ಉಪವಾಸ ಸತ್ಯಾಗ್ರಹಕ್ಕೆ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಬೆಂಬಲ

KannadaprabhaNewsNetwork | Published : Feb 29, 2024 2:02 AM

ಸಾರಾಂಶ

ಇಲ್ಲಿನ ಹಳೇ ಪುರಸಭೆ ಎದುರು ಮುಖ್ಯರಸ್ತೆ ಅಗಲೀಕರಣ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಬೆಂಬಲ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಬ್ಯಾಡಗಿ

ಇಲ್ಲಿನ ಹಳೇ ಪುರಸಭೆ ಎದುರು ಮುಖ್ಯರಸ್ತೆ ಅಗಲೀಕರಣ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಬೆಂಬಲ ಸೂಚಿಸಿದರು.

ಬಳಿಕ ಮಾತನಾಡಿದ ಅವರು, ಪಟ್ಟಣದ ಮುಖ್ಯರಸ್ತೆ ವಿಸ್ತರಣೆಗೊಳಿಸುವಲ್ಲಿ ಶಾಸಕನಾಗಿ ಕೊನೆಯ ಹಂತದವರೆಗೆ ಪ್ರಕ್ರಿಯೆ ಪೂರ್ಣಗೊಳಿಸಿ 3 ತಿಂಗಳಲ್ಲಿ ಎಲ್ಲವೂ ಮುಗಿಯುವ ಹಂತಕ್ಕೆ ಬಂದಿತ್ತು. ಅಷ್ಟರಲ್ಲೇ ಚುನಾವಣೆ ಘೋಷಣೆಯಾದ ಪರಿಣಾಮ ಪ್ರಕ್ರಿಯೆಗಳು ಸ್ಥಗಿತಗೊಂಡಿದ್ದವು. ಅಧಿಕಾರಿಗಳು, ಸ್ಥಳೀಯ ಶಾಸಕರು ರಸ್ತೆ ವಿಸ್ತರಣೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಆಗ್ರಹಿಸಿದರು.

ಬ್ಯಾಡಗಿ ಪಟ್ಟಣ ಮೆಣಸಿನಕಾಯಿ ವ್ಯಾಪಾರದಿಂದ ವಿಶ್ವ ಮಾರುಕಟ್ಟೆಯಲ್ಲಿ ಉತ್ತಮ ಸ್ಥಾನ ಪಡೆದಿದೆ. ನಾನು ಶಾಸಕನಾಗಿದ್ದ ಅವಧಿಯಲ್ಲಿ ಪಟ್ಟಣದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಮಂಜೂರು ಮಾಡಿದ್ದೇನೆ. ಬ್ಯಾಡಗಿಯಿಂದ ಸಂಪರ್ಕಕ್ಕೆ ಬರುವ ಕಾಕೋಳ, ಹಂಸಭಾವಿ, ಕದರಮಂಡಲಗಿ, ಮೋಟೆಬೆನ್ನೂರು ರಸ್ತೆ ನಿರ್ಮಿಸಲಾಗಿದೆ. ಆದರೆ ಪಟ್ಟಣದ ಮುಖ್ಯರಸ್ತೆ ಕೆಲ ಕಾರಣಗಳಿಂದ ವಿಳಂಬವಾಗಿದ್ದು, ಸ್ಥಳೀಯ ಶಾಸಕರು ಅಧಿವೇಶನದಲ್ಲಿ ಇದನ್ನು ಗೆಜೆಟ್ ನೋಟಿಫೀಕೇಷನ್ ಹೊರಡಿಸಿ ರಸ್ತೆ ಪೂರ್ಣಗೊಳಿಸಲಿ ಎಂದು ಒತ್ತಾಯಿಸಿದರು.

ನ್ಯಾಯವಾದಿ ನಿಂಗಪ್ಪ ಬಟ್ಟಲಕಟ್ಟೆ ಮಾತನಾಡಿ, ಲೋಕೋಪಯೋಗಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ರಸ್ತೆ ವಿಸ್ತರಣೆ ಕಾಮಗಾರಿ ವಿಳಂಬವಾಗಿದೆ. ರಸ್ತೆ ಕಾಮಗಾರಿ ನಡೆಸಲು ಯಾವುದೇ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇರುವುದಿಲ್ಲ. ಆದರೆ ನಿಯಮದಂತೆ ಅಗಲೀಕರಣ ನಡೆಯಬೇಕಿದೆ. ಉಪವಿಭಾಗಾಧಿಕಾರಿಗಳು ಈ ಕುರಿತು ಕೂಡಲೇ ಸ್ಥಳೀಯರಿಗೆ ನ್ಯಾಯ ಒದಗಿಸಬೇಕು. ಅಧಿಕಾರಿಗಳು ನೋಟಿಫಿಕೇಷನ್ ಜಾರಿಗೊಳಿಸುವವರೆಗೂ ಹೋರಾಟ ನಿಲ್ಲುವುದಿಲ್ಲ. ಪ್ರತಿದಿನ ಇನ್ನೊಂದು ಸಂಘಟನೆ ಕಾರ್ಯಕರ್ತರು ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ಹೋರಾಟ ತೀವ್ರತೆ ಪಡೆಯಲಿದೆ ಎಂದರು.

ಈ ವೇಳೆ ರಸ್ತೆ ಅಗಲೀಕರಣ ಸಮಿತಿ ಹೋರಾಟಗಾರರಾದ ಎಂ.ಎಲ್. ಕಿರಣಕುಮಾರ, ಪಾಂಡುರಂಗ ಸುತಾರ, ಹನುಮಂತ ಬೋವಿ, ರೈತ ಮುಖಂಡ ಗಂಗಣ್ಣ ಎಲಿ, ಕೆ.ವಿ. ದೊಡ್ಡಗೌಡರ, ಸುರೇಶ ಉದ್ಯೋಗಣ್ಣನವರ, ವಿನಯ ಹಿರೇಮಠ ಇದ್ದರು.

Share this article