ಕನ್ನಡಪ್ರಭ ವಾರ್ತೆ ಬೆಂಗಳೂರು
ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್ ಬೇಡಿಕೆ ಈಡೇರಿಕೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸನ್ಮಾನಿಸಲಾಯಿತು.
ಬಳಿಕ ಮಾತನಾಡಿದ ಅವರು, ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ದೊರಕಿದೆ. ಇವರ ಬೇಡಿಕೆ ಮತ್ತು ಹೋರಾಟವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಾಗ ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಬಜೆಟ್‌ನಲ್ಲಿ ಬೇಡಿಕೆ ಈಡೇರಿಸಿದ್ದಾರೆ ಎಂದರು.
ಹೆಚ್ಚಿನ ಪತ್ರಕರ್ತರು ಕಷ್ಟದ ಕುಟುಂಬದ ಹಿನ್ನೆಲೆಯಿಂದ ಬಂದಿರುತ್ತಾರೆ. ಸರ್ಕಾರ ಈ ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸಬೇಕಾಗುತ್ತದೆ. ಪತ್ರಕರ್ತರ ಪಿಂಚಣಿ ಮತ್ತು ನಿವೇಶನ ಸೇರಿ ಪತ್ರಕರ್ತರಿಗೆ ಇಲಾಖೆಯಿಂದ, ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳಿಗೆ ಅಡ್ಡಿಯಾದ ಎಲ್ಲಾ ತಾಂತ್ರಿಕ ಅಡೆತಡೆಗಳನ್ನು ನಿವಾರಿಸಲು ಸತತ ಪ್ರಯತ್ನ ಮತ್ತು ಸಭೆ ನಡೆಸುತ್ತಿದ್ದೇವೆ. ಹಂತ ಹಂತವಾಗಿ ಎಲ್ಲವನ್ನೂ ಪರಿಹರಿಸಲಾಗುವುದು ಎಂದು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು ಮಾತನಾಡಿ, 29 ವರ್ಷದ ಹಿಂದೆ ಚಿಕ್ಕಮಗಳೂರಿನಲ್ಲಿ ರಾಜ್ಯ ಸಮ್ಮೇಳನವಾದ ಸಂದರ್ಭದಿಂದ ಬಸ್ ಪಾಸ್ ಬೇಡಿಕೆ ಇತ್ತು. ಆ ಬೇಡಿಕೆಯನ್ನು ಈಡೇರಿಸಿದ ಸಿದ್ದರಾಮಯ್ಯ ಮತ್ತು ಕೆ.ವಿ.ಪ್ರಭಾಕರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.
ದಾವಣಗೆರೆಯಲ್ಲಿ ನಡೆದ 38ನೇ ರಾಜ್ಯ ಸಮ್ಮೇಳನದಲ್ಲಿ ಕೆಯುಡಬ್ಲ್ಯೂಜೆ ಹಕ್ಕೊತ್ತಾಯಕ್ಕೆ ಸ್ಪಂದಿಸಿದ್ದ ಮುಖ್ಯಮಂತ್ರಿಗಳು ಬಸ್ ಪಾಸ್ ಬೇಡಿಕೆ ಈಡೇರಿಸುವುದಾಗಿ ಹೇಳಿ, ಹಾಗೆ ನುಡಿದಂತೆಯೇ ನಡೆದುಕೊಂಡಿದ್ದಾರೆ ಎಂದು ಹೇಳಿದರು.
ಸಮಾರಂಭದಲ್ಲಿ ಪದಾಧಿಕಾರಿಗಳಾದ ಜಿ.ಸಿ.ಲೋಕೇಶ್, ಪುಂಡಲೀಕ ಬಾಳೋಜಿ, ಭವಾನಿಸಿಂಗ್ ಠಾಕೂರ್, ಮತ್ತಿಕೆರೆ ಜಯರಾಂ ಹಾಗೂ ವಾಸುದೇವ ಹೊಳ್ಳ ಇದ್ದರು.