ಲೋಕೋಪಯೋಗಿ ಇಲಾಖೆ ಉದ್ಯೋಗದ ಹೆಸರಿನಲ್ಲಿ ವಂಚನೆ: ಆರೋಪಿ ವಿರುದ್ಧ ದೂರು

KannadaprabhaNewsNetwork |  
Published : Jul 25, 2024, 01:15 AM IST
ಫೋಟೊ ಶೀರ್ಷಿಕೆ: 24ಆರ್‌ಎನ್‌ಆರ್1ಲೋಕೋಪಯೋಗಿ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ವಂಚನೆ ಮಾಡಿದ ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಂಚನೆಗೆ ಒಳಗಾದವರು ರಾಣಿಬೆನ್ನೂರು ಶಹರ ಪೊಲೀಸ್ ಠಾಣೆ ಪಿಎಸ್‌ಐ ಗಡ್ಡೆಪ್ಪ ಗುಂಜುಟಗಿ ಅವರಿಗೆ ದೂರು ನೀಡಿದರು. ಫೋಟೊ ಶೀರ್ಷಿಕೆ: 24ಆರ್‌ಎನ್‌ಆರ್1ಎಉದ್ಯೋಗ ಕೊಡಿಸುವ ನೆಪದಲ್ಲಿ ವಂಚನೆ ಮಾಡಿದ ಆರೋಪಿ ರೋಹಿತ ಗುತ್ತಲ | Kannada Prabha

ಸಾರಾಂಶ

ಲೋಕೋಪಯೋಗಿ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರು. ವಂಚನೆ ಮಾಡಿದ ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ವಂಚನೆಗೆ ಒಳಗಾದವರು ಬುಧವಾರ ರಾಣಿಬೆನ್ನೂರಲ್ಲಿ ಪೊಲೀಸರಿಗೆ ದೂರು ನೀಡಿದರು.

ರಾಣಿಬೆನ್ನೂರು: ಲೋಕೋಪಯೋಗಿ ಇಲಾಖೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರು. ವಂಚನೆ ಮಾಡಿದ ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ವಂಚನೆಗೆ ಒಳಗಾದವರು ಬುಧವಾರ ಶಹರ ಪಿಎಸ್‌ಐ ಗಡ್ಡೆಪ್ಪ ಗುಂಜುಟಗಿ ಅವರಿಗೆ ದೂರು ನೀಡಿದರು.

ನೊಂದ ವ್ಯಕ್ತಿಗಳ ಪರವಾಗಿ ತಾಲೂಕಿನ ಹುಲ್ಲತ್ತಿ ವಂದೇಮಾತರಂ ಯುವಕ ಸ್ವಯಂ ಸೇವಾ ಸಮಿತಿ ಅಧ್ಯಕ್ಷ ಜಗದೀಶ ಕೆರೂಡಿ ಮಾತನಾಡಿ, ನಗರದ ರೋಹಿತ ಯಶ್ವಂತ ಗುತ್ತಲ (31) ಎನ್ನುವ ವ್ಯಕ್ತಿಯು 2021ರಿಂದ 17 ಪದವೀಧರ ಯುವಕರಿಗೆ ಲೋಕೋಪಯೋಗಿ ಇಲಾಖೆಯಲ್ಲಿ ವಿವಿಧ ದರ್ಜೆಯ ಹುದ್ದೆಗಳನ್ನು ಕೊಡಿಸುವುದಾಗಿ ನಂಬಿಸಿ ಅವರಿಂದ ತಲಾ ₹3ರಿಂದ 5 ಲಕ್ಷದಂತೆ ಸುಮಾರು ₹68 ಲಕ್ಷಗಳನ್ನು ಬ್ಯಾಂಕ್ ಖಾತೆಯ ಮೂಲಕ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಹಣ ನೀಡಿದವರಿಗೆ ನಂಬಿಕೆ ಮೂಡಿಸುವ ಸಲುವಾಗಿ ತನ್ನ ಖಾಲಿ ಚೆಕ್ಕುಗಳನ್ನು ಕೂಡ ನೀಡಿದ್ದಾನೆ. ಹಣ ನೀಡಿ ವರ್ಷಗಳು ಕಳೆದರೂ ನೇಮಕಾತಿ ಆದೇಶ ಬಾರದ ಕಾರಣ ಹಣ ನೀಡಿದ ಉದ್ಯೋಗಾಂಕ್ಷಿಗಳು ಆರೋಪಿಗೆ ಕರೆ ಮಾಡಿ ಕೇಳಿದಾಗ ಕೆಲವೇ ದಿನಗಳಲ್ಲಿ ಆದೇಶ ಪತ್ರ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ ಎಂದು ಉತ್ತರಿಸಿದ್ದಾನೆ.

