ಕನ್ನಡಪ್ರಭ ವಾರ್ತೆ ರಾಮನಗರ
ನಗರದ ಎಂ.ಎಚ್ ಕಾನೂನು ಕಾಲೇಜಿನಲ್ಲಿ ನವದೆಹಲಿಯ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರಿನ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ, ಜಿಲ್ಲಾ ವಕೀಲರ ಸಂಘ ಹಾಗೂ ಎಂ.ಎಚ್ ಕಾನೂನು ಕಾಲೇಜಿನ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ದೇಶದ ಹಲವೆಡೆ ಉಚಿತ ಕಾನೂನು ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರ ಉದ್ದೇಶ ಸಮಾಜದ ದುರ್ಬಲ ವರ್ಗಗಳಿಗೆ ಉಚಿತ ಕಾನೂನು ಸೇವೆಗಳ ನೆರವು ನೀಡುವುದಾಗಿದೆ. ಮಹಿಳೆಯರು, ವಿಕಲಚೇತನರು, ಪರಿಶಿಷ್ಟ ಜಾತಿ, ಪಂಗಡದವರು, ಮಕ್ಕಳು ಹಾಗೂ ನೈಸರ್ಗಿಕ ವಿಕೋಪಕ್ಕೊಳಗಾಗಿ ನೊಂದವರಿಗೆ ಕಾನೂನಿನ ನೆರವನ್ನು ನೀಡಿ, ಆ ಮೂಲಕ ಅವರಿಗೆ ಆತ್ಮವಿಶ್ವಾಸ ತುಂಬಿ ಕಾನೂನಾತ್ಮಕ ಪರಿಹಾರ ಕಲ್ಪಿಸಿಕೊಡುವ ಕೆಲಸ ಮಾಡಲಾಗುತ್ತಿದೆ ಎಂದರು.1995ರ ನವೆಂಬರ್ 9 ರಂದು ಸುಪ್ರೀಂ ಕೋರ್ಟ್ ಭಾರತದ ಕಾನೂನು ಸೇವಾ ಪ್ರಾಧಿಕಾರ ಕಾಯ್ದೆಯನ್ನು ಅಂಗೀಕರಿಸಿತು. ಭಾರತೀಯ ಸಂವಿಧಾನದ 39 ಎ ವಿಧಿಯ ಅಡಿಯಲ್ಲಿ ಭಾರತದ ಸಂಸತ್ತು, ಕಾನೂನು ಸೇವೆಗಳ ಪ್ರಾಧಿಕಾರ ಕಾಯ್ದೆ-1987 ಅನ್ನು ಅಂಗೀಕರಿಸಿ, 1995ರ ನವೆಂಬರ್ 9 ರಂದು ಜಾರಿಗೆ ತಂದಿತು.
ಕಾನೂನು ಸೇವೆಗಳ ಪ್ರಾಧಿಕಾರ ಕಾಯ್ದೆ-1987, ಸಮಾನ ಅವಕಾಶದ ಆಧಾರದ ಮೇಲೆ ನ್ಯಾಯವನ್ನು ಒದಗಿಸಿ, ಆರ್ಥಿಕ ಅಥವಾ ಅಂಗ ವೈಫಲ್ಯಗಳ ಕಾರಣದಿಂದ ಯಾವುದೇ ವ್ಯಕ್ತಿಯು ನ್ಯಾಯ ಪಡೆಯುವ ಪ್ರಕ್ರಿಯೆಯಿಂದ ಹೊರಗೆ ಉಳಿಯುವುದಿಲ್ಲ ಎನ್ನುವುದನ್ನು ಖಚಿತಪಡಿಸುತ್ತದೆ. ಪ್ರಕರಣಗಳನ್ನು ಸೌಹಾರ್ದಯುತವಾಗಿ ಬಗೆಹರಿಸಲು ಅನುಕೂಲವಾಗುವಂತೆ ಲೋಕ ಅದಾಲತ್‌ಗಳನ್ನು ಸ್ಥಾಪಿಸಿ, ಅವುಗಳ ಮುಖಾಂತರ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಹಾಗೂ ಸಮಾಜದ ಇತರೆ ದುರ್ಬಲ ವರ್ಗಗಳಿಗೆ ಉಚಿತ ಕಾನೂನು ನೆರವು ನೀಡಲು ಪ್ರಾಧಿಕಾರವನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಪಿ.ಆರ್. ಸವಿತಾ ಮಾತನಾಡಿ, ದುರ್ಬಲ ವರ್ಗದವರಿಗೆ ಕಾನೂನಿನ ಸೇವೆಯನ್ನು ಒದಗಿಸುವುದು, ಆ ಮೂಲಕ ಸಮಾಜದಲ್ಲಿ ನ್ಯಾಯ ಪಡೆಯುವ ಹಕ್ಕನ್ನು ನ್ಯಾಯಯುತವಾಗಿ ಎಲ್ಲರಿಗೂ ಕಲ್ಪಿಸಿಕೊಡುವುದು ಈ ದಿನಾಚರಣೆಯ ಉದ್ದೇಶವಾಗಿದೆ ಎಂದರು.
ಎಂ.ಎಚ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಎಚ್. ಚಂದ್ರಶೇಖರ್, ಪ್ರಾಂಶುಪಾಲ ಕೆ.ಎಂ. ಗಂಗರಾಜ , ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರಾದ ವಿ. ಚಂದ್ರಶೇಖರ್, ಕಾರ್ಯದರ್ಶಿ ತಿಮ್ಮೇಗೌಡ ಎಸ್, ಖಜಾಂಚಿ ಮಂಜೇಶ್ ಗೌಡ ಉಪಸ್ಥಿತರಿದ್ದರು.