ತೆಂಗಿನ ಕೀಟ ಬಾಧೆಗೆ ಪರೋಪ ಜೀವಿಗಳು ಉಚಿತ ವಿತರಣೆ

KannadaprabhaNewsNetwork | Published : Dec 18, 2024 12:45 AM

ಸಾರಾಂಶ

ತೋಟಗಾರಿಕೆ ಬೆಳೆಗಳ ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣ ಯೋಜನೆಯಡಿ, ಸಸ್ಯ ಸಂರಕ್ಷಣಾ ಔಷಧಿಗಳ ಖರೀದಿಗಾಗಿ ಪ್ರತಿ ಹೆಕ್ಟೇರ್‌ಗೆ ತಗಲುವ ಘಟಕ ವೆಚ್ಚದ ಶೇ. 75 ರಂತೆ ಸಾಮಾನ್ಯ ವರ್ಗದ ರೈತರಿಗೆ ತಲಾ 7,500 ರು.ಗಳನ್ನು, ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ತಲಾ 9000 ರು.ಗಳ ಸಹಾಯಧನ ನೀಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಸುವರ್ಣ ವಿಧಾನಪರಿಷತ್‌

ತೆಂಗಿನ ಬೆಳೆಗೆ ಬಾಧಿಸುವ ಕಪ್ಪು ತಲೆ ಹುಳುಗಳ ನಿಯಂತ್ರಣಕ್ಕೆ ಗೋನಿಯೋಜಸ್‌ ಪರೋಪ ಜೀವಿಗಳನ್ನು ಉತ್ಪಾದಿಸಿ ರೈತರಿಗೆ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ ಎಂದು ತೋಟಗಾರಿಕೆ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ತಿಳಿಸಿದ್ದಾರೆ.

ಕಾಂಗ್ರೆಸ್‌ ಸದಸ್ಯ ದಿನೇಶ ಗೂಳಿಗೌಡ ಅವರ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಇಲಾಖೆಯ 23 ಪ್ರಯೋಗಾಲಯಗಳಲ್ಲಿ ಗೋನಿಯೋಜಸ್‌ ಪರೋಪ ಜೀವಿಗಳನ್ನು ಉತ್ಪಾದನೆ ಮಾಡಲಾಗುತ್ತಿದೆ ಈ ಸಾಲಿಗೆ 1.40 ಕೋಟಿ ರು. ಅನುದಾನ ಬಿಡುಗಡೆಯಾಗಿದ್ದು, ಈವರೆಗೂ 85 ಲಕ್ಷ ರು.ಗಳನ್ನು ವಿನಿಯೋಗಿಸಲಾಗಿದೆ. 205.81 ಲಕ್ಷ ಪರೋಪ ಜೀವಿಗಳನ್ನು ಉತ್ಪಾದಿಸಿ 1,260 ಹೆಕ್ಟೇರ್‌ ಪ್ರದೇಶದಲ್ಲಿ ಬಳಕೆ ಮಾಡಲಾಗುತ್ತಿದೆ. ಅಲ್ಲದೇ ಗೋನಿಯೋಜಸ್‌ ಪರೋಪ ಜೀವಿಗಳನ್ನು ಉತ್ಪಾದಿಸಿ, ಉಚಿತವಾಗಿ ವಿತರಿಸಲು 50 ಲಕ್ಷ ರು. ಅನುದಾನ ನೀಡುವಂತೆ ಕೋರಿ ತೆಂಗು ಅಭಿವೃದ್ಧಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿವರಿಸಿದರು.

ಸಹಾಯಧನ ವಿತರಣೆ:

ತೋಟಗಾರಿಕೆ ಬೆಳೆಗಳ ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣ ಯೋಜನೆಯಡಿ, ಸಸ್ಯ ಸಂರಕ್ಷಣಾ ಔಷಧಿಗಳ ಖರೀದಿಗಾಗಿ ಪ್ರತಿ ಹೆಕ್ಟೇರ್‌ಗೆ ತಗಲುವ ಘಟಕ ವೆಚ್ಚದ ಶೇ. 75 ರಂತೆ ಸಾಮಾನ್ಯ ವರ್ಗದ ರೈತರಿಗೆ ತಲಾ 7,500 ರು.ಗಳನ್ನು, ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ತಲಾ 9000 ರು.ಗಳ ಸಹಾಯಧನ ನೀಡಲಾಗುತ್ತಿದೆ.

ಮರು ನಾಟಿ- ರೈತರಿಗೆ ತರಬೇತಿ:

ತೆಂಗಿನ ತೋಟಗಳ ಪುನಶ್ಚೇತನ, ಮರು ನಾಟಿ ಮತ್ತು ನಿರ್ವಹಣೆಗಾಗಿ ಒಂದು ಹೆಕ್ಟೇರ್‌ ಪ್ರದೇಶದ ನಿರ್ವಹಣೆಗೆ ತಗಲುವ ವೆಚ್ಚ 1.10 ಲಕ್ಷ ರು.ಗಳಲ್ಲಿ 53,500 ರು.ಗಳನ್ನು ರೈತರಿಗೆ ನೀಡಲಾಗುತ್ತಿದೆ. ಕೀಟಗಳ ನಿರ್ವಹಣೆ ಬಗ್ಗೆ ಪ್ರಾತ್ಯಕ್ಷಿಕೆ ಕೈಗೊಳ್ಳಲು ಸಹಾಯಧನ ವಿತರಿಸಲಾಗುತ್ತಿದೆ. ತೆಂಗಿನ ಬೆಳೆಯಲ್ಲಿ ಕಂಡು ಬರುವ ರೋಗ, ಕೀಟಗಳ ಹತೋಟಿ ಕ್ರಮಗಳ ಕುರಿತು 9784 ರೈತರಿಗಾಗಿ 72 ತರಬೇತಿ ಕಾರ್ಯಕ್ರಮ ನಡೆಸಲಾಗಿದೆ ಎಂದು ಸಚಿವ ಮಲ್ಲಿಕಾರ್ಜುನ್‌ ತಿಳಿಸಿದರು.

ತೋಟಗಾರಿಕೆ ಬೆಳೆಗಳ ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣ ಯೋಜನೆಯಡಿ, ಸಸ್ಯ ಸಂರಕ್ಷಣಾ ಔಷಧಿಗಳ ಖರೀದಿಗಾಗಿ ಪ್ರತಿ ಹೆಕ್ಟೇರ್‌ಗೆ ತಗಲುವ ಘಟಕ ವೆಚ್ಚದ ಶೇ.75 ರಂತೆ ಸಾಮಾನ್ಯ ವರ್ಗದ ರೈತರಿಗೆ ತಲಾ 7,500 ರು.ಗಳನ್ನು, ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ತಲಾ 9000 ರು.ಗಳ ಸಹಾಯಧನ ನೀಡಲಾಗುತ್ತಿದೆ.

Share this article