ಬಳ್ಳಾರಿ: ನಗರದ ತಾಳೂರು ರಸ್ತೆಯ ಎಚ್‌ಎಲ್‌ಸಿ ಉಪ ಕಾಲುವೆಯ ಬಳಿಯಿದ್ದ ಗುಡಿಸಲುಗಳನ್ನು ತೆರವುಗೊಳಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ ಬಿ. ಶ್ರೀರಾಮುಲು, ನಿರಾಶ್ರಿತರಿಗೆ ತಾತ್ಕಾಲಿಕ ಟೆಂಟ್ ನಿರ್ಮಿಸಿ, ಒಂದು ತಿಂಗಳಿಗಾಗುವಷ್ಟು ಆಹಾರ ಧಾನ್ಯಗಳನ್ನು ವಿತರಣೆ ಮಾಡಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು, ಉಪ ಕಾಲುವೆ ಬಳಿಯ 10ಕ್ಕೂ ಹೆಚ್ಚು ಗುಡಿಸಲುಗಳನ್ನು ತೆರವುಗೊಳಿಸಲಾಗಿದೆ. ಸ್ಥಳೀಯ ನಾಯಕರ ಕುಮ್ಮಕ್ಕಿನಿಂದ ಕಳೆದ 40 ವರ್ಷಗಳಿಂದ ವಾಸವಾಗಿದ್ದ ಬಡಜನರ ಗುಡಿಸಲು ತೆರವುಗೊಳಿಸಿ, ಬೀದಿಗೆ ತರಲಾಗಿದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಬಳ್ಳಾರಿಯಲ್ಲಿ ಅದೆಷ್ಟೋ ಜನರು ಸರ್ಕಾರಿ ಜಮೀನು ಹಾಗೂ ಆಸ್ತಿಯನ್ನು ಕಬಳಿಸಿ ದೊಡ್ಡ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದಾರೆ. ಆದರೆ, ಶ್ರೀಮಂತರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ, ಬಡಜನರ ಗುಡಿಸಲುಗಳನ್ನು ತೆರವುಗೊಳಿಸಿರುವುದು ಎಷ್ಟರ ಮಟ್ಟಿಗೆ ನ್ಯಾಯ ಎಂದು ಪ್ರಶ್ನಿಸಿದರು.
ಇದೇ ವೇಳೆ ತಹಸೀಲ್ದಾರ್ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ಜತೆ ಮೊಬೈಲ್‌ನಲ್ಲಿ ಮಾತನಾಡಿದ ಶ್ರೀರಾಮುಲು, ರಾಜ್ಯದಲ್ಲಿ ಡೆಂಘೀ ತಾಂಡವವಾಡುತ್ತಿದೆ. ಮಳೆಗಾಲ ಶುರುವಾಗಿದೆ. ಹೀಗಿರುವಾಗ ಬಡಜನರ ಗುಡಿಸಲು ತೆರವುಗೊಳಿಸಿ ಅವರನ್ನು ಬೀದಿಗೆ ತಂದಿದ್ದೀರಿ. ನಿರಾಶ್ರಿತ 10 ಕುಟುಂಬಗಳಲ್ಲಿ ಪುಟ್ಟಪುಟ್ಟ ಮಕ್ಕಳಿದ್ದಾರೆ. ಒಂದು ವೇಳೆ ಮಕ್ಕಳಿಗೆ ಡೆಂಘೀಜ್ವರ ಬಂದರೆ ಹೊಣೆ ಯಾರು? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಬಿಜೆಪಿ ಹಿರಿಯ ಮುಖಂಡ ಎಸ್. ಗುರುಲಿಂಗನಗೌಡ, ಮಹಾನಗರ ಪಾಲಿಕೆ ಸದಸ್ಯರಾದ ಹನುಮಂತಪ್ಪ, ಗುಡಿಗಂಟಿ ಹನುಮಂತಪ್ಪ, ಗೋವಿಂದರಾಜು, ಸುಗುಣಾ, ನಾಗವೇಣಿ, ರೂಪಾ ಇತರರಿದ್ದರು.ನಗರದ ತಾಳೂರು ರಸ್ತೆಯ ಎಚ್‌ಎಲ್‌ಸಿ ಉಪ ಕಾಲುವೆ (ನಂ.6) ಬಳಿಯ ನೀರಾವರಿ ಇಲಾಖೆಗೆ ಸೇರಿದ ಜಾಗದಲ್ಲಿದ್ದ 10 ಗುಡಿಸಲುಗಳನ್ನು ತೆರವುಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯ ನಿರಾಶ್ರಿತರು ಶ್ರೀರಾಮುಲು ಅವರನ್ನು ಭೇಟಿ ಮಾಡಿ, ಅಳಲು ತೋಡಿಕೊಂಡಿದ್ದರು. ಭಾನುವಾರ ಸ್ಥಳಕ್ಕೆ ತೆರಳಿದ ಶ್ರೀರಾಮುಲು ನಿರಾಶ್ರಿತರಿಗೆ ತಾತ್ಕಾಲಿಕ ಟೆಂಟ್ ಹಾಗೂ ತಿಂಗಳಿಗಾಗುವಷ್ಟು ಆಹಾರ ಧಾನ್ಯಗಳನ್ನು ವಿತರಿಸಿದರು.