ್ತರನ್ನು ಬಲಿ ಕೊಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಹಿಳೆಯರ ಮೇಲೆ ಸಂಸದ ಪ್ರಜ್ವಲ್ ರೇವಣ್ಣ ನಡೆಸಿರುವ ಲೈಂಗಿಕ ದೌರ್ಜನ್ಯ ಪ್ರಕರಣ ಕುರಿತು ಹೈಕೋರ್ಟ್ ಉಸ್ತುವಾರಿಯಲ್ಲಿ ವಿಶೇಷ ತನಿಖಾ ತಂಡ ರಚಿಸಿ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಬೆಂಗಳೂರು- ಮೈಸೂರು ಹೆದ್ದಾರಿ ಮೂಲಕ ಮೆರವಣಿಗೆ ಹೊರಟ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಕೆಲಕಾಲ ಧರಣಿ ನಡೆಸಿದರು.

ರಾಜ್ಯ ಸರ್ಕಾರ ಮಹಿಳೆಯರ ಮಾನ, ಪ್ರಾಣ ಸಂರಕ್ಷಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ರಾಜಕಾರಣಿಗಳ ಹೆಣ್ಣು ಬಾಕತನದಿಂದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚಾಗಿದೆ. ಅಧಿಕಾರ, ಹಣ ಬಲದಿಂದ ಕೆಟ್ಟ ಜನಪ್ರತಿನಿಧಿಗಳಿಗೆ ಕಾರ್ಯಾಂಗ, ಶಾಸಕಾಂಗ ಸಹಕಾರ ನೀಡುತ್ತಿದೆ ಎಂದು ದೂರಿದರು.

ಪ್ರಜ್ವಲ್ ರೇವಣ್ಣ ಮೇಲೆ ನಿಷ್ಪಕ್ಷಪಾತ, ಪ್ರಾಮಾಣಿಕ ತನಿಖೆ ನಡೆಯುವ ಬಗ್ಗೆ ಅನುಮಾನ ಮೂಡಿದೆ. ಇದಕ್ಕೆ ಈ ಹಿಂದೆ ನಡೆದ ಪ್ರಕರಣಗಳೇ ಸಾಕ್ಷಿಯಾಗಿವೆ. ಅಕ್ರಮ ಲೈಂಗಿಕ ಹಗರಣದ ಬಗ್ಗೆ ಕಾರ್ಯಾಂಗ ವ್ಯವಸ್ಥೆಗೆ ಗೊತ್ತಿದ್ದರೂ ಕ್ರಮ ವಹಿಸದೆ ಪ್ರಕರಣ ತಿರುಚಿ ಸಂತ್ರಸ್ತರನ್ನು ಬಲಿ ಕೊಡಲಾಗುತ್ತಿದೆ ಎಂದು ಆರೋಪಿಸಿದರು.

ಸಂಸದ ಪ್ರಜ್ವಲ್ ರೇವಣ್ಣ ಅಧಿಕಾರ ಮತ್ತು ಹಣ ಬಲದಿಂದ ನೊಂದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ. ಕಿಡಿಗೇಡಿಗಳು ಪೆನ್ ಡ್ರೈವ್ ಬಿಡುಗಡೆ ಮಾಡಿ ಮಹಿಳೆಯರ ಖಾಸಗಿ ಜೀವನ ಪ್ರದರ್ಶಿಸಿ ಮಾನಹಾನಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಗರಣ ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ಗುಪ್ತಚರ ವ್ಯವಸ್ಥೆ ವಿಫಲವಾಗಿದೆ. ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳದೆ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವೈಫಲ್ಯ ಅನುಭವಿಸಿದೆ. ಹಗರಣ ಬೆಳಕಿಗೆ ಬಂದ ನಂತರ ರಾಜಕೀಯ ತೇಜೋವಧೆ ಮಾಡಲಾಗುತ್ತಿದೆ ಹೊರತು ಸಂತ್ರಸ್ತ ಮಹಿಳೆಯರ ಮಾನ ಉಳಿಸಿ ನ್ಯಾಯ ದೊರಕಿಸುವ ಕೆಲಸ ಮಾಡುತ್ತಿಲ್ಲ ಎಂದು ಕಿಡಿಕಾರಿದರು.

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಸಂಸದ ಪ್ರಜ್ವಲ್ ರೇವಣ್ಣ ಸೇರಿದಂತೆ ಪೆನ್ ಡ್ರೈವ್ ಬಿಡುಗಡೆ ಮಾಡಿರುವ ಎಲ್ಲ ಆರೋಪಿಗಳನ್ನು ಬಂಧಿಸಬೇಕು. ಹೈಕೋರ್ಟ್ ಉಸ್ತುವಾರಿಯಲ್ಲಿ ತನಿಖೆ ನಡೆಸಲು ನಿರ್ದೇಶನ ನೀಡಬೇಕು. ಸಂತ್ರಸ್ತ ಮಹಿಳೆಯರ ಖಾಸಗಿ ಜೀವನದ ಗೌಪ್ಯತೆ ಕಾಪಾಡಲು ತನಿಖಾ ತಂಡಕ್ಕೆ ಸೂಚಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಮುಖಂಡರಾದ ಅನಿಲ್ ಕುಮಾರ್, ಕೆ.ಎಂ ಶ್ರೀನಿವಾಸ್, ಮರಂಕಯ್ಯ, ಎಸ್.ಕುಮಾರ್, ಭಾಗ್ಯಮ್ಮ, ಗೀತಾ ಮೇಲಕೋಟೆ, ಸುಕನ್ಯಾ ದುದ್ದ, ಸೋಮಶೇಖರ್, ಸುರೇಶ್ ಕುಮಾರ್ ಶೆಟ್ಟಳ್ಳಿ, ಬಿ.ಆನಂದ, ಚನ್ನಕೇಶವ ಸೇರಿದಂತೆ ಹಲವರು ಭಾಗವಹಿಸಿದ್ದರು.

Share this article