ಅಟಲ್‌ ರೀತಿ ರಾಜಕಾರಣದಲ್ಲಿ ಕೃಷ್ಣ ಅಜಾತಶತ್ರು

KannadaprabhaNewsNetwork | Published : Dec 11, 2024 12:48 AM

ಸಾರಾಂಶ

ಮಾಜಿ ಸಚಿವ ಸುಧಾಕರ್‌ ಎಸ್‌ ಎಂ ಕೃಷ್ಣ ಸಾವಿಗೆ ಸಂತಾಪ ಸೂಚಿಸಿದ್ದಾರೆ

- ಡಾ.ಕೆ.ಸುಧಾಕರ್, ಸಂಸದರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ

ರಾಷ್ಟ್ರ ಹಾಗೂ ರಾಜ್ಯ ರಾಜಕೀಯದ ದಿವ್ಯ ಜ್ಯೋತಿಯೊಂದು ನಮ್ಮನ್ನು ಅಗಲಿದೆ. ಈ ಜ್ಯೋತಿ ಬದುಕಿನುದ್ದಕ್ಕೂ ಅಭಿವೃದ್ಧಿಯ ಪ್ರಭೆಯನ್ನು ಎಲ್ಲೆಡೆ ಬೀರಿತ್ತು, ರಾಜಕಾರಣವನ್ನು ಹೇಗೆ ಮಾಡಬೇಕೆಂಬ ಮಾದರಿಯನ್ನು ಹುಟ್ಟುಹಾಕಿತ್ತು, ಜನಕೇಂದ್ರಿತವಾಗಿ ಚಿಂತಿಸುವ ವಿಧಾನದ ಪಾಠವನ್ನು ಹೇಳಿಕೊಟ್ಟಿತ್ತು. ಅಂತಹ ಜ್ಯೋತಿಯೇ ಎಸ್.ಎಂ.ಕೃಷ್ಣ. ಈಗ ಆ ಜ್ಯೋತಿ ಆರಿದೆ. ಆದರೆ ಅದರ ಬೆಳಕು ಇನ್ನೂ ಪ್ರಜ್ವಲಿಸುತ್ತಿದೆ. ಅದು ಎಂದಿಗೂ ಆರದ ಬೆಳಕು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ರಾಷ್ಟ್ರ ರಾಜಕಾರಣದಲ್ಲಿ ಅಜಾತಶತ್ರು ಎಂದು ಹೆಸರಾದಂತೆ ರಾಜ್ಯ ರಾಜಕಾರಣದಲ್ಲಿ ಎಸ್.ಎಂ.ಕೃಷ್ಣ ಅಜಾತಶತ್ರು ಎಂದು ಹೆಸರಾಗಿದ್ದರು. ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆಯೂ ಇಲ್ಲದ ಅವರು ಡಿಗ್ನಿಫೈಡ್ ಎನಿಸಿಕೊಂಡಿದ್ದರು. ಅವರ ಅಗಲಿಕೆಯ ಈ ಸಂದರ್ಭದಲ್ಲಿ ಅವರನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವುದೇ ಅವರಿಗೆ ನಾವು ಸಲ್ಲಿಸಬಹುದಾದ ಶ್ರದ್ಧಾಂಜಲಿ.

ನಮ್ಮದು ಗುರು-ಶಿಷ್ಯರ ಮೀರಿಸಿದ ಬಾಂಧವ್ಯ

ಎಸ್.ಎಂ.ಕೃಷ್ಣ ಹಾಗೂ ನನ್ನ ಸಂಬಂಧ ಗುರು-ಶಿಷ್ಯ ಬಾಂಧವ್ಯವನ್ನೂ ಮೀರಿದೆ. ನಾನು ರಾಜಕೀಯ ಬದುಕಿಗೆ ಕಾಲಿರಿಸುವ ಮೊದಲು ಅವರ ಪ್ರತಿ ಹೆಜ್ಜೆಗಳನ್ನು ಗಮನಿಸುತ್ತಿದ್ದೆ. ಅವರಂತೆ ಯಾರೂ ಬೆಳೆಯಲು, ಆಲೋಚಿಸಲು, ರಾಜ್ಯವನ್ನು ಮುನ್ನಡೆಸಲು ಸಾಧ್ಯವಿಲ್ಲ. ಆದರೆ ಅವರು ಹಾಕಿದ ಹೆಜ್ಜೆಯಲ್ಲಿ ನಾನು ದಾರಿ ಕಂಡುಕೊಳ್ಳಬೇಕು ಎಂಬ ಗುರಿ ನನ್ನದಾಯಿತು. ಅದರಂತೆಯೇ ಈವರೆಗಿನ ನನ್ನ ರಾಜಕೀಯ ಬದುಕಿನಲ್ಲಿ ಅವರಿಂದ ಅಪಾರ ಮಾರ್ಗದರ್ಶನ ಪಡೆದಿದ್ದೇನೆ.

ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದ ಕಡೆಗಿನ ನನ್ನ ಆಸಕ್ತಿಯನ್ನು ಗಮನಿಸಿದ್ದ ಕೃಷ್ಣ ಅವರು 2004ರಲ್ಲಿ ನನ್ನನ್ನು ಲೋಕಸಭೆಗೆ ಕಳುಹಿಸಬೇಕೆಂದುಕೊಂಡಿದ್ದರು. 2009ರಲ್ಲೂ ಆ ಪ್ರಯತ್ನ ಮಾಡಿದ್ದರು. ಅವರೆಡೂ ಕೈಗೂಡಲಿಲ್ಲ. ನಂತರ 2013ರಲ್ಲಿ ನನಗೆ ಟಿಕೆಟ್ ಕೊಡಿಸುವಲ್ಲಿ ಮಹತ್ತರ ಪಾತ್ರವಹಿಸಿ ಆಶೀರ್ವದಿಸಿ ವಿಧಾನಸಭೆಗೆ ಕಳುಹಿಸಿದರು. ಹಾಗೆಯೇ ಅವರು ವಿದೇಶಾಂಗ ಸಚಿವರಾಗಿದ್ದಾಗ ಶ್ರೀಲಂಕಾದ ರಾಯಭಾರಿಯಾಗುವ ಅವಕಾಶ ಮಾಡಿಕೊಟ್ಟಿದ್ದರು. ಇದೇ ವೇಳೆ ನಾನು ನವದೆಹಲಿಗೆ ಭೇಟಿ ನೀಡಿದ್ದಾಗ, ನನ್ನನ್ನು ಆತ್ಮೀಯತೆಯಿಂದ ಬರಮಾಡಿಕೊಂಡ ಎಸ್.ಎಂ.ಕೃಷ್ಣ, ಹೋಟೆಲ್‌ನಲ್ಲಿ ಭೋಜನ ಮಾಡಿಸಿ ಪ್ರೀತಿಯಿಂದ ನೋಡಿಕೊಂಡಿದ್ದರು. ಆ ಆತ್ಮೀಯತೆಯ ಕ್ಷಣಗಳು ಇಂದಿಗೂ ನನ್ನ ಕಣ್ಣ ಮುಂದಿವೆ.

2019ರಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ನಾನು ಸಚಿವನಾದ ಬಳಿಕ ದಿಢೀರನೆ ಕೋವಿಡ್ ಸವಾಲು ಎದುರಾಗಿತ್ತು. ಆಗ ನಾನು ಕೃಷ್ಣ ಅವರ ಬಳಿಗೆ ಹೋಗಿ ಮಾರ್ಗದರ್ಶನ ಪಡೆದಿದ್ದೆ. ಆಗ ನನ್ನಲ್ಲಿ ಅವರು ಹುಮ್ಮಸ್ಸು ತುಂಬಿ ಜನರ ಆರೋಗ್ಯಕ್ಕಾಗಿ ನಿರಂತರ ಶ್ರಮಿಸುವಂತೆ ಪ್ರೋತ್ಸಾಹಿಸಿದ್ದರು.

