ಸಮಿತಿ ಸಭೆಯಲ್ಲಿ ಎಂ.ಎಸ್. ದಿವಾಕರ್ ಹೇಳಿಕೆ
ಕನ್ನಡಪ್ರಭ ವಾರ್ತೆ ಹೊಸಪೇಟೆಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಕೆಲಸ ಮಾಡುವ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ, ನಿಷೇಧಿಸುವಿಕೆ ಹಾಗೂ ನಿವಾರಿಸುವಿಕೆ ಕಾಯ್ದೆ-2013ರನ್ವಯ ಆಂತರಿಕ ದೂರು ಸಮಿತಿ ರಚನೆ ಕಡ್ಡಾಯವಾಗಿ ರಚಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಆಂತರಿಕ ದೂರು ಸಮಿತಿ ರಚನಾ ಸಭೆಯ ಅಧ್ಯಕ್ಷತೆ ವಹಿಸಿ ಬುಧವಾರ ಮಾತನಾಡಿದ ಅವರು, ಮಹಿಳೆಯರಿಗೆ ಲೈಂಗಿಕ ಕಿರುಕುಳದಿಂದ ಮುಕ್ತವಾದ ಸುರಕ್ಷಿತ ಕೆಲಸದ ಸ್ಥಳವನ್ನು ಸೃಷ್ಟಿಸುವ ಉದ್ದೇಶದಿಂದ ಭಾರತ ಸರ್ಕಾರ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ ಕಾಯ್ದೆ -2013 ಅನ್ನು ಜಾರಿಗೆ ತಂದಿದೆ. ಸಂಘಟಿತ, ಅಸಂಘಟಿತ, ಖಾಸಗಿ ಮತ್ತು ಸಾರ್ವಜನಿಕ ವಲಯದಲ್ಲಿ 10ಕ್ಕಿಂತ ಹೆಚ್ಚು ಮಹಿಳೆಯರು ಮತ್ತು ಪುರುಷರು ಕೆಲಸ ಮಾಡುತ್ತಿದ್ದರೆ, ಅಂತಹ ಸಂಸ್ಥೆಗಳಲ್ಲಿ, ಕಚೇರಿಗಳಲ್ಲಿ ಆಯಾ ಮುಖ್ಯಸ್ಥರು ಆಂತರಿಕ ದೂರು ಸಮಿತಿಯನ್ನು ರಚನೆ ಮಾಡಬೇಕು ಎಂದರು.ಸಮಿತಿಯಲ್ಲಿ ಉದ್ಯೋಗಸ್ಥ ಮಹಿಳೆಯನ್ನು ಅಧ್ಯಕ್ಷರನ್ನಾಗಿ ಮತ್ತು ಇಬ್ಬರು ಸದಸ್ಯರನ್ನೊಳಗೊಂಡ ಸಮಿತಿಯನ್ನು ಕಡ್ಡಾಯವಾಗಿ ರಚಿಸಬೇಕು. ಪ್ರತಿ ಮೂರು ವರ್ಷಗಳಿಗೊಮ್ಮೆ ಸಮಿತಿಯನ್ನು ಪುನರ್ ರಚನೆ ಮಾಡಬೇಕು. ಉದ್ಯೋಗದಾತರು ಅಥವಾ ಮಾಲೀಕರ ಕರ್ತವ್ಯಗಳು ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳವನ್ನು ನಿಷೇಧಿಸಲಾಗಿದೆ ಎಂಬ ಪ್ರಕಟಣೆ ಅಥವಾ ಸುತ್ತೋಲೆ ಹೊರಡಿಸಬೇಕು. ಆಂತರಿಕ ದೂರು ಸಮಿತಿ ಸದಸ್ಯರ ವಿಳಾಸ, ಸ್ಥಳ ಮತ್ತು ಸಮಯದ ಮಾಹಿತಿ ನೀಡಬೇಕು. ದೂರುದಾರರ ವಿಚಾರಣೆ ಸಂದರ್ಭ ಅಗತ್ಯ ಕ್ರಮವಹಿಸಬೇಕು. ತಪ್ಪಿದಲ್ಲಿ 50 ಸಾವಿರ ರು.ವರೆಗೆ ದಂಡ ವಿಧಿಸಲಾಗುವುದು ಮತ್ತು ಇಂತಹ ಕಾರ್ಯಗಳು ಪುನರಾವರ್ತನೆ ಆದಲ್ಲಿ ಪ್ರತಿ ಬಾರಿಯ ಕರ್ತವ್ಯ ಉಲ್ಲಂಘನೆಗಾಗಿ ದಂಡದ ಹಣದ ಎರಡರಷ್ಟು ಹಣವನ್ನು ದಂಡ ಕಟ್ಟಬೇಕಾಗುತ್ತದೆ ಎಂದರು.
2013ರ ಕಾಯ್ದೆ ಅನ್ವಯ ಮಹಿಳೆಯೂ ಸಂಘಟಿತ, ಅಸಂಘಟಿತ, ಖಾಸಗಿ ಮತ್ತು ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುತ್ತಿದ್ದರೂ, ಕೆಲಸದ ವೇಳೆಯಲ್ಲಿ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ದೂರು ನೋಂದಾಯಿಸಲು ಅನುಕೂಲವಾಗುವಂತೆ ಏಕಗವಾಕ್ಷಿ ಪ್ರವೇಶವನ್ನು ಒದಗಿಸಲು ಇದು ಸಹಾಯಕವಾಗಿದೆ. ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳವನ್ನು ಎದುರಿಸುತ್ತಿರುವ ಮಹಿಳೆಯರು ಇ- ಪೋರ್ಟಲ್ ಮೂಲಕ ತಮ್ಮ ದೂರನ್ನು ನೋಂದಾಯಿಸಿಕೊಳ್ಳಬಹುದು ‘ಶೀ ಬಾಕ್ಸ್’ ಗೆ ದೂರು ಸಲ್ಲಿಸಿದ ನಂತರ, ಅದನ್ನು ನೇರವಾಗಿ ಈ ವಿಷಯದ ಬಗ್ಗೆ ಕ್ರಮ ಕೈಗೊಳ್ಳಲು ನ್ಯಾಯ ವ್ಯಾಪ್ತಿಯನ್ನು ಹೊಂದಿರುವ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಕಳುಹಿಸಲಾಗುತ್ತದೆ ಎಂದರು.ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಪ್ರಭುಲಿಂಗ ತಳಕೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಲ್.ಆರ್. ಶಂಕರ ನಾಯ್ಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣನವರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುದೀಪ್ ಉಂಕಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕೆ.ರವಿಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.