ಅರಸೀಕೆರೆಯಲ್ಲಿ ಉಚಿತ ಥೈರಾಯಿಡ್‌ ಪರೀಕ್ಷಾ ಕೇಂದ್ರ ಆರಂಭ

KannadaprabhaNewsNetwork | Published : Jun 11, 2024 1:32 AM

ಸಾರಾಂಶ

ತಾಲೂಕಿನಲ್ಲಿ ಉಚಿತ ಥೈರಾಯಿಡ್ ಪರೀಕ್ಷೆ ಕೇಂದ್ರಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ತೆರಯಲಾಗಿದ್ದು ಇದರ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಶಿವಸ್ವಾಮಿ ಹೇಳಿದರು. ಅರಸೀಕೆರೆಯ ಜೆ.ಸಿ.ಆಸ್ಪತ್ರೆಯ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಉಚಿತ ಥೈರಾಯಿಡ್ ಪರೀಕ್ಷೆಯ ಸೌಲಭ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ಶಿವಸ್ವಾಮಿ ಮಾಹಿತಿ । ಬಡ ವರ್ಗದ ಜನರು ಸೌಲಭ್ಯ ಬಳಸಲು ಮನವಿ । ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಾರಂಭ

ಕನ್ನಡಪ್ರಭ ವಾರ್ತೆ ಅರಸೀಕೆರೆ

ಬಡ ವರ್ಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಉಚಿತ ಥೈರಾಯಿಡ್ ಪರೀಕ್ಷೆ ಕೇಂದ್ರಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ತೆರಯಲಾಗಿದ್ದು ಇದರ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಶಿವಸ್ವಾಮಿ ಹೇಳಿದರು.

ನಗರದ ಜೆ.ಸಿ.ಆಸ್ಪತ್ರೆಯ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅರಸೀಕೆರೆ ತಾಲೂಕು ವ್ಯಾಪ್ತಿಯ ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಸಾರ್ವಜನಿಕರಿಗೆ ಉಚಿತ ಥೈರಾಯಿಡ್ ಪರೀಕ್ಷೆಯ ಸೌಲಭ್ಯಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಮಾತನಾಡಿದರು.

ಥೈರಾಯಿಡ್ ಪರೀಕ್ಷೆಯು ಹೆಚ್ಚಾಗಿ ಗರ್ಭಿಣಿಯರಿಗೆ ಸಹಕಾರಿಯಾಗಿದ್ದು ಪ್ರತಿ ವರ್ಷ ತಾಲೂಕಿನಲ್ಲಿ ೩೮೦೦ ರಿಂದ ೪ ಸಾವಿರಕ್ಕೂ ಹೆಚ್ಚಿನ ಗರ್ಭೀಣಿಯರಿಗೆ ಇದರ ಅನುಕೂಲವಾಗಲಿದೆ. ಇದರಿಂದ ಗರ್ಭಾವ್ಯವಸ್ಥೆಯಲ್ಲಿ ಮಗುವಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುವುದನ್ನು ತಡೆಗಟ್ಟಬಹುದು. ಥೈರಾಯಿಡ್ ಇದ್ದ ಸಂದರ್ಭದಲ್ಲಿ ವಿಪರೀತ ಆಯಾಸ, ಕೂದಲು ಉದುರುವುದು, ನಡುಕ, ಬೆವರು ಮತ್ತು ಹಸಿವಿನ ಲಕ್ಷಣಗಳಾಗುತ್ತದೆ. ವಿಶ್ವದಲ್ಲಿ ೮ ಮಹಿಳೆಯರಲ್ಲಿ ಒಬ್ಬರಿಗೆ ಈ ಸಮಸ್ಯೆ ಕಾಡುತ್ತಿದ್ದು ಔಷಧಿಗಳನ್ನು ಪಡೆದು ಗುಣಪಡಿಸಿಕೊಳ್ಳಬಹುದು ಎಂದು ತಿಳಿಸಿದರು.

ಕಣಕಟ್ಟೆ ಆಸ್ಪತ್ರೆ ವೈದ್ಯ ರಂಗನಾಥ್ ಮಾತನಾಡಿ, ತಾಲೂಕಿನಲ್ಲಿ ಕಣಕಟ್ಟೆ ಆಸ್ಪತ್ರೆಯಿಂದ ಥೈರಾಯಿಡ್ ಉಚಿತ ಚಿಕಿತ್ಸೆ ಪ್ರಾರಂಭವಾಗಿದೆ. ಹೊರಗೆ ಸಾವಿರ ರು. ಆಗುವ ಪರೀಕ್ಷೆ ಇಲ್ಲಿ ಕೇವಲ ೮೦ ರು. ಆಗಲಿದೆ. ಅಲ್ಲದೆ ಗ್ರಾಮೀಣ ಭಾಗದ ಜನರಿಗೆ ಆರ್ಥಿಕವಾಗಿ ಹೊರೆಯಾಗುವುದನ್ನು ತಪ್ಪಿಸಲು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಉಚಿತವಾಗಿ ಪರೀಕ್ಷೆಗೆ ಮುಂದಾಗಿದ್ದೇವೆ. ಇದರಿಂದ ಸಾರ್ವಜನಿಕರ ಮತ್ತು ಆಸ್ಪತ್ರೆಯ ನಡುವಿನ ಸಂಬಂಧ ಉತ್ತಮಗೊಳ್ಳಲಿದೆ ಎಂದು ತಿಳಿಸಿದರು.

ತಾಲೂಕು ವೈದ್ಯಾಧಿಕಾರಿ ತಿಮ್ಮರಾಜು ಮಾತನಾಡಿ, ಆಶಾ ಕಾರ್ಯಕರ್ತೆಯರು ಹೆಚ್ಚಿನ ಜವಾಬ್ದಾರಿಯಿಂದ ತಮ್ಮ ವ್ಯಾಪ್ತಿಯಲ್ಲಿ ಈ ಬಗ್ಗೆ ಜನರಿಗೆ ಅರಿವು ಮೂಡಿಸಲಿದ್ದಾರೆ. ತಮ್ಮಲ್ಲಿ ಉತ್ತಮ ವೈದ್ಯರಿದ್ದು ಎಲ್ಲಾ ಸೌಲಭ್ಯಗಳು ದೊರೆಯಲಿದೆ ಎಂದರು.

ತಾಲೂಕಿಗೆ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳ ಕೊರತೆ ಇದ್ದು ಇವರ ನೇಮಕವನ್ನು ಮಾಡುವ ನಿಟ್ಟಿನಲ್ಲಿ ಶಾಸಕರು ಗಮನಹರಿಸುವಂತೆ ಪರಮೇಶ್ ಮನವಿ ಮಾಡಿದರು.

ಶಾಸಕ ಕೆ.ಎಂ.ಶಿವಲಿಂಗೇಗೌಡ, ಆಸ್ಪತ್ರೆ ವೈದ್ಯಾಧಿಕಾರಿ ಸುರೇಶ್, ಜಿಲ್ಲಾ ಮಲೇರಿಯಾಧಿಕಾರಿ ನಾಗಪ್ಪ, ಜಿಲ್ಲಾ ಕುಟುಂಬ ಅಧಿಕಾರಿ ಹರೀಶ್, ಸರ್ವೇಕ್ಷಣಾಧಿಕಾರಿ ಶಿವಶಂಕರ್, ಆಶೋಕ್ ಇದ್ದರು.

Share this article