ಕನ್ನಡ ಪ್ರಭ ಜಿಲ್ಲಾ ವರದಿಗಾರ ಸುಭಾಶ್ಚಂದ್ರ ವಾಗ್ಳೆ ಅವರಿಗೆ ಸ್ಥಾಪನಾ ದಿನದ ಗೌರವ

KannadaprabhaNewsNetwork | Updated : Apr 11 2024, 12:17 PM IST

ಸಾರಾಂಶ

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಗಿರಿಜಾ ಗ್ರೂಪ್ ಆಫ್ ಕನ್ಸರ್ನ್ ಹಾಗೂ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ಸಂಘದ ಸ್ಥಾಪನಾ ದಿನಾಚರಣೆ ಶುಕ್ರವಾರ ಬೆಳಗ್ಗೆ 10.30ಕ್ಕೆ ಉಡುಪಿ ಪತ್ರಿಕಾ ಭವನದಲ್ಲಿ ನಡೆಯಲಿದೆ.  

 ಉಡುಪಿ:  ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಗಿರಿಜಾ ಗ್ರೂಪ್ ಆಫ್ ಕನ್ಸರ್ನ್ ಹಾಗೂ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ಸಂಘದ ಸ್ಥಾಪನಾ ದಿನಾಚರಣೆ ಶುಕ್ರವಾರ ಬೆಳಗ್ಗೆ 10.30ಕ್ಕೆ ಉಡುಪಿ ಪತ್ರಿಕಾ ಭವನದಲ್ಲಿ ನಡೆಯಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು 1997ರಲ್ಲಿ ಉಡುಪಿ ಪ್ರತ್ಯೇಕ ಜಿಲ್ಲೆಯಾಗಿ ರಚನೆಗೊಂಡ ಬಳಿಕ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವಾಗಿ ರೂಪುಗೊಂಡಿತು. ಇದರ ಉದ್ಘಾಟನೆಯು 1998ರ ಏ.12ರಂದು ಉಡುಪಿ ಎಂಜಿಎಂ ಕಾಲೇಜಿನ ಸಭಾಂಗಣದಲ್ಲಿ ನಡೆದಿತ್ತು. ಅದರಂತೆ ಈ ವರ್ಷವೂ ಕೂಡ ಸಂಘ ಸ್ಥಾಪನಾ ದಿನವನ್ನು ಆಚರಿಸಲು ಉದ್ದೇಶಿಸಲಾಗಿದೆ. ಮುಂದೆ ಪ್ರತಿವರ್ಷ ಕೂಡ ಈ ದಿನವನ್ನು ಸ್ಥಾಪನಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ ಎಂದರು.

ಸ್ಥಾಪನಾ ದಿನಾಚರಣೆಯನ್ನು ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್ ಶ್ಯಾನುಭಾಗ್ ಉದ್ಘಾಟಿಸಲಿರುವರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಹಿಸಲಿರುವರು. ಸಂಘದ ಸ್ಥಾಪಕ ಪ್ರಧಾನ ಕಾರ್ಯದರ್ಶಿ ಹಾಗೂ ಕುಂದಪ್ರಭಾ ವಾರಪತ್ರಿಕೆಯ ಸಂಪಾದಕ ಯು.ಎಸ್.ಶೆಣೈ ಸ್ಥಾಪನಾ ದಿನದ ಬಗ್ಗೆ ಮಾತನಾಡಲಿರುವರು.

ಸಂಘ ಸ್ಥಾಪನೆಯಿಂದ ಈವರೆಗೆ ಸೇವೆ ಸಲ್ಲಿಸಿರುವ ಸಂಘದ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳ ನಾಮಫಲಕದ ಅನಾವರಣವನ್ನು ಗಿರಿಜಾ ಗ್ರೂಪ್ ಆಫ್ ಕನ್ಸರ್ನ್ ಇದರ ಆಡಳಿತ ನಿರ್ದೇಶಕ ರವೀಂದ್ರ ಕೆ. ಶೆಟ್ಟಿ ಅನಾವರಣಗೊಳಿಸಲಿರುವರು. ಹಿರಿಯ ಪತ್ರಕರ್ತ ಸುಭಾಶ್ಚಂದ್ರ ವಾಗ್ಳೆ ಅವರಿಗೆ ಸ್ಥಾಪನಾ ದಿನದ ಗೌರವ ಸಲ್ಲಿಸಲಾಗುವುದು.

ಸಂಘದ ರಜತ ಮಹೋತ್ಸವ ಸಮಿತಿಯ ಸಂಚಾಲಕ ಮುಹಮ್ಮದ್ ಶರೀಫ್, ರಾಷ್ಟ್ರೀಯ ಸಮಿತಿ ಸದಸ್ಯ ಅರುಣ್ ಕುಮಾರ್ ಶಿರೂರು, ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು, ಪತ್ರಿಕಾ ಭವನ ಸಮಿತಿ ಸಂಚಾಲಕ ಅಜಿತ್ ಆರಾಡಿ, ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ಉಪಸ್ಥಿತಲಿರುವರು ಎಂದು ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪತ್ರಿಕಾ ಭವನ ಸಮಿತಿಯ ಸಹಸಂಚಾಲಕ ಅಂಕಿತ್ ಶೆಟ್ಟಿ, ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರಾದ ಮೈಕಲ್ ರೊಡ್ರಿಗಸ್, ಹರೀಶ್ ಕುಂದರ್ ಉಪಸ್ಥಿತರಿದ್ದರು

Share this article