ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಪ್ರಜಾಪ್ರಭುತ್ವದ ಮೂಲ ಸಂವಿಧಾನವಾಗಿದ್ದು, ಸಂವಿಧಾನ ದಿನವೆಂದೇ ನಾವೆಲ್ಲರೂ ಸಂಭ್ರಮಿಸಬೇಕು ಎಂದು ಸೋಮವಾರಪೇಟೆ ತಹಸೀಲ್ದಾರ್ ಎಸ್.ಎನ್.ನರಗುಂದ ಅಭಿಪ್ರಾಯಪಟ್ಟರು. ತಾಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.1950ರ ಜ.26ರಂದು ಸಂವಿಧಾನ ಜಾರಿಯಾಗುತ್ತದೆ. ಹಲವಾರ ಸವಾಲುಗಳು ಮತ್ತು ಕಷ್ಟಗಳ ಹೊರತಾಗಿಯೂ ಸಂವಿಧಾನ ಕರಡು ಸಮಿತಿಯೂ ಅದ್ಭುತವಾದ ಸಂವಿಧಾನವನ್ನು ನೀಡಿದೆ. ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಸೇವೆ ಅಮೋಘವಾದುದು ಎಂದು ಹೇಳಿದರು.
ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ನ್ಯಾಯ ಇವು ಪ್ರಜಾಪ್ರಭುತ್ವದ ನಿಜವಾದ ಸೌಂದರ್ಯಗಳು. ಅಮೆರಿಕದಲ್ಲಿ ಮಹಿಳೆಯರಿಗೆ ಮತದಾನ ಹಕ್ಕು ದೊರೆಯಲು 200 ವರ್ಷಗಳೇ ಬೇಕಾಯಿತು. ಆದರೆ ಭಾರತದಲ್ಲಿ ಸಂವಿಧಾನ ಜಾರಿಗೆ ಬಂದ ದಿನವೇ ಮತದಾನದ ಹಕ್ಕು ಎಲ್ಲರಿಗೂ ಲಭಿಸಿದೆ. ಭಾರತೀಯರಾದ ನಾವೆಲ್ಲಾ ಸಂವಿಧಾನ ನಿಯಮಗಳನ್ನು ಉಲ್ಲಂಘಿಸಬಾರದು ಪಾಲಿಸಬೇಕು ಎಂದು ಹೇಳಿದರು.ಭಾರತಕ್ಕೆ ಸಂವಿಧಾನವನ್ನು ರಚಿಸಿಕೊಟ್ಟ ಕರಡು ಸಮಿತಿಯ ಅಧ್ಯಕ್ಷ ಡಾ.ಅಂಬೇಡ್ಕರ್ ಅವರ ಅದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕಾಗಿದೆ ಎಂದು ಮುಖ್ಯ ಭಾಷಣಕಾರರಾದ ವಕೀಲ ಬಿ.ಈ.ಜಯೇಂದ್ರ ಹೇಳಿದರು.ಸಂವಿಧಾನ ಜಾರಿಯಾದ ದಿನದಿಂದ ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಮೂಲಭೂತ ಹಕ್ಕುಗಳು ಸಿಕ್ಕಿವೆ. ಈ ದೇಶದ ಪ್ರಜೆಗಳಾಗಿ ಕರ್ತವ್ಯಗಳನ್ನು ಪಾಲಿಸಬೇಕು. ಅಂಬೇಡ್ಕರ್ ಅವರ ಜಾತ್ಯಾತೀಯ ರಾಷ್ಟ್ರದ ಕನಸ್ಸನ್ನು ನಾವುಗಳು ನನಸು ಮಾಡಬೇಕು ಎಂದು ಹೇಳಿದರು.