ಕಳೆದ ವರ್ಷ ಎಸ್.ಎಂ.ಕೃಷ್ಣ ಅವರ ಜೀವನಗಾಥೆ ‘ನೆಲದ ಸಿರಿ’ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ಈ ಕಾಯಕ್ರಮಕ್ಕೆ ಅತಿಥಿಯಾಗಿ ಯಾರನ್ನು ಕರೆಯಬೇಕೆಂದು ಆಯೋಜಕರು ಕೇಳಿದಾಗ, ಕೃಷ್ಣ ಅವರು ನನ್ನ ಹೆಸರನ್ನು ಸೂಚಿಸಿದ್ದರು. ಅದು ನಾನು ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಸಮಯ. ನನ್ನ ಬಳಿ ಯಾವ ಪದವಿ, ಅಧಿಕಾರವೂ ಇರಲಿಲ್ಲ. ಅಂತಹ ಸಮಯದಲ್ಲೂ ಕೃಷ್ಣ ಅವರ ಕಾರ್ಯಕ್ರಮದ ಅತಿಥಿಯಾಗಿ ನನ್ನನ್ನು ಆಹ್ವಾನಿಸಲು ಸೂಚಿಸಿದ್ದು ನಾನು ಜೀವನ ಪರ್ಯಂತ ಮರೆಯಲಾಗದ ಘಟನೆ. ವಯಸ್ಸಿನಲ್ಲಿ, ಅನುಭವದಲ್ಲಿ ಹಿರಿಯರಾದ ಅವರನ್ನು ನಾನು ಹೇಗೆ ಗೌರವಿಸುತ್ತೇನೋ, ಅದೇ ರೀತಿ ಅವರು ನನಗೆ ಗೌರವ ಕೊಡುತ್ತಿದ್ದದ್ದು ಅವರ ವ್ಯಕ್ತಿತ್ವದ ಘನತೆಗೆ ಉದಾಹರಣೆ.

ಎಸ್.ಎಂ.ಕೃಷ್ಣ ಅವರ ಮುತ್ಸದ್ಧಿತನವನ್ನು ಅವರ ಮಾತುಗಳಲ್ಲೇ ಕಾಣಬಹುದಿತ್ತು. ಅವರು ಬಳಸುತ್ತಿದ್ದ ಪದಗಳು, ವಿಧಾನಸಭೆಯಲ್ಲಿ ಆಡುತ್ತಿದ್ದ ಮಾತು ಕೇಳಲು ಎಷ್ಟು ಚಂದವೋ, ಅಷ್ಟೇ ನೇರ ನಿಷ್ಠುರವಾಗಿರುತ್ತಿತ್ತು. ಮಿತಭಾಷೆ, ಶಿಸ್ತು ಹಾಗೂ ಸಂಯಮವೇ ಎಸ್.ಎಂ.ಕೃಷ್ಣ ಅವರ ಆಭರಣ. ಅವರು ಯಾವುದೇ ಕಾರ್ಯಕ್ರಮವಾಗಲಿ, ವೇದಿಕೆಯಾಗಲಿ ಆ ಸಂದರ್ಭಕ್ಕೆ ತಕ್ಕಂತೆ ಅಚ್ಚುಕಟ್ಟಾಗಿ ಧರಿಸುತ್ತಿದ್ದ ಉಡುಪಿನಲ್ಲೂ ಅವರ ಶಿಸ್ತು ಎದ್ದು ಕಾಣುತ್ತಿತ್ತು.

