ಕನ್ನಡಪ್ರಭ ವಾರ್ತೆ ಮಂಗಳೂರು
ಎರಡು ದಿನ, ನಾಲ್ಕು ಕಂದಾಯ ಜಿಲ್ಲೆಗಳಲ್ಲಿ ಸಂಚಾರ, 940 ಕಿ.ಮೀ.ಪ್ರಯಾಣ, 21 ವಿವಿಧ ಸ್ಥಳಗಳಲ್ಲಿ ಮತದಾರ ಜಾಗೃತಿಗಾಗಿ ಬೀದಿನಾಟಕ ಪ್ರದರ್ಶನ...ಹೌದು. ಈ ಸಾಧನೆ ಮಾಡಿರುವುದು ರೋಟರಿ ಜಿಲ್ಲೆ 3181ರ ಪಬ್ಲಿಕ್ ಇಮೇಜ್ ತಂಡ. ಮಾ.31 ಮತ್ತು ಏ.1ರಂದು ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಮತದಾರ ಜಾಗೃತಿಗಾಗಿ ಪಬ್ಲಿಕ್ ಇಮೇಜ್ ಚೇರ್ಮೆನ್ ರೊ. ವಿಶ್ವಾಸ್ ಶೆಣೈ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ರೋಟರಿ ಆನ್ ವ್ಹೀಲ್ಸ್ ಕಾರ್ಯಕ್ರಮ ಹೊಸ ದಾಖಲೆ ಬರೆದಿದೆ.
ಗಮನ ಸೆಳೆದ ಬೀದಿನಾಟಕ: ಮತದಾರರ ಜಾಗೃತಿ ಯಾತ್ರೆಯುದ್ದಕ್ಕೂ ರೋಟರಿ ಪುತ್ತೂರು ಎಲೈಟ್ ಸದಸ್ಯ ರೊ. ಮೌನೇಶ ವಿಶ್ವಕರ್ಮ ನೇತೃತ್ವದಲ್ಲಿ ಪ್ರದರ್ಶನಗೊಂಡ ಜಾಗೃತಿ ಬೀದಿನಾಟಕ ಎಲ್ಲರ ಗಮನಸೆಳೆಯಿತು. ತಂಡದಲ್ಲಿ ಬಾಲು ನಾಯ್ಕ್, ಪೃಥ್ವಿರಾಜ್, ರಾಕೇಶ್ ಆಚಾರ್ಯ, ಚಂದ್ರಮೌಳಿ ಹಾಗೂ ಹೇಮಂತ್ ಎಸ್. ಪಾಟೀಲ್ ಭಾಗವಹಿಸಿದ್ದರು.ಪುತ್ತೂರಿನಲ್ಲಿ ಚಾಲನೆ: ಪುತ್ತೂರು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜನೆಗೊಂಡ ಉದ್ಘಾಟನಾ ಕಾರ್ಯಕ್ರಮವನ್ನು ನಿಯೋಜಿತ ಜಿಲ್ಲಾ ಗವರ್ನರ್ ರೊ.ವಿಕ್ರಮದತ್ತ ಉದ್ಘಾಟಿಸಿದರು.
ತಾಲೂಕು ಸ್ವೀಪ್‌ಸಮಿತಿ ಅಧ್ಯಕ್ಷರಾದ, ಇಓ ಹನಮ ರೆಡ್ಡಿ ಚಾಲನೆ ನೀಡಿದರು. ಕಾಲೇಜು ಆವರಣದಲ್ಲಿ ಮೊದಲ ಪ್ರದರ್ಶನವೇ ಅತ್ಯುತ್ತಮವಾಗಿ ಮೂಡಿಬಂತು. ನಂತರ ಸುಳ್ಯ, ಬೆಳ್ಳಾರೆ, ಸುಬ್ರಹ್ಮಣ್ಯ, ಉಜಿರೆ, ಮೂಡುಬಿದಿರೆ, ಕಿನ್ನಿಗೋಳಿ, ಸುರತ್ಕಲ್, ಮಂಗಳೂರು, ಬಂಟ್ವಾಳ ಹಾಗೂ ಉಪ್ಪಿನಂಗಡಿಯಲ್ಲಿ ಮೊದಲ ದಿನದ ಕೊನೆಯ 11ನೇ ಪ್ರದರ್ಶನ ನಡೆಯಿತು. ನಿಗದಿ ಪಡಿಸಿದ್ದ ವೇಳಾಪಟ್ಟಿಯಂತೆಯೇ ಸಮಯಪಾಲನೆ ಮಾಡಿರುವುದು ತಂಡದ ವಿಶೇಷತೆ.ಎರಡನೇ ದಿನ 7 ಗಂಟೆಗೆ ಮಡಿಕೇರಿಯಲ್ಲಿ ಮೊದಲ ಪ್ರದರ್ಶನ ನೀಡಿತು. ಕೊಡಗು ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ ಮತದಾರರ ಜಾಗೃತಿ ಯಾತ್ರೆಗೆ ಚಾಲನೆ ನೀಡಿದರು. ಬಳಿಕ ಕುಶಾಲನಗರ, ಪಿರಿಯಾಪಟ್ಟಣ, ಹುಣಸೂರು, ನಂಜನಗೂಡು, ಮೈಸೂರು, ಚಾಮರಾಜನಗರ, ಯಳಂದೂರು, ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರದರ್ಶನ ನಡೆದು, ಕೊನೆಯ ಪ್ರದರ್ಶನವು ಮೈಸೂರು ಆರ್.