ರಾಷ್ಟ್ರೀಯ ಹಬ್ಬಗಳ ಸಮಿತಿ ಸದಸ್ಯ ಎಚ್.ಸಿ.ನಾಗೇಶ್ ಮಾತನಾಡಿ, ದೇಶಕ್ಕೆ ಪರಿಪೂರ್ಣ ಸ್ವಾತಂತ್ರ್ಯ ಸಿಕ್ಕಿದೆ. ಪ್ರತಿಯೊಬ್ಬ ನಾಗರಿಕನು ಸಂವಿಧಾನದ ಪ್ರತಿಫಲವನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಸಂವಿಧಾನವನ್ನು ಬರೆದ ಡಾ.ಅಂಬೇಡ್ಕರ್ ಅವರನ್ನು ಕೆಳ ಸಮುದಾಯದವರು ಮಾತ್ರ ನೆನೆದು ಪೂಜಿಸುವಂತಾಗಿದೆ. ಇದು ದೇಶದ ದುರಂತ ಎಂದು ವಿಶ್ಲೇಷಿಸಿದರು. 5ನೇ ತರಗತಿಯ ಪಠ್ಯದಿಂದಲೇ ಅಂಬೇಡ್ಕರ್ ಪಠ್ಯ ಬರಬೇಕು. ಸಂವಿಧಾನವೂ ಪಠ್ಯವಾಗಬೇಕು ಎಂದು ಅಭಿಪ್ರಾಯಿಸಿದರು.ಕಾರ್ಯಕ್ರಮದಲ್ಲಿ ಕ್ಯಾಪ್ಟನ್ ಪಿ.ಎನ್. ಮುತ್ತಪ್ಪ, ಹವಲ್ದಾರ್ ಪೌತಿ ಬಿ.ವಿ.ನಾರಾಯಣ ಅವರ ಪತ್ನಿ ಎನ್. ಶಶಿಕಲಾ ರೈ ಅವರನ್ನು ಸನ್ಮಾನಿಸಲಾಯಿತು.
ಪೊಲೀಸ್, ಜೈ ಜವಾನ್ ಮಾಜಿ ಸೈನಿಕರ ಸಂಘ ಹಾಗೂ ಶಾಲಾ ವಿದ್ಯಾರ್ಥಿಗಳ ತಂಡ ಗೌರವ ರಕ್ಷೆ ನಡೆಯಿತು. ಕುವೆಂಪು ಶಾಲಾ ವಿದ್ಯಾರ್ಥಿನಿಯರು ರಾಷ್ಟ್ರಗೀತೆ, ಮಸಗೋಡು ಚನ್ನಮ್ಮ ಶಾಲಾ ವಿದ್ಯಾರ್ಥಿನಿಯರು ವಂದೇ ಮಾತರಂ, ಕ್ರಿಯೇಟಿವ್ ಶಾಲಾ ಅಕಾಡೆಮಿ ವಿದ್ಯಾರ್ಥಿಗಳು ನಾಡಗೀತೆ, ಸಾಂದೀಪನಿ ಶಾಲಾ ವಿದ್ಯಾರ್ಥಿಗಳು ರೈತಗೀತೆ ಹಾಡಿದರು. ವಿದ್ಯಾರ್ಥಿಗಳ ನೃತ್ಯ ಕಾರ್ಯಕ್ರಮ ಮನರಂಜಿಸಿತು.ವೇದಿಕೆಯಲ್ಲಿ ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಿ.ಎಸ್. ಗೀತಾ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಸ್.ಡಿ.ವಿಜೇತ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯರಾದ ಎನ್.ಎನ್. ರಮೇಶ್, ಚಂದ್ರಿಕಾ ಕುಮಾರ್, ಕವನ್ ಕಾರ್ಯಪ್ಪ, ಬಿಇಒ ಭಾಗ್ಯಮ್ಮ, ಇಒ ಜಯಣ್ಣ, ಸಿಒ ನಾಚಪ್ಪ, ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಪ್ರದೀಪ್, ಪ್ರಾಂಶುಪಾಲ ಬೆಳ್ಳಿಯಪ್ಪ ಮತ್ತಿತರರು ಇದ್ದರು.