ಗಾಂಧೀಜಿಯ ಆಶೀರ್ವಾದ

ಎಸ್.ಎಂ.ಕೃಷ್ಣ ಅವರಿಗೆ ಬಾಲ್ಯದಲ್ಲೇ ಮಹಾತ್ಮರ ಆಶೀರ್ವಾದ ಸಿಕ್ಕಿತ್ತು ಎಂಬುದು ಅಚ್ಚರಿಯ ಸಂಗತಿ. ಕೃಷ್ಣ ಅವರ ತಂದೆ ಎಸ್.ಸಿ.ಮಲ್ಲಯ್ಯ ಅವರು ಸಮಾಜ ಸುಧಾರಕರಾಗಿದ್ದರು. 1934ರಲ್ಲಿ ಮಹಾತ್ಮ ಗಾಂಧೀಜಿ ಅವರು ಮೈಸೂರು ರಾಜ್ಯಕ್ಕೆ ಬಂದಾಗ, ಮಲ್ಲಯ್ಯನವರ ಮನೆಗೆ ಭೇಟಿ ನೀಡಿದ್ದರು. ‘ಹರಿಜನ ಫಂಡ್ʼ ಎಂಬ ನಿಧಿ ನಡೆಸುತ್ತಿದ್ದ ಗಾಂಧೀಜಿಗೆ ಹಣ ಸಹಾಯ ಬೇಕಿತ್ತು. ಆಗ ಮಲ್ಲಯ್ಯನವರು ತಮ್ಮ ಪುತ್ರ, ಸಣ್ಣ ಬಾಲಕ ಎಸ್.ಎಂ.ಕೃಷ್ಣ ಕೈಯಿಂದ ₹2 ರುಪಾಯಿ ಕಾಣಿಕೆ ನೀಡಲು ಮುಂದಾದರು. ತಮಗೆ ಹಣ ಬೇಕಿಲ್ಲ, ಈ ಮಗುವಿನ ಕಿವಿಯ ಓಲೆ ಬೇಕೆಂದು ಗಾಂಧೀಜಿ ತಮಾಷೆಯಾಗಿ ಕೇಳಿದ್ದರು. ಆ ಮಾತನ್ನು ತಮಾಷೆಯಾಗಿ ಪರಿಗಣಿಸದ ಮಲ್ಲಯ್ಯನವರು, ಕೂಡಲೇ ಮಗನ ಕಿವಿಯಿಂದ ಓಲೆ ತೆಗೆದು ಗಾಂಧೀಜಿಗೆ ಕೈಗಿಟ್ಟರು. ಅದನ್ನು ನೋಡಿ ಗಾಂಧೀಜಿ, ಬಾಲಕ ಎಸ್.ಎಂ.ಕೃಷ್ಣ ಅವರನ್ನು ಪ್ರೀತಿಯಿಂದ ಹರಸಿದ್ದರು.

ಮುಖ್ಯಮಂತ್ರಿಯಾಗಿ ಭವ್ಯ ಆಡಳಿತ:

ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾದಾಗ ಅವರ ಮುಂದೆ ನೂರಾರು ಸವಾಲುಗಳಿದ್ದವು. ಅದರಲ್ಲೂ ಭೀಕರ ಬರಗಾಲ ಮತ್ತು ಕಾವೇರಿ ನದಿ ನೀರಿನ ಹಂಚಿಕೆ ವಿವಾದ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಇವರೇನಿದ್ದರೂ ರಾಷ್ಟ್ರ ರಾಜಕಾರಣಕ್ಕೆ ಸರಿ, ಇಂತಹ ಸ್ಥಳೀಯ ಸಮಸ್ಯೆ ನಿಭಾಯಿಸಲು ಇವರ ಕೈಯಿಂದ ಸಾಧ್ಯವಿಲ್ಲ ಎಂಬ ಟೀಕೆಗಳು ಆಗ ಕೇಳಿ ಬಂದಿತ್ತು. ಆದರೆ ಟೀಕಾಕಾರರು ಹುಬ್ಬೇರಿಸುವಂತೆ ಕೃಷ್ಣ ಅವರು ಒಂದೊಂದೇ ಸಮಸ್ಯೆಗಳನ್ನು ಯಶಸ್ವಿಯಾಗಿ ನಿಭಾಯಿಸಿದರು. ನಂತರ ನಟಸಾರ್ವಭೌಮ ಡಾ.ರಾಜ್‌ಕುಮಾರ್‌ ಅವರ ಅಪಹರಣ, ಸರ್ಕಾರಕ್ಕೆ ಮಿಂಚಿನ ಪ್ರಹಾರ ಮಾಡಿತ್ತು. ಪ್ರತಿದಿನ ಹರಿತವಾದ ಕತ್ತಿಯ ಅಲಗಿನಲ್ಲೇ ನಡೆಯಬೇಕಾದ ಪರಿಸ್ಥಿತಿ ಕೃಷ್ಣ ಅವರದಾಗಿತ್ತು. ಕೃಷ್ಣ ಅವರು ಎಲ್ಲ ಬಗೆಯ ಸಂಧಾನಗಳನ್ನು ನಡೆಸಿ ರಾಜ್‌ಕುಮಾರ್ ಅವರನ್ನು ಯಶಸ್ವಿಯಾಗಿ ಮರಳಿ ಕರೆತಂದರು.

ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರಿಗೆ ಆಧುನಿಕತೆಯ ಸ್ಪರ್ಶ ನೀಡಿದವರಲ್ಲಿ ಮೊದಲಿಗರೇ ಎಸ್.ಎಂ.ಕೃಷ್ಣ. ಬೆಂಗಳೂರಿನಲ್ಲಿ ಕೈಗಾರಿಕಾ ಸ್ಥಾಪನೆಯ ಅವಕಾಶಗಳನ್ನು ಸೃಷ್ಟಿಸಿ, ಐಟಿ-ಬಿಟಿ ಸಿಟಿ, ಸಿಲಿಕಾನ್ ವ್ಯಾಲಿ ಎಂಬ ಹೆಗ್ಗಳಿಕೆಯನ್ನು ತಂದ ಸಂಪೂರ್ಣ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ.

ಕೊನೆಯ ಭೇಟಿ

ಕಳೆದೊಂದು ವರ್ಷದಿಂದ ಎಸ್.ಎಂ.ಕೃಷ್ಣ ಅವರ ಆರೋಗ್ಯ ಹದಗೆಟ್ಟಿತ್ತು. ಆ ವೇಳೆ ತಮಿಳುನಾಡಿನ ಶ್ರೀರಂಗಂ ದೇವಸ್ಥಾನಕ್ಕೆ ಭೇಟಿ ನೀಡಿದ್ದ ನಾನು, ಅವರ ಆರೋಗ್ಯಕ್ಕಾಗಿ ವಿಶೇಷ ಪೂಜೆ ಸಲ್ಲಿಸಿದ್ದೆ. ಅವರು ಪವಾಡ ಎನ್ನುವಂತೆ ವೆಂಟಿಲೇಟರ್‌ನಿಂದ ಚೇತರಿಸಿಕೊಂಡು ಮನೆಗೆ ಬಂದಿದ್ದರು. ಇತ್ತೀಚೆಗೆ ಅವರನ್ನು ಭೇಟಿ ಮಾಡಲು ಹೋದಾಗ ಅವರು ಹಾಸಿಗೆ ಹಿಡಿದಿದ್ದರು. ಯಾರನ್ನೂ ಗುರುತು ಹಿಡಿಯಲಾಗದ ಪರಿಸ್ಥಿತಿಯಲ್ಲೂ ಕೂಡಲೇ ನನ್ನನ್ನು ಗುರುತು ಹಿಡಿದಿದ್ದು ಮನಸ್ಸಿಗೆ ತೃಪ್ತಿ ಕೊಟ್ಟಿತ್ತು. ಬಳಿಕ ಅಲ್ಲಿಂದ ಹೊರಡುವಾಗ ಕೈ ಎತ್ತಿ ತಮ್ಮದೇ ಶೈಲಿಯಲ್ಲಿ ಕೈಬೀಸಿ ಹಾರೈಕೆ ಮಾಡಿದರು. ಅದು ನನ್ನ-ಅವರ ಭೇಟಿಯ ಕೊನೆಯ ಗಳಿಗೆಯಾಗಲಿದೆ ಎಂಬುದು ಆ ಕ್ಷಣಕ್ಕೆ ಹೊಳೆಯಲೇ ಇಲ್ಲ. ಆ ಕ್ಷಣ ಎಂದೆಂದಿಗೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುತ್ತದೆ. ಅವರ ಬದುಕು, ಸಾಧನೆ ಹಾಗೂ ಒಡನಾಟದ ಕುರಿತು ಒಂದು ಅಂಕಣದಲ್ಲಿ ಹೇಳುವುದು ಕಷ್ಟಸಾಧ್ಯ. ಮುಂದೊಂದು ದಿನ ಅವರೊಂದಿಗೆ ನನ್ನ ಅನುಭವಗಳನ್ನು ಕುರಿತು ಪುಸ್ತಕವೊಂದನ್ನು ಬರೆಯುವ ಹಂಬಲ ನನ್ನಲ್ಲಿದೆ.

Share this article