ಟಿ. ನಗರದಲ್ಲಿ ಜಿಲ್ಲಾ ಗವರ್ನರ್ ಎಚ್.ಆರ್. ಕೇಶವ್ ಮತ್ತಿತರ ಪ್ರಮುಖರ ಉಪಸ್ಥಿತಿಯಲ್ಲಿ ನಡೆಯಿತು.ಜಾಗೃತಿ ಯಾತ್ರೆ: ರೋಟರಿ ಪಬ್ಲಿಕ್ ಇಮೇಜ್ ಅಂಗವಾಗಿ ಆಯೋಜಿಸಿದ್ದ ಈ ಜಾಗೃತಿ ಯಾತ್ರೆ ನಿರೀಕ್ಷೆಗೂ ಮೀರಿ ಪಬ್ಲಿಕ್ ಇಮೇಜ್ ಹೆಚ್ಚುವಲ್ಲಿ ಯಶಸ್ವಿಯಾಯಿತು. ಚಾಮರಾಜನಗರದ ಬೀದಿನಾಟಕ ಪ್ರದರ್ಶನದ ಬಗ್ಗೆ ತಿಳಿದ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ನಾಟಕ ತಂಡವನ್ನು ಡಿಸಿ ಕಚೇರಿ ಆವರಣಕ್ಕೆ ಕರೆಸಿ, ನಾಟಕವನ್ನು ಪೂರ್ತಿಯಾಗಿ ನೋಡಿ ಮೆಚ್ಚುಗೆಯ ಮಾತುಗಳನ್ನಾಡಿ, ಅಭಿನಂದಿಸಿದ್ದಾರೆ. ಜೊತೆಗೆ ರೋಟರಿ ಜಿಲ್ಲೆ3181ರ ನಾಲ್ಕು ಕಂದಾಯ ಜಿಲ್ಲೆಗಳಲ್ಲಿ ಸಂಚರಿಸುವ ಸಂದರ್ಭ ವಿವಿಧ ಜಿಲ್ಲಾಡಳಿತ, ತಾಲೂಕು ಆಡಳಿತದ ಮುಖ್ಯಸ್ಥರು, ಸ್ವೀಪ್ ಸಮಿತಿ ಪ್ರಮುಖರು, ವಿವಿಧ ಜಿಲ್ಲೆ, ತಾಲೂಕು ವ್ಯಾಪ್ತಿಯ ರೋಟರಿ ಕ್ಲಬ್‌ಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಜಾಗೃತಿ ಯಾತ್ರೆಯ ತಂಡವನ್ನು ಸ್ವಾಗತಿಸಿ ಆತಿಥ್ಯ ನೀಡುತ್ತಿದ್ದರು.
ರೋಟರಿ ಜಿಲ್ಲೆ 3181 ರ ಪಬ್ಲಿಕ್ ಇಮೇಜ್ ಕಾರ್ಯಕ್ರಮವಾಗಿ ಮತದಾರರ ಜಾಗೃತಿಗೆ ಹಮ್ಮಿಕೊಂಡ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ನಮ್ಮ ತಂಡ ಪ್ರದರ್ಶಿಸಿದ್ದ ಬೀದಿನಾಟಕಕ್ಕೆ ಎಲ್ಲೆಡೆ ಪ್ರಶಂಸೆ ದೊರೆತಿದೆ. ಈ ಯಶಸ್ಸು ನಾಲ್ಕು ಕಂದಾಯ ಜಿಲ್ಲೆಗಳ ಎಲ್ಲಾ ರೋಟರಿ ಕ್ಲಬ್ ಗಳಿಗೂ ಸಲ್ಲುತ್ತದೆ ಎನ್ನುತ್ತಾರೆ ಪಬ್ಲಿಕ್ ಇಮೇಜ್ ಚೇರ್‌ಮನ್, ರೋಟರಿ ಜಿಲ್ಲೆ 3181ರ ರೊ.ವಿಶ್ವಾಸ್ ಶೆಣೈ.ಈ ಜಾಥಾ ಹೊಸ ಅನುಭವ ತಂದುಕೊಟ್ಟಿದೆ, ಎರಡು ದಿನಗಳಲ್ಲಿ ಅಷ್ಟೊಂದು ದೂರ ಕ್ರಮಿಸುವುದು ಹೇಗೆ ಎಂಬ ಚಿಂತೆ ಇತ್ತು.ಆದರೆ ಪ್ರದರ್ಶನ, ಪ್ರಕ್ರಿಯೆಗಳು ನಿರೀಕ್ಷೆಗೂ ಮೀರಿ ಯಶಸ್ಸು ಕಾಣಲು ಸಾಧ್ಯವಾಗಿದೆ ಎಂದು ರೊ.ಮೌನೇಶ ವಿಶ್ವಕರ್ಮ ಹೇಳಿದರು.