ಅಪಘಾತದಲ್ಲಿ ನಾಲ್ವರ ಸಾವು, ಮುಗಿಲು ಮುಟ್ಟಿದ ಆಕ್ರಂದನ

KannadaprabhaNewsNetwork |  
Published : Aug 19, 2024, 12:56 AM IST
18ಎಚ್‌ವಿಆರ್‌4- | Kannada Prabha

ಸಾರಾಂಶ

ಗದಗ ಜಿಲ್ಲೆ ನರಗುಂದ ಸಮೀಪ ಕೊಣ್ಣೂಬರು ಬಳಿ ಭಾನುವಾರ ಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ನಾಲ್ವರ ಮೃತದೇಹಗಳನ್ನು ಹುಟ್ಟೂರು ಹಾವೇರಿಗೆ ತರುತ್ತಿದ್ದಂತೆ ಕುಟುಂಬದವರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಹಾವೇರಿ: ಗದಗ ಜಿಲ್ಲೆ ನರಗುಂದ ಸಮೀಪ ಕೊಣ್ಣೂಬರು ಬಳಿ ಭಾನುವಾರ ಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ನಾಲ್ವರ ಮೃತದೇಹಗಳನ್ನು ಹುಟ್ಟೂರು ಹಾವೇರಿಗೆ ತರುತ್ತಿದ್ದಂತೆ ಕುಟುಂಬದವರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಭಾನುವಾರ ಬೆಳಗ್ಗೆ ನರಗುಂದ ಬಳಿ ಕಾರು ಹಾಗೂ ಬಸ್‌ ನಡುವೆ ಡಿಕ್ಕಿ ಸಂಭವಿಸಿ ಹಾವೇರಿಯ ಇಜಾರಿಲಕ್ಮಾಪುರ ಮಾರುತಿ ನಗರದ ನಿವಾಸಿಗಳಾದ ರುದ್ರಪ್ಪ (ಮಂಜುನಾಥ) ಅಂಗಡಿ (55), ಪತ್ನಿ ರಾಜೇಶ್ವರಿ ಅಂಗಡಿ (45), ಮಗಳು ಐಶ್ವರ್ಯಾ (19) ಹಾಗೂ ಮಗ ವಿಜಯ (12) ಮೃತಪಟ್ಟಿದ್ದಾರೆ. ಘಟನೆ ಬಳಿಕ ನರಗುಂದ ಆಸ್ಪತ್ರೆಯಲ್ಲಿ ಪೋಸ್ಟ್‌ ಮಾರ್ಟಂ ಮಾಡಿ ನೇರವಾಗಿ ಹಾವೇರಿಯ ನಿವಾಸಕ್ಕೆ ಮೃತದೇಹಗಳನ್ನು ತರಲಾಯಿತು. ಪ್ರಾರ್ಥಿವ ಶರೀರಗಳನ್ನು ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು. ಈ ವೇಳೆ ಕುಟುಂಬದವರು, ಸಂಬಂಧಿಕರು, ಅಕ್ಕಪಕ್ಕದ ನಿವಾಸಿಗಳು ಕಣ್ಣೀರಿಟ್ಟರು.

ದೇವಸ್ಥಾನಕ್ಕೆ ಹೊರಟವರು: ಹಾವೇರಿಯಲ್ಲಿ ವಿದ್ಯುತ್‌ ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದ ರುದ್ರಪ್ಪ ಅಂಗಡಿ ಅವರ ಕುಟುಂಬ ಭಾನುವಾರ ನಸುಕಿನಲ್ಲೇ ಎದ್ದು ಕಲ್ಲಾಪುರದ ಬಸವೇಶ್ವರ ದೇವಸ್ಥಾನಕ್ಕೆ ಕಾರಿನಲ್ಲಿ ಹೊರಟಿದ್ದರು. ಶ್ರಾವಣ ಮಾಸವಾದ್ದರಿಂದ ಸೋಮವಾರ ಪೂಜೆ ಸಲ್ಲಿಸಲೆಂದು ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಹೊರಟಿದ್ದರು. ಆದರೆ, ವಿಧಿ ಅವರನ್ನು ಶಾಶ್ವತವಾಗಿ ದೇವರಿದ್ದಲ್ಲಿಗೆ ಕರೆದುಕೊಂಡು ಹೋಯಿತು ಎಂದು ಕುಟುಂಬದವರು ಕಣ್ಣೀರಿಡುತ್ತಿದ್ದ ದೃಶ್ಯ ಎಲ್ಲರನ್ನೂ ಶೋಕದಲ್ಲಿ ಮುಳುಗಿಸಿತ್ತು.

ಮನೆಯಲ್ಲಿ ವೃದ್ಧ ತಂದೆ, ತಾಯಿ ಇಬ್ಬರೂ ಮಗನ ಕುಟುಂಬದ ಬರುವಿಕೆಗಾಗಿಯೇ ಕಾಯುತ್ತಿದ್ದರು. ಆದರೆ, ನಾಲ್ವರ ಮೃತದೇಹ ನೋಡಿ ವೃದ್ಧ ತಂದೆ ಎದೆ ಬಡಿದುಕೊಂಡು ಅಳುತ್ತಿದ್ದದ್ದನ್ನು ನೋಡಿ ಅನೇಕರು ಕಣ್ಣೀರಾದರು. ದೇವಸ್ಥಾನಕ್ಕೆ ಅಂತ ಹೋಗಿದ್ದೆ, ಶಿವನ ಪೂಜೆಗೆ ಹೋಗಿದ್ದವ ಶಿವನ ಪಾದ ಸೇರಿಬಿಟ್ಯಲ್ಲೋ. ಮಗನೇ,,, ಬಾರೋ... ಎಂದು ತಂದೆ ಬಿಕ್ಕಿಬಿಕ್ಕಿ ಅಳುತ್ತಿದ್ದರೆ ಅವರನ್ನು ಸಂತೈಸಲು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ. ಒಂದೇ ಕುಟುಂಬದ ನಾಲ್ವರ ದುರ್ಮರಣ ಹಾವೇರಿ ಜನರನ್ನು ಶೋಕದಲ್ಲಿ ಮುಳುಗುವಂತೆ ಮಾಡಿತು.

ಸಚಿವರ ಸಂತಾಪ: ನರಗುಂದ ತಾಲೂಕು ಕೊಣ್ಣೂರು ಸಮೀಪ ಸಂಭವಿಸಿದ ಅಪಘಾತದಲ್ಲಿ ಹಾವೇರಿಯ ರುದ್ರಪ್ಪ ಅಂಗಡಿ ಕುಟುಂಬದ ನಾಲ್ವರು ದುರ್ಮರಣ ಹೊಂದಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.ಈ ದುರ್ಘಟನೆ ತೀವ್ರ ನೋವನ್ನುಂಟು ಮಾಡಿದ್ದು ಭಗವಂತ ಮೃತರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಬಂಧುಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