ಶಿರಸಿ: ಕರ್ನಾಟಕ ಜಾನಪದ ಪರಿಷತ್ತು ತನ್ನ ಎಲ್ಲ ನಗರ ಕೇಂದ್ರಿತ ಜಾನಪದೀಯ ಚಟುವಟಿಕೆಯನ್ನು ಜಿಲ್ಲಾಮಟ್ಟಕ್ಕೆ ಕೊಂಡೊಯ್ಯುವ ಸಲುವಾಗಿ ಕರ್ನಾಟಕ ರಾಜ್ಯಾದ್ಯಂತ ಜಿಲ್ಲಾ ಸಮಿತಿಗಳನ್ನು ರಚಿಸಿದ್ದು, ಇತರ ಜಿಲ್ಲೆಗಳಂತೆ ಉತ್ತರ ಕನ್ನಡ ಜಿಲ್ಲೆಯಲ್ಲೂ ಜಿಲ್ಲಾ ಘಟಕ ರಚಿಸಲಿದೆ ಎಂದು ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಡಾ. ವೆಂಕಟೇಶ ನಾಯ್ಕ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನನ್ನು ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷರನ್ನಾಗಿ ಮಾಡಲಾಗಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಾಮನಗರದ ಬಳಿ ಸುಮಾರು ೧೫ ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ “ಜಾನಪದ ಲೋಕ”ವು ಕನ್ನಡ ನಾಡಿನಲ್ಲಷ್ಟೇ ಅಲ್ಲ ಭಾರತದಲ್ಲಿಯೇ ಅತ್ಯಂತ ಅಪರೂಪದ ವೈಶಿಷ್ಟ್ಯಗಳಿಂದ ಕೂಡಿದ ಬೃಹತ್ ಸಾಂಸ್ಕೃತಿಕ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಾಡಿನ ಗ್ರಾಮೀಣ ಮತ್ತು ಜನಪದ ಸಂಸ್ಕೃತಿಯನ್ನು ನಿರಂತರವಾಗಿ ಪೋಷಿಸಿಕೊಂಡು ಬರುತ್ತಿರುವ ರಾಜ್ಯದ ಏಕೈಕ ಸಂಸ್ಥೆ ಎಂಬ ಕೀರ್ತಿಗೆ ಪಾತ್ರವಾಗಿದೆ. ಕನ್ನಡ ನಾಡಿನ ಜನಪದ ಪರಂಪರೆಯ ಸಂವರ್ಧನೆ, ಪ್ರಸರಣ, ದಾಖಲಾತಿ ಮತ್ತು ಪ್ರಚಾರಗಳನ್ನು ಪ್ರಾಧಾನ ಆಶಯಗಳನ್ನಾಗಿರಿಸಿಕೊಂಡು ಜಾನಪದ ಕ್ಷೇತ್ರದಲ್ಲಿ ಅಮೂಲ್ಯವಾದ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದು ಪ್ರಸ್ತುತ ಪ್ರೊ. ಹಿ.ಶಿ. ರಾಮಚಂದ್ರೇಗೌಡ ರಾಜ್ಯಾಧ್ಯಕ್ಷರಾಗಿದ್ದು, ಹಂಪಿ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಹಿ.ಚಿ. ಬೋರಲಿಂಗಯ್ಯ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.ಸಾಹಿತಿಗಳು, ಜಾನಪದ ಕಲಾವಿದರು, ಜನಪದ ಹಾಗೂ ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಸಂಘ-ಸಂಸ್ಥೆಗಳು ಹಾಗೂ ಈ ಕ್ಷೇತ್ರದಲ್ಲಿ ಅಧ್ಯಯನ-ಸಂಶೋಧನೆ ಕೈಗೊಂಡಿರುವ ವ್ಯಕ್ತಿಗಳನ್ನು ಗುರುತಿಸಿ ಪ್ರತಿ ತಾಲೂಕಿನಲ್ಲೂ ತಾಲೂಕು ಸಮಿತಿ ರಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಜಿಲ್ಲಾ ಜಾನಪದ ವಸ್ತು ಸಂಗ್ರಹಾಲಯ ಸ್ಥಾಪನೆಗೆ ಪ್ರಯತ್ನಿಸಲಾಗುತ್ತದೆ. ಸರ್ಕಾರ, ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಜಾನಪದೀಯ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. “ಜಾನಪದ ಜಾತ್ರೆ” ಮಾದರಿಯಲ್ಲಿ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಜಾನಪದ ಜಾತ್ರೆಗಳನ್ನು ನಡೆಸುವ ಉದ್ದೇಶ ಹೊಂದಿದ್ದೇವೆ ಎಂದು ಹೇಳಿದರು.ತಾಲೂಕಿನಲ್ಲಿ ಇದುವರೆಗೆ ಸಂಗ್ರಹವಾಗದಿರುವ ಜಾನಪದ ಸಾಹಿತ್ಯ, ಕಥೆ, ಗೀತೆ, ನಾಟಕ ಇತ್ಯಾದಿ ಸಂಗ್ರಹಿಸುವ ಜತೆಗೆ ಜನಪದ ಕಲೆ ಮತ್ತು ಆಚರಣೆ ಮತ್ತಿತರ ಪದ್ಧತಿಗಳನ್ನು ಆಡಿಯೋ-ವಿಡಿಯೋ ಮೂಲಕ ದಾಖಲಿಸಲಾಗುತ್ತದೆ ಎಂದರು.ಆಸಕ್ತರು ಸ್ವವಿವರ ಕಳುಹಿಸಿ:
ಜಾನಪದ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಆಸಕ್ತಿ ಇರುವ ವ್ಯಕ್ತಿಗಳು ತಮ್ಮ ಸ್ವ-ವಿವರಗಳೊಂದಿಗೆ ಜಿಲ್ಲಾಧ್ಯಕ್ಷರು, ಕರ್ನಾಟಕ ಜಾನಪದ ಪರಿಷತ್, ಸವಿನಿಲಯ ಬಿಲ್ಡಿಂಗ್, ಮರಾಠಿಕೊಪ್ಪ ಮುಖ್ಯರಸ್ತೆ, ಶಿರಸಿ, ಉತ್ತರ ಕನ್ನಡ ಜಿಲ್ಲೆ ಇವರಿಗೆ ಅರ್ಜಿ ಸಲ್ಲಿಸಬಹುದು. ಅನುಭವ, ಆಸಕ್ತಿ, ಜವಾಬ್ದಾರಿ ವಹಿಸಿಕೊಳ್ಳುವ ಸಾಮರ್ಥ್ಯ ಹಾಗೂ ಸ್ಥಳೀಯ ಜನಾಭಿಪ್ರಾಯದಂತೆ ತಾಲೂಕು ಸಮಿತಿ ರಚಿಸಲಾಗುತ್ತದೆ ಎಂದು ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಡಾ. ವೆಂಕಟೇಶ ನಾಯ್ಕ ಹೇಳಿದರು.