ಮಾಜಿ ಪ್ರಧಾನಿ ದೇವೇಗೌಡರು ಹಿಂದುಳಿದ ವರ್ಗಗಳ ವಿರೋಧಿಯಲ್ಲ: ಅಪ್ಪಣ್ಣ

KannadaprabhaNewsNetwork | Updated : Apr 16 2024, 10:52 AM IST

ಸಾರಾಂಶ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಕೇವಲ ಒಕ್ಕಲಿಗರ ನಾಯಕನೆಂಬ ಹಣೆಪಟ್ಟಿ ಕಟ್ಟಲಾಗಿದೆ. ಆದರೆ, ಗೌಡರು ಹಾಲುಮತ, ಕುರುಬ ಸಮಾಜದ ಮಠ, ರಾಜೇನಹಳ್ಳಿಯ ವಾಲ್ಮೀಕಿ ಗುರುಪೀಠ, ಮಡಿವಾಳ ಸಮಾಜದ ಗುರುಪೀಠ ಸೇರಿದಂತೆ ಹಿಂದುಳಿದ ಜನಾಂಗದ ಮಠಗಳಿಗೆ ನಿವೇಶನ ನೀಡಿದ್ದಾರೆ.

 ಕೆ.ಆರ್.ಪೇಟೆ : ಮಾಜಿ ಪ್ರಧಾನಿ ದೇವೇಗೌಡರು ಹಿಂದುಳಿದ ವರ್ಗಗಳ ವಿರೋಧಿಯಲ್ಲ. ಅನೇಕ ಹಿಂದುಳಿದ ಜಾತಿಗಳ ಗುರುಪೀಠಗಳಿಗೆ ನಿವೇಶನ ನೀಡಿರುವುದು ವಾಸ್ತವ ಸತ್ಯವಾಗಿದೆ ಎಂದು ರಾಜ್ಯ ಅಹಿಂದ ನಾಯಕ ಹಾಗೂ ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಅಪ್ಪಣ್ಣ ಹೇಳಿದರು.

ಪಟ್ಟಣದ ಹೋಟೆಲ್ ರಾಮದಾಸ್ ಸಭಾಂಗಣದಲ್ಲಿ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಮತ್ತು ಅಹಿಂದ ನಾಯಕರೊಂದಿಗೆ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ ಎಲ್ಲಾ ಅಹಿಂದ ಮತದಾರರು ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಕೇವಲ ಒಕ್ಕಲಿಗರ ನಾಯಕನೆಂಬ ಹಣೆಪಟ್ಟಿ ಕಟ್ಟಲಾಗಿದೆ. ಆದರೆ, ಗೌಡರು ಹಾಲುಮತ, ಕುರುಬ ಸಮಾಜದ ಮಠ, ರಾಜೇನಹಳ್ಳಿಯ ವಾಲ್ಮೀಕಿ ಗುರುಪೀಠ, ಮಡಿವಾಳ ಸಮಾಜದ ಗುರುಪೀಠ ಸೇರಿದಂತೆ ಹಿಂದುಳಿದ ಜನಾಂಗದ ಮಠಗಳಿಗೆ ನಿವೇಶನ ನೀಡಿದ್ದಾರೆ ಎಂದರು.

ಪರಿಶಿಷ್ಟ ವರ್ಗ, ಹಿಂದುಳಿದ ಜಾತಿಗಳು ಸೇರಿದಂತೆ ಅಹಿಂದ ವರ್ಗಗಳ ಬಗ್ಗೆ ಅಪಾರವಾದ ಕಾಳಜಿ ಹೊಂದಿ ಸಚಿವ ಸಂಪುಟದಲ್ಲಿ ಸಿದ್ದರಾಮಯ್ಯ ಹಣಕಾಸು, ಮರಾಠ ಸಮಾಜ ಪಿಜಿಆರ್ ಸಿಂಧ್ಯ ಗೃಹ ಮಂತ್ರಿ, ಧರ್ಮಸಿಂಗ್ ಸಿಎಂ ಆಗಿದ್ದನ್ನು ಮರೆಯಬಾರದು ಎಂದು ತಿಳಿಸಿದರು.

ಮಡಿವಾಳ ಸಮಾಜಕ್ಕೆ ಸೇರಿದ ಲಕ್ಷ್ಮೀಸಾಗರ್ ಕಾನೂನು ಸಚಿವರಾಗಿದ್ದಾರೆ. ದೇವೇಗೌಡರು ಬೆಳಸದಿದ್ದರೆ ಸಿದ್ದರಾಮಯ್ಯ ಇಂದು ರಾಜ್ಯದ ಮುಖ್ಯಮಂತ್ರಿ ಆಗುತ್ತಿರಲಿಲ್ಲ. ದೇವೇಗೌಡರ ಬಗ್ಗೆ ಇಲ್ಲ ಸಲ್ಲದ ಸುಳ್ಳು ಆರೋಪ ಮಾಡುವುದನ್ನು ಕಾಂಗ್ರೆಸ್ ಮುಖಂಡರು ವಾಸ್ತವ ಅರಿತು ಮಾತನಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಕುಮಾರ್ ಮಾತನಾಡಿ, ತಾಲೂಕಿಗೆ ಕೋರಮಂಡಲ್ ಸಕ್ಕರೆ ಕಾರ್ಖನೆ ಬರಲು ಕಾರಣಕರ್ತರು ದೇವೇಗೌಡರು. ದೇವೇಗೌಡರ ಕುಟುಂಬದ ಋಣವನ್ನು ತೀರಿಸಲು ನಮಗೆ ಈಗ ಒಂದು ಅವಕಾಶ ಸಿಕ್ಕಿದೆ. ತಾಲೂಕಿನ ಎಲ್ಲಾ ಕಬ್ಬು ಬೆಳೆಗಾರ ರೈತರು ಮೈತ್ರಿ ಅಭ್ಯರ್ಥಿಎಚ್.ಡಿ.ಕುಮಾರಸ್ವಾಮಿ ಅವರಿಗೆ ಮತ ಹಾಕುವಂತೆ ಮನವಿ ಮಾಡಿದರು.

ಸುದ್ಧಿಗೋಷ್ಟಿಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಸಾರಂಗಿ ನಾಗಣ್ಣ, ಮಾಜಿ ಅಧ್ಯಕ್ಷ ಪರಮೇಶ್, ಪ್ರಧಾನ ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ನಾರಾಯಣನಾಯಕ, ಬಿಜೆಪಿ ಎಸ್ ಸಿ ಮೋರ್ಚಾ ಅಧ್ಯಕ್ಷ ಹಾದನೂರು ಮಂಜು, ಉಪಾಧ್ಯಕ್ಷ ರಾಜು, ಜಿಲ್ಲಾ ನೇಕಾರ ಪ್ರಕೋಷ್ಠ ಸಂಚಾಲಕ ಬಿಗ್ ಬಾಸ್ ಮೋಹನ್, ಮುಖಂಡರಾದ ಅಕ್ಕಿಹೆಬ್ಬಾಳು ಮಹೇಶ್ ನಾಯಕ, ವಾಸು, ತಮ್ಮಯ್ಯ ಸೇರಿದಂತೆ ಅಹಿಂದ ವರ್ಗಗಳ ನಾಯಕರು ಇದ್ದರು.

Share this article