ಕನ್ನಡಪ್ರಭ ವಾರ್ತೆ ಅರಸೀಕೆರೆ
ತೋರಿಕೆ, ಪ್ರಚಾರಕ್ಕಾಗಿ ಜನಸೇವೆ ಮಾಡುವ ಮಂದಿಗಳ ಸಂಖ್ಯೆ ಹೆಚ್ಚಾಗಿ ಕಾಣುತ್ತಿರುವ ನಡುವೆ ತಾಲೂಕು ಕರವೇ ಘಟಕದ ಉಪಾಧ್ಯಕ್ಷ ಗಂಗಾಧರ ನಾಯ್ಕ ತಮ್ಮ ವೈಯಕ್ತಿಕ ಸಂಪಾದನೆಯ ಒಂದಿಷ್ಟು ಭಾಗವನ್ನು ಪ್ರತಿವರ್ಷ ಗ್ರಾಮೀಣ ಭಾಗದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ಗಳು ಹಾಗೂ ಪರಿಕರಗಳು ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ನಿರ್ದೇಶಕ ರಾಮಚಂದ್ರು ಮೆಚ್ಚುಗೆ ವ್ಯಕ್ತಪಡಿಸಿದರು. ತಾಲೂಕಿನ ಮುದುಡಿ ಗ್ರಾಮದ ಸರ್ಕಾರಿ ಪ್ರಾಥಮಿಕ ಹಿರಿಯ ಹಾಗೂ ಕಿರಿಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 98 ವಿದ್ಯಾರ್ಥಿಗಳಿಗೆ ಗಂಗಾಧರ್ ನಾಯ್ಕ ಮತ್ತು ಅವರ ಸ್ನೇಹಿತರ ಬಳಗದ ವತಿಯಿಂದ ಶಾಲೆಗೆ ಡ್ರಮ್ ಸೆಟ್ ಹಾಗೂ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳು ಸೇರಿದಂತೆ ವಿದ್ಯಾಭ್ಯಾಸಕ್ಕೆ ಬೇಕಾದಂತ ಪರಿಕರಗಳನ್ನು ವಿತರಿಸುವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಅವಕಾಶವಿದ್ದಾಗ ಜನರ ಸೇವೆ ಸಂಪತ್ತು ಇದ್ದಾಗ ದಾನ ಧರ್ಮ ಮಾಡುವ ಮನಸ್ಥಿತಿ ಹೊಂದಿರುವ ಮನುಷ್ಯನ ಬದುಕು ಜನ ಮಾತ್ರ ಅಲ್ಲ ಜನಾರ್ಧನನು ಒಪ್ಪುತ್ತಾನೆ. ಅಂತಹ ಆದರ್ಶ ಪೂರ್ಣ ವ್ಯಕ್ತಿತ್ವ ಹೊಂದಿರುವ ಗಂಗಾಧರ ನಾಯ್ಕ ಮತ್ತು ಅವರ ಸ್ನೇಹಿತರ ಬಳಗದ ಕಾರ್ಯವೈಖರಿ ಸಮಾಜಮುಖಿ ಚಿಂತನೆ ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾಜ ಸೇವಕ ಹಾಗೂ ತಾಲೂಕು ಕರವೇ ಉಪಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ, ರೈತಾಪಿ ಕುಟುಂಬ ನನ್ನದು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ಪ್ರತಿಭಾವಂತ ಬಡ ವಿದ್ಯಾರ್ಥಿಗಳ ನೋವು ನಲಿವನ್ನ ಹತ್ತಿರದಿಂದ ಬಲ್ಲವನಾಗಿದ್ದೇನೆ. ಹಾಗಾಗಿ ಆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವುದು ಪೋಷಕರು ಹಾಗೂ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಪ್ರಗತಿಪರ ಸಂಘಟನೆಗಳು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ವ್ಯಾಪಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಮುಂದಾಗಬೇಕಿದೆ ಎಂದರು. ಸಮಾರಂಭದಲ್ಲಿ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ದ್ಯಾವೇಗೌಡ, ಮುದುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೋಕ್ಷ ಶಂಭುಲಿಂಗೇಗೌಡ, ಮಾಜಿ ಅಧ್ಯಕ್ಷರಾದ ಜಯ ಕುಮಾರ್,ಶಿವಪ್ಪ, ಆಂಜನೇಯ ಸೇವಾ ಟ್ರಸ್ಟಿನ ಜಯಸಿಂಹ ಮುಖಂಡರಾದ ಶಿವಕುಮಾರ್, ಜಯಣ್ಣ, ಪ್ರದೀಪ, ಅಭಿ, ಸಂಜೀವ ಮತ್ತಿತರರು ಉಪಸ್ಥಿತರಿದ್ದರು.