ಕೆಲವು ದಿನಗಳ ನಂತರ ಪುನಃ ವಿಚಾರಿಸಿದಾಗ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈಗ ಸರ್ಕಾರದ ಯಾವುದೇ ಉದ್ಯೋಗಗಳು, ವ್ಯವಹಾರ, ವಹಿವಾಟುಗಳು ನಡೆಸಲು ಸಾಧ್ಯವಾಗುವುದಿಲ್ಲ. ನಾನು ಈಗಾಗಲೇ ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಜತೆಗೆ ಮಾತನಾಡಿದ್ದೇನೆ. ನಿಮ್ಮ ಫೈಲ್ ಅವರ ಹಂತದಲ್ಲಿಯೇ ಇದೆ ಎಂದು ಸುಳ್ಳು ಭರವಸೆ ನೀಡುತ್ತಾ ಉದ್ಯೋಗಾಂಕ್ಷಿಗಳನ್ನು ದಾರಿ ತಪ್ಪಿಸಿದ್ದಾನೆ. ಕೊನೆಗೆ ಹಣ ನೀಡಿದವರಿಂದ ಒತ್ತಡ ಹೆಚ್ಚಾದಾಗ ಲೋಕೋಪಯೋಗಿ ಇಲಾಖೆಯ ಲೇಟರ್ ಪ್ಯಾಡಿನಲ್ಲಿ ಇಲಾಖೆ ಕಾರ್ಯರ್ಶಿಗಳ ಸಹಿ ಸೀಲು ಹೊಂದಿರುವ ನಕಲಿ ನೇಮಕಾತಿ (ದಾವಣಗೆರೆ ಲೋಕೋಪಯೋಗಿ ಕಚೇರಿ) ಆದೇಶ ಪತ್ರ ಕಳುಹಿಸಿದ್ದಾನೆ. ಇದನ್ನು ತೆಗೆದುಕೊಂಡು ಕೆಲಸಕ್ಕೆ ಹಾಜರಾಗಲು ಹೋದಾಗಲೇ ತಾವು ಮೋಸ ಹೋಗಿರುವುದು ತಿಳಿದಿದೆ. ಇದನ್ನು ಆರೋಪಿ ಗಮನಕ್ಕೆ ತಂದಾಗ ಕೆಲಸಕ್ಕೆ ಹಾಜರು ಮಾಡಿಕೊಳ್ಳದ ಅಧಿಕಾರಿಗಳಿಗೆ ಸಚಿವರು ಮತ್ತು ಹಿರಿಯ ಅಧಿಕಾರಿಗಳಿಂದ ತಕ್ಕ ಶಾಸ್ತಿ ಮಾಡಿಸುತ್ತೇನೆ. ನಿಮ್ಮ ಫೈಲ್ ವಾಪಸ್ ತರಿಸಿಕೊಳ್ಳುವ ವರೆಗೂ ಬಿಡುವುದಿಲ್ಲ ಎಂದು ವಂಚಿತರಿಗೆ ಭರವಸೆ ನೀಡಿದ್ದಾನೆ. ನಾವು ಬಡ್ಡಿ ರೂಪದಲ್ಲಿ ಹಣ ತಂದು ನಿಮಗೆ ನೀಡಿದ್ದು ನಮ್ಮ ಹಣ ನಮಗೆ ವಾಪಸ್ ಕೊಡುವಂತೆ ದುಂಬಾಲು ಬಿದ್ದಾಗ ನೀವು ಕೊಟ್ಟ ಹಣವನ್ನು ಮಂತ್ರಿಗಳಿಗೆ ಮತ್ತು ಐಎಎಸ್ ಅಧಿಕಾರಿಗಳಿಗೆ ಕೊಟ್ಟು ನಿಮ್ಮ ಕೆಲಸ ಮಾಡಿಸಿದ್ದೇನೆ. ಆ ಹಣವನ್ನು ವಾಪಸ್ ಕೊಡಲು ಬರುವುದಿಲ್ಲ ಎಂದಿದ್ದಾನೆ.

ಆದ್ದರಿಂದ ಆರೋಪಿಯನ್ನು ಆದಷ್ಟು ಶೀಘ್ರ ಬಂಧಿಸಿ ಆತನ ಮೇಲೆ ಕಠಿಣ ಕ್ರಮ ಜರುಗಿಸಬೇಕು ಹಾಗೂ ವಂಚನೆಗೊಳಾದ ಉದ್ಯೋಗಾಂಕ್ಷಿಗಳಿಗೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಉಗ್ರ ಹೋರಾಟ ನಡೆಸುದಾಗಿ ಎಚ್ಚರಿಸಿದರು.

ಕರಬಸಪ್ಪ, ಬಸವರಾಜ, ಸಿದ್ಧೇಶ, ಗುರುರಾಜ, ರವಿ, ಮಂಜುನಾಥ, ಕೀರ್ತಿ, ರಮೇಶ, ಲಕ್ಷ್ಮಿ, ಗುರು ಮಹಾದೇವಪ್ಪ, ಜಗದೀಶ ಮತ್ತಿತರರಿದ್ದರು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