ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಶುಕ್ರವಾರ ಸಂಜೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಅವರ ಪತ್ನಿ ಚೆನ್ನಮ್ಮ ಭೇಟಿ ನೀಡಿದರು. ಶನಿವಾರ ಆಶ್ಲೇಷ ನಕ್ಷತ್ರ ದಿನದ ಹಿನ್ನೆಲೆಯಲ್ಲಿ ಸಂಕಲ್ಪ ನೆರವೇರಿಸಿ ಆಶ್ಲೇಷ ಬಲಿ ಸೇವೆ ಸಲ್ಲಿಸಿದರು. ಬಳಿಕ ಮದ್ಯಾಹ್ನದ ಮಹಾಪೂಜೆ ಸೇವೆ ನೆರವೇರಿಸಿ ಪೂಜೆಯಲ್ಲಿ ಪಾಲ್ಗೊಂಡರು.
ಶುಕ್ರವಾರ ಸಂಜೆ ಆಗಮಿಸಿದ ಎಚ್.ಡಿ. ದೇವೇಗೌಡ ಮತ್ತು ಅವರ ಪತ್ನಿ ಚೆನ್ನಮ್ಮ ಆದಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರುಶನ ಪಡೆದು ಸೇವೆ ನೆರವೇರಿಸಿ ಮೃತ್ತಿಕಾ ಪ್ರಸಾದ ಸ್ವೀಕರಿಸಿದ್ದರು. ಶುಕ್ರವಾರ ಸಂಜೆ ಶ್ರೀ ದೇವರ ದರುಶನ ಮಾಡಿದ ಬಳಿಕ ಆದಿಶೇಷ ಗೆಸ್ಟ್ ಹೌಸ್‌ಗೆ ಆಗಮಿಸಿದ ಮಾಜಿ ಪ್ರಧಾನಿಗಳು ಸುಮಾರು ೧೦ ನಿಮಿಷಗಳ ಕಾಲ ಕಾರಲ್ಲಿ ಕುಳಿತು ಸುಬ್ರಹ್ಮಣ್ಯ ಶ್ಲೋಕ ಓದಿದರು. ಕ್ಷೇತ್ರಕ್ಕೆ ಬಂದ ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಪತ್ರಕರ್ತರು ಮಾತನಾಡಿಸಲು ತೆರಳಿದಾಗ ನಾನು ಕ್ಷೇತ್ರಕ್ಕೆ ದರ್ಶನ ಮಾಡಲು ಹಾಗೂ ಪೂಜೆಯನ್ನು ನೆರವೇರಿಸಲು ಬಂದಿದ್ದೇನೆ ಯಾವುದೇ ರೀತಿಯ ರಾಜಕೀಯ ವಿಷಯಗಳ ಬಗ್ಗೆ ನಾನು ಮಾತನಾಡಲ್ಲ ಎಂದು ಹೇಳಿದರು.ಕುಕ್ಕೆ: ಆಶ್ಲೇಷ ನಕ್ಷತ್ರ ದಿನ ಬಾರಿ ಭಕ್ತ ಜನ ಸಂದಣಿ: ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನಾ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರಣಿ ರಜಾ ಹಿನ್ನೆಲೆಯಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತರು ಕಂಡುಬಂದರು. ಅಲ್ಲದೆ ಶನಿವಾರ ಆಶ್ಲೇಷ ನಕ್ಷತ್ರ ವಿಶೇಷ ದಿನವಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬೇಟಿ ನೀಡಿ ಆಶ್ಲೇಷಾ ಬಲಿ ಸೇವೆ ನೆರವೇರಿಸಿ ದೇವರ ದರುಶನ ಪಡೆದರು.
ರಾಜ್ಯ, ಹೊರರಾಜ್ಯಗಳಿಂದ ಅಧಿಕ ಸಂಖ್ಯೆಯ ಭಕ್ತರು ಶುಕ್ರವಾರದಿಂದಲೇ ಭೇಟಿ ನೀಡಿ ಹೆಚ್ಚಿನ ಸಂಖ್ಯೆಯಲ್ಲಿ ಸೇವೆಗಳನ್ನು ನೆರವೇರಿಸಿದರು. ಆಶ್ಲೇಷ ಬಲಿ ಪೂಜಾ ರಶೀದಿಗಾಗಿ ಮುಂಜಾನೆ ೪ ಗಂಟೆಯಿಂದಲೇ ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತ ದೃಶ್ಯ ಕಂಡುಬಂತು. ಸರ್ಕಾರಿ ಬಸ್ ನಿಲ್ದಾಣದಿಂದಲೇ ರಶೀದಿಗಾಗಿ ರಥಬೀದಿಯ ಮೂಲಕ ಭಕ್ತರ ಮಾರುದ್ದ ಸರತಿ ಸಾಲು ಕಂಡುಬಂತು. ಹಾಗಾಗಿ ಕುಕ್ಕೆ ರಥಬೀದಿಯ ಉದ್ದಕ್ಕೂ ಭಾರಿ ಭಕ್ತರ ಸಂದಣಿ ಉಂಟಾಯಿತು. ಪ್ರವೇಶ ದ್ವಾರ, ದೇವಾಲಯದ ಹೊರಾಂಗಣ ಸೇರಿ ಕ್ಷೇತ್ರದ ಹಲವೆಡೆ ಭಕ್ತ ಜನ ಸಂದಣಿ ತುಂಬಿ ನೂಕು ನುಗ್ಗಲು ಕೂಡ ನಡೆಯಿತು. ಭಾನುವಾರ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ದರುಶನ, ಪೂಜೆ ನೆರವೇರಿಸುವ ನಿರೀಕ್ಷೆ ಇದೆ.